Bengaluru Rain: ಸೋಮವಾರ ರಾತ್ರಿ ಜೋರು ಮಳೆ ಸಾಧ್ಯತೆ, ಆ. 11ರವರೆಗೆ ಮಳೆ
ಬೆಂಗಳೂರು, ಆಗಸ್ಟ್ 07: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದ ಸಹ ವ್ಯಾಪಕ ಮಳೆ ಸಾಧ್ಯತೆ ಇದೆ. ಮುಂದಿನ ಮೂರು ಗಂಟೆಗಳಲ್ಲಿ ಇಲ್ಲವೇ ರಾತ್ರಿ ಹೊತ್ತಿಗೆ ನಗರದಲ್ಲಿ ಜೋರು ಮಳೆ ನಿರೀಕ್ಷೆ ಇದೆ. ನಾಳೆಯಿಂದ ನಾಲ್ಕು ದಿನ ಅಂದರೆ ಆಗಸ್ಟ್ 11ವರೆಗೆ ತುಂತುರು ಮಳೆ ಸಂಭವವಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ವರದಿ ಮಾಹಿತಿ ನೀಡಿದೆ.
ಮುಂಗಾರು ಆರಂಭವಾದಾಗಿನಿಂದ ನಗರದಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಮಳೆ ದಾಖಲಾಗಿದೆ. ಆದರೆ ಪ್ರತಿ ವರ್ಷ ಆಗಸ್ಟ್ ತಿಂಗಳು ಹೊತ್ತಿಗಾಗಲೇ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಿರುತ್ತಿತ್ತು. ಈ ಭಾರಿ ಮುಂಗಾರು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಅಷ್ಟಾಗಿ ಸಕ್ರಿಯವಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಕೆಲವು ದಿನಗಳ ನಂತರ ಭಾನುವಾರದಿಂದ ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ ಕಂಡು ಬಂದಿದೆ. ಇದು ಪ್ರತಿ ವರ್ಷದಂತೆ ಈ ಬಾರಿ ಆಗಸ್ಟ್‌ನಲ್ಲಿ ಉತ್ತಮ ಮಳೆಯ ಸೂಚನೆ ಆಗಿರಬಹುದು. ನೆನ್ನೆ ಆಗಸ್ಟ್ 06ರಂದು ನಗರದ ಬಿಬಿಎಂಪಿ ವ್ಯಾಪ್ತಿಯ ಪಶ್ಚಿಮ ವಲಯದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಈ ಪೈಕಿ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಕೆಲ ಹೊತ್ತು ಬಿರುಸಿನ ಮಳೆ ದಾಖಲಾಗಿದೆ.
ನಗರದ ತಪಮಾನ ಹೇಗಿರಲಿದೆ?
ನಗರದಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಇಲ್ಲವೇ ಇಂದು ರಾತ್ರಿ ಅಲ್ಲಲ್ಲಿ ಜೋರು ಮಳೆ ಆಗಲಿದೆ. ಒಂದೆರಡು ಕಡೆಗಳಲ್ಲಿ ತುಂತುರು ಮಳೆ ಆಗಬಹುದು. ಆಗಸ್ಟ್ 11ರವರೆಗೆ ಹೀಗೆ ಮಳೆ, ಬಿಸಿಲು, ಬೆಳಗ್ಗೆ ಮತ್ತು ಸಂಜೆ ತಂಪು ವಾತಾವರಣ ಕಂಡು ಬರಲಿದೆ. ಈ ವೇಳೆ ಗರಿಷ್ಠ ತಾಪಮಾನ 29 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕ ಹವಾಮಾನ ವರದಿ: ಮಳೆ ಮಾಹಿತಿ
ಅದೇ ರೀತಿ ರಾಜ್ಯದ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವು ಪ್ರದೇಶಗಳಲ್ಲಿ ಸಾಧಾರಣದಿಂದ ಜೋರು ಮಳೆ ಆಗಬಹುದು. ಉಳಿದಂತೆ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಬೀದರ್, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ, ಕೊಡಗಿನಲ್ಲಿ ಆಗಾಗ ಲಘು ಮಳೆ ಇಲ್ಲವೇ ಸಾಧಾರಣ ಮಳೆ ಆಗಬಹುದು ಎಂದು ಐಎಂಡಿ ವರದಿ ತಿಳಿಸಿದೆ.
ಇನ್ನೂ ಕಳೆದ 24 ಗಂಟೆಗಳಲ್ಲಿ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ತಲಾ 5 ಸೆಂಟಿ ಮೀಟರ್ ಮಳೆ ಬಿದ್ದಿದೆ. ಉಳಿದಂತೆ ಕ್ಯಾಸಲ್ ರಾಕ್, ಜಯಪುರ ಸಿದ್ದಾಪುರ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ತಾಳಗುಪ್ಪ, ಲಿಂಗನಮಕ್ಕಿ, ಮಾಗಡಿ, ಲೋಂಡಾ ಹಾಗೂ ಇನ್ನಿತರ ಕಡೆ ಸಾಮಾನ್ಯ ಮಳೆ ಆಗಿದೆ.












Click it and Unblock the Notifications