Bengaluru Traffic: ಮೆಟ್ರೋ ಕಾಮಗಾರಿ: ಇಂದಿನಿಂದ ಒಂದು ವಾರ ಈ ಮಾರ್ಗದಲ್ಲಿ ನಿಧಾನಗತಿಯ ಸಂಚಾರ
ಬೆಂಗಳೂರು, ಜುಲೈ 24: ಮೆಟ್ರೋ ಕಾಮಗಾರಿ ವೇಗ ಪಡೆದುಕೊಂಡಿದ್ದು, ಹೊಸ ಮಾರ್ಗಗಳ ಕಾಮಗಾರಿ ಶುರುವಾಗಿದೆ. ಇದರಿಂದಾಗಿ ನಗರದ ಹಲವು ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಉಂಟಾಗಿದೆ. ಈಗ ನೀಲಿ (ಬ್ಲ್ಯೂ ಲೈನ್) ಮಾರ್ಗದ ಪಿಲ್ಲರ್ ಕೆಲಸ ಶುರುವಾಗಿದ್ದು, ದೇವರಬೀಸನಹಳ್ಳಿ ಬಳಿ ನಿಧಾನಗತಿಯ ಸಂಚಾರ ಇರಲಿದೆ.
ದೇವರಬೀಸನಹಳ್ಳಿ ಮೇಲ್ಸೇತುವೆ ಬಳಿ ಮೆಟ್ರೊ ಪಿಲ್ಲರ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಸೋಮವಾರದಿಂದ ಬೆಳಗ್ಗೆ ಮತ್ತು ಸಂಜೆಯ ದಟ್ಟಣೆಯ ವೇಳೆಯಲ್ಲಿ ನಿಧಾನಗತಿಯ ಸಂಚಾರಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

ಮೆಟ್ರೋ ಕಾಮಗಾರಿಯು ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಕೆಆರ್ ಪುರ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಹೊರ ವರ್ತುಲ ರಸ್ತೆ (ORR) ಅಥವಾ ನೀಲಿ ಮಾರ್ಗದ ಭಾಗವಾಗಿದೆ.
Traffic Advisory BMRCL piller work has been started near Devarabeesanahalli flyover,from tomorrow traffic movement from kaadubeesanahalli to D B Halli will be slow,work might take a while to complete,commuters please co operate with us TQ. @DCPTrEastBCP @Jointcptraffic pic.twitter.com/Ar5QlDBZJD
— HAL AIRPORT TRAFFIC BTP (@halairporttrfps) July 23, 2023
ತಾತ್ಕಾಲಿಕ ಬ್ಯಾರಿಕೇಡ್ ಅಳವಡಿಕೆ
ಎಚ್‌ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸರು ಕಾಡುಬೀಸನಹಳ್ಳಿಯ ಸರ್ವೀಸ್ ಮತ್ತು ಮುಖ್ಯ ರಸ್ತೆಗಳಲ್ಲಿ ತಾತ್ಕಾಲಿಕ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಇಂದಿನಿಂದ ಒಂದು ವಾರಗಳವರೆಗೆ ನಿಧಾನಗತಿಯ ಸಂಚಾರ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಪೀಕ್ ಸಮಯದಲ್ಲಿ ನಿಧಾನಗತಿಯ ಸಂಚಾರ ಇರಲಿದೆ ಎಂದು ಪೊಲೀಸರು ಸೂಚನೆ ನೀಡಿದ್ದಾರೆ.
ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಇಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಇರಲಿದೆ. ವಿಶೇಷವಾಗಿ ಇಕೋಸ್ಪೇಸ್ ಮತ್ತು ಇಕೋವರ್ಲ್ಡ್ ಸುತ್ತಲೂ ಸಮಸ್ಯೆಯಾಗಲಿದೆ. ಹಲವು ಟ್ಯಾಕ್ಸಿಗಳು, ದ್ವಿಚಕ್ರ ವಾಹನ ಮತ್ತು ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ಕಾರಣ, ಸರ್ವಿಸ್ ರಸ್ತೆಗಳಲ್ಲಿ ವಾಹನ ನಿಲ್ಲಿಸದಂತೆ ಮನವಿ ಮಾಡಿದ್ದಾರೆ.
ಮಾರತ್ತಹಳ್ಳಿಯಿಂದ ದೇವರಬೀಸನಹಳ್ಳಿ ಕಡೆಗೆ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಮುನೇಕೊಳ್ಳಾಲ ಮತ್ತಿತರ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನಗಳ ಓಡಾಟ ನಮ್ಮ ಆದ್ಯತೆಯಾಗಿದ್ದು, ಕೆಲ ನಿಮಿಷ ನಿಲುಗಡೆ ಮಾಡಿದರೆ ಕಿಲೋಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡಿಹೆಚ್ ವರದಿ ಮಾಡಿದೆ.
ಮಳೆಗಾಲದಲ್ಲಿ ಟ್ರಾಫಿಕ್ ಸೂಚನೆ
ಭಾನುವಾರ ನಗರದಲ್ಲಿ ಉತ್ತಮ ಮಳೆಯಾಗಿದ್ದು ಹಲವು ಕಡೆಗಳಲ್ಲಿ ಸಂಚಾರ ಸಮಸ್ಯೆ ಉಂಟಾಗಿತ್ತು. ಸೋಮವಾರ ಕೂಡ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಹಲವು ಕಡೆಗಳಲ್ಲಿ ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆಯಾಗುತ್ತಿದೆ.
ಸಂಜೆ ಸಮಯದಲ್ಲಿ ನಗರದ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡಲಾಗಿದೆ. ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ನೀರು ತುಂಬಿಕೊಳ್ಳುವ ಅಂಡರ್ ಪಾಸ್‌ಗಳನ್ನು ತಪ್ಪಿಸುವಂತೆ ಕೋರಲಾಗಿದೆ.












Click it and Unblock the Notifications