Atul Subhash: ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಪತ್ನಿ, ಅತ್ತೆಗೆ ಜಾಮೀನು ಮಂಜೂರು
ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾಗಿದ್ದ ಅವರ ಪತ್ನಿ ಹಾಗೂ ಅತ್ತೆಗೆ ಬೆಂಗಳೂರಿನ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ. ಅತುಲ್ ಸುಭಾಷ್ ಡಿಸೆಂಬರ್ 9ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು, ಆತ್ಮಹತ್ಯೆಗೆ ಮುನ್ನ ಪತ್ನಿ ಮತ್ತು ಆಕೆಯ ಕುಟುಂಬದವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ವಿಡಿಯೋ ಕೂಡ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಪೊಲೀಸರು ಸುಭಾಷ್ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ ಮತ್ತು ಸಹೋದರ ಅನುರಾಗ್ ಸಿಂಘಾನಿಯಾರನ್ನು ಬಂಧಿಸಿದ್ದರು. ಬಂಧಿತರು ಜಾಮೀನು ನೀಡುವಂತೆ ಕೋರಿ ಬೆಂಗಳೂರಿನ ಸೆಷನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಜಾಮೀನು ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ಮಾಡುವಂತೆ ಸೆಷನ್ ಕೋರ್ಟ್‌ಗೆ ನಿರ್ದೇಶನ ನೀಡುವಂತೆ ಈ ಹಿಂದೆ ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ಇಂದೇ ಜಾಮೀನು ಅರ್ಜಿಯನ್ನು ವಿಲೇವಾರಿ ಮಾಡುವಂತೆ ಸೆಷನ್ ಕೋರ್ಟ್‌ಗೆ ಹೈಕೋರ್ಟ್ ಸೂಚನೆ ಕೊಟ್ಟಿತ್ತು.
ಡಿಸೆಂಬರ್ 14ರಂದು ನಿಕಿತಾ ಸಿಂಘಾನಿಯಾ ಅವರನ್ನು ಗುರುಗ್ರಾಮದಿಂದ ಬಂಧಿಸಿ ಕರೆತರಲಾಗಿತ್ತು. ಆಕೆಯ ತಾಯಿ ಮತ್ತು ಸಹೋದರ ಅನುರಾಗ್ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಬಂಧಿಸಿ ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ.
ದೇಶಾದ್ಯಂತ ಸದ್ದು ಮಾಡಿದ್ದ ಪ್ರಕರಣ
ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ದೇಶದ ಗಮನ ಸೆಳೆದಿತ್ತು, ದೀರ್ಘಾವಧಿ ವಿಡಿಯೋ ಹಂಚಿಕೊಂಡಿದ್ದ ಅತುಲ್ ಸುಭಾಷ್ ಪತ್ನಿಯಿಂದ ಅನುಭವಿಸಿದ ಕಿರುಕುಳವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ತನ್ನ ಸಾವಿಗೆ ನ್ಯಾಯ ಸಿಗದಿದ್ದರೆ ತನ್ನ ಅಸ್ಥಿಯನ್ನು ಕೋರ್ಟ್ ಎದುರು ಗಟಾರಕ್ಕೆ ಸುರಿಯಿರಿ ಎಂದು ಕೊನೆಯ ಪತ್ರದಲ್ಲಿ ಬರೆದಿದ್ದಾರೆ.
ತನ್ನಂತೆ ಲಕ್ಷಾಂತರ ಗಂಡಸರು ಪತ್ನಿಯರಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಈ ದೇಶದಲ್ಲಿ ಕಾನೂನುಗಳು ಬರೀ ಮಹಿಳೆಯರ ಪರವಾಗಿದೆ. ಗಂಡಸರಿಗೆ ಯಾವ ಕಾನೂನು ಕೂಡ ಸಹಾಯ ಮಾಡಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು.
ಅತುಲ್ ಸುಭಾಷ್ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ದೇಶದ ಕಾನೂನಿನಲ್ಲಿ ಬದಲಾವಣೆ ತರಬೇಕು ಎನ್ನುವ ಒತ್ತಾಯ ಕೂಡ ವ್ಯಕ್ತವಾಗಿತ್ತು. ಅತುಲ್ ಸುಭಾಷ್ ವಿರುದ್ಧ ಪತ್ನಿ ಮತ್ತು ಆಕೆಯ ಮನೆಯವರು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರು. ಲಕ್ಷಾಂತರ ರೂಪಾಯಿ ಜೀವನಾಂಶ ಬೇಕು ಎಂದು ಒತ್ತಾಯಿಸಿದ್ದರು. ಕೆಲಸದ ಒತ್ತಡದ ಜೊತೆಗೆ ಪತ್ನಿ ಮತ್ತು ಆಕೆಯ ಕುಟುಂಬದ ಕಿರುಕುಳ ತಾಳಲಾರದೆ ಅತುಲ್ ಆತ್ಮಹತ್ಯೆ ದಾರಿ ಹಿಡಿದಿದ್ದರು.












Click it and Unblock the Notifications