ರಸ್ತೆಗುಂಡಿ ಸಮಸ್ಯೆ: ಇನ್ನೊಂದು ವಾರದಲ್ಲಿ ಬೆಂಗಳೂರಿಗೆ ಗುಡ್‌ನ್ಯೂಸ್: GBA
ಬೆಂಗಳೂರು, ಸೆಪ್ಟಂಬರ್ 21: ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಜೊತೆಗೆ ರಸ್ತೆ ಮೂಲಸೌಕರ್ಯ ಕೊರತೆ ಬಗ್ಗೆ ಸಹ ಜನರು ಬೇಸತ್ತು ಹೋಗಿದ್ದಾರೆ. ಅದರಲ್ಲೂ ಮಳೆ ಬಂತೆಂದರೆ ಸಾಕು ಸವಾರರು ಪಡಬಾರದ ಕಷ್ಟ ಎದುರಿಸುತ್ತಾರೆ. ಇದರ ಬೆನ್ನಲ್ಲೆ ರಸ್ತೆಗುಂಡಿ ಅವಾಂತರಗಳು ಚರ್ಚೆಗೆ ಬರುತ್ತಿದ್ದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಚ್ಚೆತ್ತುಕೊಂಡಿದೆ. ನಗರದಲ್ಲಿ ರಸ್ತೆ ಗುಂಡಿ ಮುಚ್ಚು ಕಾರ್ಯ ಬರದಿಂದ ಸಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶನಿವಾರ ಸೆಪ್ಟಂಬರ್ 20 ರಂದು 4 ವಿಭಾಗಗಳಲ್ಲಿ 9.45 ಕಿ.ಮೀ ಉದ್ದದ ರಸ್ತೆ ವ್ಯಾಪ್ತಿಯಲ್ಲಿ 178 ಗುಂಡಿಗಳು, 2,332 ಚ.ಮೀ. ವಿಸ್ತೀರ್ಣದ ಪ್ಯಾಚ್ ವರ್ಕ್, ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಭಾನುವಾರ ಅಧಿಕೃತ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ನೆನ್ನೆ ನಡೆದ ಸಭೆಯಲ್ಲಿ ಬೆಂಗಳೂರು ನಗರದಲ್ಲಿ ಗುಂಡಿ ಮುಕ್ತ ರಸ್ತೆಗಳನ್ನಾಗಿಸಲು ಆದೇಶಿಸಿದ್ದರು. ಉಪ ಮುಖ್ಯಮಂತ್ರಿ ಡಿಕ ಶಿವಕುಮಾರ್ ನಿರ್ದೇಶನದಂತೆ ಬೆಂಗಳೂರು ಕೇಂದ್ರ ನಗರಪಾಲಿಕೆ ವ್ಯಾಪ್ತಿಯ 4 ವಿಭಾಗಗಳಲ್ಲಿ ರಸ್ತೆಗುಂಡಿ ಮುಚ್ಚಲಾಗುತ್ತಿದೆ.
ಈ ನಾಲ್ಕು ವಿಭಾಗಗಳಲ್ಲಿ 9.45 ಕಿಲೋ ಮೀಟರ್ ಉದ್ದದ ರಸ್ತೆ ವ್ಯಾಪ್ತಿಯಲ್ಲಿ 178 ಗುಂಡಿಗಳು, 2332 ಚ.ಮೀ. ವಿಸ್ತೀರ್ಣದ ಪ್ಯಾಚ್ ವರ್ಕ್ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಉಳಿದ ಸ್ಥಳಗಳಲ್ಲಿ ತ್ವರಿತ ಗತಿಯಲ್ಲಿ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಎಲ್ಲೆಲ್ಲಿ ರಸ್ತೆ ದುರಸ್ತಿ ಆಗಿದೆ?
ಹೊಸೂರು ರಸ್ತೆ, ಬೈರಸಂದ್ರ ಎಂಟನೇ ಮುಖ್ಯರಸ್ತೆ, ಆರ್ಮುಗಮ್ ವೃತ್ತ, ಸಜ್ಜನ್ ರಾವ್ ವೃತ್ತ, ವಿಲ್ಸನ್ ಗಾರ್ಡ್‌ನ್ 12ನೇ ಕ್ರಾಸ್, ಆದರ್ಶ ರಸ್ತೆಯಿಂದ ಎಂಜಿ ಪಾರ್ಕ್, ಜಿ.ಎಂ.ಪಾಳ್ಯ, ಎಂ.ಎಂ.ರಸ್ತೆ, ಮಿಲ್ಲರ್ಸ್ ರಸ್ತೆ ಸೇರಿದಂತೆ ವಿವಿಧೆಡೆ ಹಾಳಾಗಿದ್ದ ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ. ರಸ್ತೆಗುಂಡಿಗಳನ್ನು ಡಾಂಬರ್ ಹಾಕಿ ಮುಚ್ಚಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications