Bengaluru Suburban Rail Project: ಈ ಮಾರ್ಗದಲ್ಲಿ 2025ರ ಡಿಸೆಂಬರ್ ವೇಳೆಗೆ ರೈಲು ಸಂಚಾರ ಆರಂಭ-ಮಾಹಿತಿ, ವಿವರ
ಬೆಂಗಳೂರು, ಮಾರ್ಚ್, 17: ಬೆಂಗಳೂರು ಉಪನಗರ ರೈಲು ಯೋಜನೆಯು 2027ರ ವೇಳೆಗೆ ಮುಗಿಯಲಿದೆ ಎಂದು ಸರ್ಕಾರ ತಿಳಿಸಿದ್ದು, ಈ ಯೋಜನೆಯನ್ನು ಬೇಗ ಮುಗಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ರೈಲ್ವೆ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗಷ್ಟೇ ಸೂಚನೆ ನೀಡಿದ್ದರು, ಇನ್ನು ಇದೀಗ ಮೊದಲನೇ ಭಾಗದ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಅವರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ಹಾಗಾದರೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರು ಉಪನಗರ ರೈಲು ಯೋಜನೆ ಮೊದಲ ಭಾಗವಾದ ಚಿಕ್ಕಬಾಣಾವರ-ಯಶವಂತಪುರ ನಡುವಿನ 7.4 ಕಿಲೋ ಮೀಟರ್ ಮಾರ್ಗದಲ್ಲಿ 2025ರ ಡಿಸೆಂಬರ್ ವೇಳೆಗೆ ರೈಲು ಸಂಚಾರ ಆರಂಭ ಆಗಲಿದೆ. ಇದರಲ್ಲಿ ದೇಶದಲ್ಲೇ ಅತಿ ಉದ್ದದ ಗರ್ಡರ್ ಬಳಸಲಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಅವರು ಶನಿವಾರ ತಿಳಿಸಿದರು.

ದೇಶದಲ್ಲೇ ಅತೀ ಉದ್ದದ 100 ಅಡಿ ಯು-ಗರ್ಡರ್ ನಿರ್ಮಾಣ ಪ್ರಕ್ರಿಯೆಯನ್ನು ವೀಕ್ಷಿಸಲು ದೇವನಹಳ್ಳಿ ಬಳಿಯ ಗೊಲ್ಲಹಳ್ಳಿಯ ಕ್ಯಾಸ್ಟಿಂಗ್ ಕಾರ್ಯಾಗಾರಕ್ಕೆ ಭೇಟಿ ನೀಡಿದ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಂಜಿನಿಯರಿಂಗ್ ಅದ್ಭುತ ಎನ್ನಲಾಗಿರುವ ಈ 100 ಅಡಿ ಉದ್ದದ ಯು ಗರ್ಡರ್ ಅನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ಉಪನಗರ ರೈಲು ಯೋಜನೆಗೆ ಬಳಸಲಾಗುತ್ತಿದೆ. ಮಲ್ಲಿಗೆ ಕಾರಿಡಾರ್‌ನ ಭಾಗವಾದ ಹೆಬ್ಬಾಳ-ಯಶವಂತಪುರದ 8 ಕಿಲೋ ಮೀಟರ್ ನಡುವೆ ಇಂತಹ ಸುಮಾರು 450 ಯು-ಗರ್ಡರ್‌ಗಳನ್ನು ಬಳಸಲಾಗುತ್ತದೆ. ಇದಕ್ಕೂ ಮುಂಚಿತವಾಗಿ ದೇಶದಲ್ಲಿ ಬೇರೆ ರೈಲ್ವೆ ಯೋಜನೆಗಳಲ್ಲಿ 28 ಮೀಟರ್ ಉದ್ದದ ಯು ಗರ್ಡರ್‌ಗಳನ್ನು ಬಳಸಲಾಗುತ್ತಿತ್ತು ಎಂದು ತಿಳಿಸಿದರು.
ಮೇಲಿನ ಮಾರ್ಗದಲ್ಲಿ ಇಂತಹ 323 ಐ-ಗರ್ಡರ್, 283 ಫೈಯರ್ ಕ್ಯಾಪ್‌ಗಳನ್ನು ಬಳಕೆ ಮಾಡಲಾಗುತ್ತದೆ. ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಈವರೆಗೆ ಶೇಕಡ 20ರಷ್ಟು ಕಾಯಂ ಕಾಮಗಾರಿಗಳು ಮುಗಿದಿವೆ. ಕಾರಿಡಾರ್ -2ರಲ್ಲಿ ಚಿಕ್ಕಬಾಣಾವರ-ಬೆನ್ನಿಗಾನಹಳ್ಳಿ ಮಾರ್ಗದ ಅಗತ್ಯವಿರುವ 120.44 ಹೆಕ್ಟೇರ್ ಭೂಮಿಯ ಪೈಕಿ 119.18 ಹೆಕ್ಟೇರ್ ಜಮೀನು ಶೇಕಡ 98.5ರಷ್ಟು ಈಗಾಗಲೇ ಸ್ವಾಧೀನ ಆಗಿದೆ ಎಂದು ಹೇಳಿದರು.
ಕಾರಿಡಾರ್ 2ರಲ್ಲಿ ಉತ್ತಮವಾಗಿ ಕೆಲಸ ನಡೆಯುತ್ತಿದೆ. ನಾಗರಿಕ ಸೇವೆಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಸ್ಎನ್ಎಲ್ ಹಾಗೂ ಇನ್ನಿತರ ಖಾಸಗಿ ಸಂಸ್ಥೆಗಳ ಜೊತೆ ಮಾತುಕತೆ ನಡೆಯುತ್ತಿದೆ. ಕೆಂಗೇರಿ-ವೈಟ್ ಫೀಲ್ಡ್ ಕಾರಿಡಾರ್‌ನಲ್ಲಿ ಕೆಂಗೇರಿ-ಕಂಟೋನ್ಮೆಂಟ್ ನಡುವೆ ಉಪನಗರ ಯೋಜನೆ ಜಾರಿಗೆ ಯಾವ ಆತಂಕವೂ ಇಲ್ಲ.
ಆದರೆ ವೈಟ್ ಫೀಲ್ಡ್ ನಡುವೆ ಜಾಗದ ಸಮಸ್ಯೆಯಿದ್ದು, ಇಲ್ಲಿ ಎತ್ತರಿಸಿದ ಮಾರ್ಗ ನಿರ್ಮಿಸಬೇಕೆ ಅಥವಾ ಬೇರೆ ಯಾವ ರೀತಿಯಲ್ಲಿ ಯೋಜನೆ ಅನುಷ್ಠಾನ ಮಾಡಬಹುದು ಎಂಬುದರ ಕುರಿತು ಚರ್ಚಿಸಿ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಹೇಳಿದರು.
15,677 ಕೋಟಿ ರೂಪಾಯಿ ಯೋಜನೆಯ ನಾಲ್ಕೂ ಕಾರಿಡಾರ್‌ಗಳ 148.17 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ಡಿಸೆಂಬರ್ 2027ಕ್ಕೆ ಮುಕ್ತಾಯ ಆಗಲಿದೆ. ಈ ಗುರಿಗೆ ಪೂರಕವಾಗಿ ರೈಲ್ವೆ ಇಲಾಖೆಯು ಸಿ-1 ಮತ್ತು ಸಿ-3 ಕಾರಿಡಾರ್‌ಗಳ ಕಾಮಗಾರಿಗಾಗಿ ಒತ್ತುವರಿ ತೆರವುಗೊಳಿಸಿದ ಭೂಮಿಯನ್ನು ನಮಗೆ ಹಸ್ತಾಂತರಿಸಬೇಕು ಹಾಗೂ ಡಿಪಿಆರ್‌ನಲ್ಲಿರುವಂತೆ ಅಲೈನ್ಮೆಂಟ್‌ಗೆ ಅನುಮತಿ ನೀಡಬೇಕು ಎಂದು ಕೋರಿದರು.
ರೈಲ್ವೆ ಇಲಾಖೆಯು ಮುಂಬರುವ ವರ್ಷಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವರ್ತುಲ ರೈಲ್ವೆ ಯೋಜನೆಗೆ ಉಪನಗರ ರೈಲು ಯೋಜನೆಯನ್ನು ಸಂಪರ್ಕಿಸುವ ಜೊತೆಗೆ ಅದನ್ನು ಬೆಂಗಳೂರು ಸುತ್ತಲ ಉಪನಗರಗಳಿಗೆ ವಿಸ್ತರಣೆ ಮಾಡುವ ಬಗ್ಗೆಯೂ ಕೆ-ರೈಡ್ ಈಗಾಗಲೇ ಚಿಂತನೆ ನಡೆಸುತ್ತಿದೆ. ಈ ರೈಲ್ವೆ ಇಲಾಖೆ ಜೊತೆ ಚರ್ಚಿಸಿ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.












Click it and Unblock the Notifications