Bengaluru: 15ನೇ ವಯಸ್ಸಿನಲ್ಲಿ ಟೈಂಪಾಸ್‌ಗೆ ನಿರ್ಮಿಸಿದ ಡ್ರೋನ್: ಇದೀಗ 37 ಮಿಲಿಯನ್ ಡಾಲರ್ ಮೌಲ್ಯದ ಯುವಕನ ಸ್ಟಾರ್ಟ್ಅಪ್

ನಮನ್ ಪುಷ್ಪ್ ಎನ್ನುವ 21 ವರ್ಷದ ಯುವಕ ಲಾಕ್‌ಡೌನ್ ಸಮಯದಲ್ಲಿ ಸುಮ್ಮನೆ ಕಾಲಹರಣ ಮಾಡಲು ನಿರ್ಮಿಸಿದ ಒಂದು ಪುಟ್ಟ ಡ್ರೋನ್, ಇದೀಗ ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹೌದು, ಬೆಂಗಳೂರು ಮೂಲದ 'ಏರ್‌ಬೌಂಡ್' ಎಂಬ ಈ ಏರೋಸ್ಪೇಸ್ ಸ್ಟಾರ್ಟ್ಅಪ್ ಇದೀಗ ಗ್ರೀನ್‌ಓಕ್ಸ್ ನೇತೃತ್ವದಲ್ಲಿ ಬರೋಬ್ಬರಿ 37 ಮಿಲಿಯನ್ ಡಾಲರ್ ಅಂದರೆ ಸುಮಾರು ₹310 ಕೋಟಿ ಸೀರೀಸ್ ಎ ಬಂಡವಾಳವನ್ನು ಸಂಗ್ರಹಿಸುವ ಮೂಲಕ ಉದ್ಯಮ ಜಗತ್ತಿನಲ್ಲಿ ಎಲ್ಲರ ಹುಬ್ಬೇರಿಸಿದೆ.

2020ರ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಶಾಲಾ-ಕಾಲೇಜುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಆಗ ಕೇವಲ 15 ವರ್ಷದ ಬಾಲಕನಾಗಿದ್ದ ನಮನ್ ಪುಷ್ಪ್‌ಗೆ ಮನೆಯಲ್ಲಿ ನಾಲ್ಕು ಗೋಡೆಗಳ ನಡುವೆ ಕೂತು ತೀವ್ರ ಬೇಸರವಾಗಿತ್ತು. ಬಾಲ್ಯದಿಂದಲೇ ರೋಬೋಟ್ ತಯಾರಿಕೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಆತ, ಆ ಬಿಡುವಿನ ವೇಳೆಯಲ್ಲಿ ಡ್ರೋನ್ ನಿರ್ಮಿಸುವ ಪ್ರಯೋಗಕ್ಕೆ ಮುಂದಾದ.

Bengaluru Teen Turns Lockdown Drone Project into a 37 Million Startup Airbound Success Story

ಯಾವುದೇ ದೊಡ್ಡ ದೊಡ್ಡ ಬ್ಯುಸಿನೆಸ್ ಪ್ಲಾನ್ ಇಟ್ಟುಕೊಂಡು ಆತ ಈ ಕೆಲಸ ಮಾಡಿರಲಿಲ್ಲ. ಬದಲಿಗೆ, ತನ್ನ ಆ ಪ್ರಾಜೆಕ್ಟ್‌ಗೆ ಓಪನ್ ಡ್ರೋನ್ ಎಂದು ಹೆಸರಿಟ್ಟು ಸ್ಥಳೀಯ ಹ್ಯಾಕಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ. ಅಲ್ಲಿ ಆತನಿಗೆ 500 ಡಾಲರ್‌ ಅಂದರೆ ಸುಮಾರು 42,000 ರೂಪಾಯಿ ಬಹುಮಾನ ಬಂದಿತು.

ಆ ಬಹುಮಾನದ ಹಣವನ್ನೇ ಮರಳಿ ಹೂಡಿಕೆ ಮಾಡಿ ಆತ ಮತ್ತಷ್ಟು ಸುಧಾರಿತ ಡ್ರೋನ್ ನಿರ್ಮಿಸಿದ. ಅಂದು ಆತ ನಿರ್ಮಿಸಿದ ಮೊದಲ ಡ್ರೋನ್ ಇಂದಿಗೂ ಏರ್‌ಬೌಂಡ್ ಕಚೇರಿಯ ಗೋಡೆಯ ಮೇಲೆ ಸ್ಫೂರ್ತಿಯ ಸಂಕೇತವಾಗಿ ರಾರಾಜಿಸುತ್ತಿದೆ.

ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಆಫರ್ ರಿಜೆಕ್ಟ್ ಮಾಡಿದ ನಮನ್

ಮುಂಬೈನಲ್ಲಿ ಜನಿಸಿ, ಮಲೇಷ್ಯಾ ಮತ್ತು ಹೈದರಾಬಾದ್‌ನಲ್ಲಿ ಬಾಲ್ಯ ಕಳೆದ ನಮನ್, ಮುಂಬೈನ ಪ್ರತಿಷ್ಠಿತ ಧೀರೂಭಾಯ್ ಅಂಬಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾನೆ. ಶಾಲೆಯಲ್ಲಿದ್ದಾಗಲೇ ತನ್ನ 16ನೇ ವಯಸ್ಸಿನಲ್ಲಿ ಗ್ರಾಡ್‌ಕ್ಯಾಪಿಟಲ್‌ನಿಂದ ಮೊದಲ ವೆಂಚರ್ ಬಂಡವಾಳ ಪಡೆದಿದ್ದ ನಮನ್‌ಗೆ, ಆತನ ಅಪ್ರಾಪ್ತ ವಯಸ್ಸಿನ ಕಾರಣದಿಂದ ಹೂಡಿಕೆದಾರರು ಆತನ ತಂದೆಯ ಬಳಿ ಮಾತನಾಡಬೇಕಾದ ಪರಿಸ್ಥಿತಿ ಇತ್ತು.

ನಂತರದ ದಿನಗಳಲ್ಲಿ ಆತನಿಗೆ ಅಮೆರಿಕದ ಪ್ರಸಿದ್ಧ ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯದಿಂದ ಪ್ರವೇಶಾವಕಾಶ ಒದಗಿಬಂದಿತ್ತು. ಆದರೆ, ಸಾಂಪ್ರದಾಯಿಕ ಶಿಕ್ಷಣಕ್ಕಿಂತ ಸ್ವಂತವಾಗಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲದಿಂದ, ಆತ ಆ ಒಳ್ಳೆಯ ಆಫರ್ ಅನ್ನ ತಿರಸ್ಕರಿಸಿ 'ಏರ್‌ಬೌಂಡ್' ಕಂಪನಿ ಕಟ್ಟಲು ನಿರ್ಧರಿಸಿದ.

ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ: ನಾರಾಯಣ ಹೆಲ್ತ್‌ಗೆ ಡ್ರೋನ್ ಡೆಲಿವರಿ ಸೇವೆ

ಸಾಮಾನ್ಯ ವಿಮಾನಗಳು ಅಥವಾ ಡ್ರೋನ್‌ಗಳು ತಮ್ಮದೇ ತೂಕವನ್ನು ಹೊರಲು ಹೆಚ್ಚು ಶಕ್ತಿ ವ್ಯಯಿಸುತ್ತವೆ. ಇದರಿಂದಾಗಿ ಸರಕು ಸಾಗಣೆ ದುಬಾರಿಯಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ನಮನ್ ವಿಭಿನ್ನ ವಿನ್ಯಾಸದ ಡ್ರೋನ್ ಅಭಿವೃದ್ಧಿಪಡಿಸಿದ. ಏರ್‌ಬೌಂಡ್ ನಿರ್ಮಿಸಿರುವ 'ಟಿಆರ್‌ಟಿ' ಏರ್‌ಕ್ರಾಫ್ಟ್ ಕೇವಲ 1.5 ಕೆಜಿ ತೂಕವಿದ್ದು, 1 ಕೆಜಿ ತೂಕದ ವಸ್ತುಗಳನ್ನು ಹೊತ್ತೊಯ್ಯಬಲ್ಲದು.

ಈ ತಂತ್ರಜ್ಞಾನವನ್ನ ಬಳಸಿ ಸಂಸ್ಥೆಯು ಬೆಂಗಳೂರು ಮತ್ತು ಗುಂಟೂರು ಪ್ರದೇಶಗಳಲ್ಲಿ 13,000ಕ್ಕೂ ಹೆಚ್ಚು ಸ್ವಯಂಚಾಲಿತ ಹಾರಾಟಗಳನ್ನ ಪೂರ್ಣಗೊಳಿಸಿದೆ.

ವಿಶೇಷವಾಗಿ, ಬೆಂಗಳೂರಿನ ನಾರಾಯಣ ಹೆಲ್ತ್ ಆಸ್ಪತ್ರೆ ಜೊತೆ ಕೈಜೋಡಿಸಿರುವ ಈ ಸ್ಟಾರ್ಟ್ಅಪ್, ಕ್ಲಿನಿಕ್ ಮತ್ತು ಆಸ್ಪತ್ರೆಗಳ ನಡುವೆ 1,000ಕ್ಕೂ ಹೆಚ್ಚು ಬಾರಿ ಯಶಸ್ವಿಯಾಗಿ ರಕ್ತದ ಮಾದರಿಗಳು ಹಾಗೂ ವೈದ್ಯಕೀಯ ವರದಿಗಳನ್ನ ಡ್ರೋನ್ ಮೂಲಕ ರವಾನಿಸಿದೆ.

ದಿನವೊಂದಕ್ಕೆ 20ಕ್ಕೂ ಹೆಚ್ಚು ಬಾರಿ ಕಾರ್ಯಾಚರಿಸುವ ಈ ಸೇವೆ ರಸ್ತೆ ಸಾರಿಗೆಗಿಂತ ಅತ್ಯಂತ ವೇಗ ಮತ್ತು ಅಗ್ಗವಾಗಿದೆ. ಲ್ಯಾಬ್ ಸೌಲಭ್ಯವಿಲ್ಲದ ಬನಶಂಕರಿಯ ಹೊಸ ನಾರಾಯಣ ಆಸ್ಪತ್ರೆಯು ಸಂಪೂರ್ಣವಾಗಿ ಇದೇ ಡ್ರೋನ್ ಸೇವೆಯನ್ನ ಅವಲಂಬಿಸಿದೆ.

ಭಾರಿ ಬಂಡವಾಳ ಹೂಡಿಕೆ

ಪ್ರಸ್ತುತ ಕೇವಲ 21 ವರ್ಷದ ಯುವಕನಾಗಿರುವ ನಮನ್, ಏರ್‌ಬೌಂಡ್ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚಿನ ಹೂಡಿಕೆಯೊಂದಿಗೆ ಒಟ್ಟು 50 ಮಿಲಿಯನ್ ಡಾಲರ್ ಅಂದರೆ ಸುಮಾರು 420 ಕೋಟಿ ರೂಪಾಯಿ ಬಂಡವಾಳ ಹೊಂದಿರುವ ಸಂಸ್ಥೆಯು, ಮುಂದಿನ ದಿನಗಳಲ್ಲಿ ಆಂಧ್ರಪ್ರದೇಶದ ಅಮರಾವತಿ, ವಿಜಯವಾಡ ಹಾಗೂ ಗುಂಟೂರು ನಗರಗಳನ್ನ ಡ್ರೋನ್ ನೆಟ್‌ವರ್ಕ್ ಮೂಲಕ ಬೆಸೆಯುವ ಗುರಿ ಹೊಂದಿದೆ.

ಕಾರ್ಬನ್-ಫೈಬರ್ ಬಳಸಿ ಹಗುರವಾದ ಡ್ರೋನ್‌ಗಳನ್ನ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಸಿದ್ಧತೆ ನಡೆಸಿರುವ ನಮನ್, ಭವಿಷ್ಯದಲ್ಲಿ ದಿನಕ್ಕೆ 10,000ಕ್ಕೂ ಹೆಚ್ಚು ಹಾರಾಟಗಳನ್ನ ನಡೆಸುವ ಮೂಲಕ ಡ್ರೋನ್ ಡೆಲಿವರಿಯನ್ನು ಟ್ರಕ್ ಸಾಗಣೆಯಷ್ಟೇ ಅಗ್ಗವಾಗಿಸುವ ಕನಸು ಕಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+