Bengaluru Techie Suicide: ಟೆಕ್ಕಿ ಅತುಲ್ ಸುಭಾಷ್ ಪತ್ನಿ, ಅತ್ತೆ ಬಂಧನ
ಬೆಂಗಳೂರು, ಡಿಸೆಂಬರ್ 15: ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನಿಖಿತಾ ಸಿಂಘಾನಿಯಾ ಬಂಧಿಸಿದ್ದಾರೆ. ಅತುಲ್ ಸುಭಾಷ್ ಪತ್ನಿ, ಅತ್ತೆ ಮತ್ತು ಪತ್ನಿಯ ಸಹೋದರನನ್ನು ಪೊಲೀಸರು ಬಂಧಿಸಿದ್ದು, ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ. ಡಿಸೆಂಬರ್ 9ರಂದು ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾರತ್ತಹಳ್ಳಿ ಪೊಲೀಸರು ಹರಿಯಾಣದ ಗುರುಗ್ರಾಮದಲ್ಲಿ ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ ಬಂಧಿಸಿದ್ದಾರೆ. ಪತ್ನಿ ಕಿರುಕುಳವೇ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ಅತುಲ್ ಸುಭಾಷ್ ಆರೋಪ ಮಾಡಿದ್ದರು.

ಅಲ್ಲದೇ ಪೊಲೀಸರು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಅತುಲ್ ಸುಭಾಷ್ ಪತ್ನಿಯ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಬಂಧಿಸಿದ್ದಾರೆ. ಮೂವರನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಬಳಿಕ ಪೊಲೀಸರು ತಮ್ಮ ವಶಕ್ಕೆ ಪಡೆಯಲಿದ್ದಾರೆ.
ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಡಿಸೆಂಬರ್ 9ರಂದು ಮಾರತ್ತಹಳ್ಳಿಯ ಮಂಜುನಾಥ ಲೇಔಟ್‍ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ಅವರು ಸುಮಾರು 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದರು. ಸುಮಾರು 1 ಗಂಟೆಗೂ ಅಧಿಕ ಕಾಲದ ವಿಡಿಯೋವನ್ನು ಮಾಡಿದ್ದರು.
ವಿಶೇಷ ತಂಡದ ರಚನೆ: ದೇಶಾದ್ಯಂತ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಸಂಚಲನ ಉಂಟು ಮಾಡಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ ಮತ್ತು ಅವರ ಕುಟುಂಬ ಸದಸ್ಯರ ಬಂಧನಕ್ಕೆ ವಿಶೇಷ ತಂಡವನ್ನು ರಚನೆ ಮಾಡಿದ್ದರು.
ಅತುಲ್ ಸುಭಾಷ್ ಸಹೋದರ ಬಿಕಾಸ್ ಕುಮಾರ್ ನೀಡಿರುವ ದೂರಿನ ಅನ್ವಯ ನಿಖಿತಾ ಸಿಂಘಾನಿಯಾ, ನಿಶಾ ಸಿಂಘಾನಿಯಾ, ಅನುರಾಗ್ ಸಿಂಘಾನಿಯಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಿರೀಕ್ಷಣಾ ಜಾಮೀನು ಕೋರಿ ನಿಶಾ ಸಿಂಘಾನಿಯಾ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು.
ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಮಾರತ್ತಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ತನಿಖಾಧಿಕಾರಿ. ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚನೆ ಮಾಡಿಕೊಂಡು ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಕುರಿತು ಮಾತನಾಡಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, "ಮೃತ ವ್ಯಕ್ತಿಗೆ ನ್ಯಾಯಕೊಡಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುತ್ತದೆ" ಎಂದು ಹೇಳಿದ್ದರು.
ಉತ್ತರ ಪ್ರದೇಶದಲ್ಲಿ ಗುರುವಾರ ಅತುಲ್ ಸುಭಾಷ್ ಅತ್ತೆ ನಿಶಾ ಸಿಂಘಾನಿಯಾ ಮನೆಗೆ ಬೆಂಗಳೂರು ಪೊಲೀಸರು ಭೇಟಿ ನೀಡಿದ್ದರು. ಆದರೆ ಮನೆಗೆ ಬೀಗ ಹಾಕಿಕೊಂಡು, ಮೊಬೈಲ್ ಸ್ವಿಚ್ ಆಫ್ ಮಾಡಿ ಅವರು ಪರಾರಿಯಾಗಿದ್ದರು. ಬೈಕ್‌ನಲ್ಲಿ ಅವರು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಿಚಾರಣೆಗೆ ಹಾಜರಾಗಬೇಕು ಎಂದು ಪೊಲೀಸರು ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದರು.












Click it and Unblock the Notifications