Bengaluru-Nandi hills electric train start: ಇಂದಿನಿಂದ ನಂದಿ ಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲು ಸಂಚಾರ ಆರಂಭ, ವೇಳಾಪಟ್ಟಿ
ಬೆಂಗಳೂರು, ಡಿಸೆಂಬರ್ 11: ಬೆಂಗಳೂರಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳ ಪೈಕಿ ಪ್ರಮುಖವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಕ್ಕೆ (Nandi Hills) ಇಂದಿನಿಂದ (ಡಿ.11) ಎಲೆಕ್ಟ್ರಿಕ್ ರೈಲು ಸಂಚಾರ ಆರಂಭವಾಗಿದೆ. ಇದು ಬೆಂಗಳೂರಿನಿಂದ ನಂದಿ ಹಿಲ್ಸ್‌ಗೆ ಮತ್ತು ಈ ಭಾಗದತ್ತ ಸಂಚರಿಸುವ ಪ್ರಯಾಣಿಕರ ಖುಷಿಯನ್ನು ಹೆಚ್ಚಿಸಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಬೆಂಗಳೂರು ದಕ್ಷಿಣ ಪಶ್ಚಿಮ ರೈಲ್ವೆ (SWR) ಇಂದು ಡಿಸೆಂಬರ್ 11 ರಿಂದ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ವಿಮಾನ ನಿಲ್ದಾಣದ ಮಾರ್ಗದಲ್ಲಿ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಮೆಮು) ರೈಲುಗಳ ವಿಸ್ತರಣೆ ಮಾಡುವುದಾಗಿ ಘೋಷಿಸಿತ್ತು. ಅದರಂತೆ ಇಂದಿನಿಂದ ಪ್ರತಿ ದಿನ ಮೆಮು ರೈಲು ಸಂಚಾರ ಆರಂಭವಾಗಿದೆ.

ರಾಜಧಾನಿಯಿಂದ ಕೇವಲ 60 ಕಿಲೋ ಮೀಟರ್ ದೂರದಲ್ಲಿರುವ ಪ್ರಸಿದ್ಧ ವಾರಾಂತ್ಯದ ತಾಣವಾದ ನಂದಿ ಹಿಲ್ಸ್‌ಗೆ ಸೋಮವಾರ ಇಂದು ಮೊದಲ ಎಲೆಕ್ಟ್ರಿಕ್ ರೈಲು ತನ್ನ ಸಂಚಾರ ಆರಂಭಿಸಿತು. ಕಳೆದ ವರ್ಷ 2022ರ ಮಾರ್ಚ್ ನಲ್ಲಿ ಯಲಹಂಕ ಮತ್ತು ಚಿಕ್ಕಬಳ್ಳಾಪುರ ಮಧ್ಯೆ ವಿದ್ಯುದ್ದೀಕರಣ ಮುಕ್ತಾಯಗೊಳಿಸಲಾಗಿತ್ತು. ಕೆಲವು ಕಾರಣಗಳಿಂದ ಬೆಂಗಳೂರು-ನಂದಿ ಹಿಲ್ ರೈಲು ಸಂಚಾರ ವಿಳಂಬವಾಯಿತು.
ಎಲ್ಲಿಂದ ಯಾವ ರೈಲು ಸಂಚರಿಸಲಿವೆ: ಗಾಡಿ ಸಂಖ್ಯೆ ಮಾಹಿತಿ
ಮೂಲಗಳ ಪ್ರಕಾರ ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ (ಸಂಕ್ಯೆ-06593/06594) ರೈಲು ಸಂಚರಿಸುತ್ತದೆ. ಅದೇ ರೀತಿ ಬೆಂಗಳೂರು ಕಂಟೋನ್ಮೆಂಟ್ ನಿಂದ ಚಿಕ್ಕಬಳ್ಳಾಪುರ ಮರಳಿ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ರೈಲು (06531/06532 ) ಓಡಾಡಲಿದೆ. ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ ರೈಲೊಂದು (ಸಂಖ್ಯೆ 06535/06538) ಸೇವೆ ನೀಡಲಿದೆ.

16549/16550 ಸಂಖ್ಯೆಯ ರೈಲು ಕೆಎಸ್‌ಆರ್ ಬೆಂಗಳೂರು-ಕೋಲಾರ-ಕೆಎಸ್‌ಆರ್ ಬೆಂಗಳೂರಿಗೆ ಹಾಗೂ 06387/06388 ಸಂಖ್ಯೆಯ ರೈಲು ಕೆಎಸ್‌ಆರ್ ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ ಡೀಸೆಲ್ ಮಲ್ಟಿಪಲ್ ಯುನಿಟ್ (ಡೆಮು) ರೈಲುಗಳು ಸೇವೆ ಪ್ರಸ್ತುತ ನಂದಿ ನಿಲ್ದಾಣದಲ್ಲಿ ನಿಲ್ಲುತ್ತವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿ ಆಗಿದೆ.
ರೈಲು ಸಮಯ ಕಡಿತಕ್ಕೆ ಆಗ್ರಹ
ನಂದಿ ಬೆಟ್ಟದ ತಳದಲ್ಲಿರುವ ಭೋಗನಂದೀಶ್ವರ ದೇವಾಲಯವು ನಂದಿ ನಿಲ್ದಾಣದಿಂದ ಸುಮಾರು 1.4 ಕಿಮೀ ದೂರದಲ್ಲಿ ಇದೆ. ಪ್ರವಾಸಿಗರು ನಂದಿ ಬೆಟ್ಟದ ತುದಿಯನ್ನು ತಲುಪಲು ಹೆಚ್ಚುವರಿಯಾಗಿ 15 ರಿಂದ 18 ಕಿಲೋ ಮೀಟರ್ ಪ್ರಯಾಣಿಸಬೇಕಿದೆ. ನೈಋತ್ಯ ರೈಲ್ವೆಯು ಪ್ರಯಾಣದ ಸಮಯ ಕಡಿತಗೊಳಿಸಲು ಆದ್ಯತೆ ನೀಡಬೇಕು ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.
ಎಲೆಕ್ಟ್ರಕಿಕ್ ರೈಲು ನಿಲುಗಡೆ ಇಲ್ಲದ ನಿಲ್ದಾಣಗಳು ಇವು
ಬೆಂಗಳೂರಿನಿಂದ ಹೊರಡುವ ವಿದ್ಯುತ್ ಚಾಲಿತ ರೈಲಿಗೆ ಬೆಟ್ಟಹಲಸೂರು, ದೊಡ್ಡಜಾಲ, ಚನ್ನಸಂದ್ರದಂತಹ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ. ಹೀಗಾಗಿ ಈ ನಿಲ್ದಾಣಗಳಲ್ಲಿ ರೈಲು ನಿಲ್ಲಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಆದರೆ ರೈಲ್ವೆ ಅಧಿಕಾರಿಗಳು ಸೂಕ್ತ ಕಾರಣ ಸಹಿತಿ ಈ ಭಾಗದಲ್ಲಿ ನಿಲುಗಡೆಯನ್ನು ನಿಷೇಧಿಸಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ಸೌಥ್ ವೆಸ್ಟರ್ನ್ ರೈಲ್ವೆಯು ಈ ಹಿಂದೆ ನಗರದಿಂದ ದೇವನಹಳ್ಳಿ ಮೂಲಕ ಚಿಕ್ಕಬಳ್ಳಾಪುರವನ್ನು ಸಂಪರ್ಕಿಸುವ 108-ವರ್ಷ-ಹಳೆಯ ಹೆರಿಟೇಜ್ ರೈಲು ಮಾರ್ಗದಲ್ಲಿ ಒಂದು ದಿನದ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿತ್ತು. ಇದರಲ್ಲಿ ಪಾರಂಪರಿಕ ನಿಲ್ದಾಣದ ನವೀಕರಣ, ದೇವನಹಳ್ಳಿ ಕೋಟೆಗೆ ಭೇಟಿ ಜೊತೆಗೆ ನಂದಿ ಬೆಟ್ಟಗಳಲ್ಲಿ ಸೂರ್ಯೋದಯ ವೀಕ್ಷಣೆ, ಚಿಕ್ಕಬಳ್ಳಾಪುರದ ಆದಿಯೋಗಿ ಪ್ರತಿಮೆ (ಈಶಾ ಫೌಂಡೇಶನ್) ವೀಕ್ಷಣೆಗಳು ಸೇರಿದ್ದವು.












Click it and Unblock the Notifications