ಸಬ್ ಅರ್ಬನ್ ರೈಲು ಬೆಂಗಳೂರು ವಾಹನ ದಟ್ಟಣೆಗೆ ಪರಿಹಾರ: ಪಿಯೂಷ್ ಗೋಯಲ್
ನವದೆಹಲಿ, ಫೆಬ್ರವರಿ 13: ಬೆಂಗಳೂರು ನಗರದ ವಾಹನ ದಟ್ಟಣೆಯನ್ನು ಸಬ್ ಅರ್ಬನ್ ರೈಲಿನ ಮೂಲಕ ಪರಿಹರಿಸಬಹುದು ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.
'ಎಎನ್ಐ' ಸುದ್ದಿ ಸಂಸ್ಥೆ ಆಯೋಜಿಸಿದ್ದ ಇನ್ಫ್ರಾಕಾನ್ 2018ರಲ್ಲಿ ಮಾತನಾಡಿದ ಅವರು, ಈ ಯೋಜನೆಯನ್ನು ಬೇಗ ಪೂರ್ಣಗೊಳಿಸುವುದರಿಂದ ಸಮಯದ ಜತೆಗೆ ಹಣವೂ ಉಳಿತಾಯವಾಗಲಿದೆ ಎಂದು ವಾದಿಸಿದ್ದಾರೆ.
"ಸೆಪ್ಟಂಬರ್ 18ರಂದು ನಾವು ಬೆಂಗಳೂರಿಗೆ ಭೇಟಿ ನೀಡಿದೆವು. ಅಕ್ಟೋಬರ್ 18ರಂದು ಅಂದರೆ ಮೂವತ್ತು ದಿನಗಳ ಒಳಗೆ ಈ ಯೋಜನೆಯನ್ನು ಹೇಗೆ ಜಾರಿಗೆ ತರಬಹುದು ಎಂಬ ನೀಲಿನಕ್ಷೆ ನನ್ನ ಮುಂದಿತ್ತು," ಎಂದು ಅವರು ವಿವರಿಸಿದ್ದಾರೆ.

ಸಬ್ ಅರ್ಬನ್ ರೈಲಿಗೆ ಎಲಿವೇಟೆಡ್ ರೈಲ್ವೇ ಸಂಪರ್ಕ ಜಾಲವನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಯೋಜನೆಗೆ ಸ್ವಾಧೀನ ಪಡಿಸಿಕೊಳ್ಳಬೇಕಾದ ಭೂಮಿಯ ಹಣ ಉಳಿತಾಯವಾಗಲಿದೆ. ಜತೆಗೆ ಸಮಯವೂ ಉಳಿತಾಯವಾಗಲಿದೆ. ಸಬ್ ಅರ್ಬನ್ ರೈಲ್ವೇಯ 160ಕಿಲೋಮೀಟರ್ ಗಳಲ್ಲಿ 68 ಕಿಲೋಮೀಟರ್ ನ್ನು ಎಲೆವೇಟೆಡ್ ಮಾಡಲು ನಿರ್ಧರಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈಗಿನ ವಿನ್ಯಾಸದ ಪ್ರಕಾರ 15 ಎಕರೆ ಭೂಮಿ ಬೇಕಾಗಿದೆ. ಕಡಿಮೆ ಜಮೀನು ಸ್ವಾಧೀನಕ್ಕೆ ನಿರ್ಧರಿಸಿದ್ದರಿಂದ ಯೋಜನೆಯ ಖರ್ಚಿನಲ್ಲಿ ರೂ. 1200 ಕೋಟಿ ಉಳಿತಾಯವಾಗಿದೆ ಎಂದು ಅವರು ಹೇಳಿದ್ದಾರೆ.
ಸಬ್ ಅರ್ಬನ್ ರೈಲಿನಲ್ಲಿ ಪ್ರತಿದಿನ 25-30 ಲಕ್ಷ ಜನರು ಪ್ರಯಾಣಿಸಬಹುದಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
ಇನ್ನು 2018ರಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಸಬ್ ಅರ್ಬನ್ ರೈಲು ಯೋಜನೆಗೂ ಸಂಬಂಧವಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications