Bengaluru Suburban Rail: ಕನಕನಗರಕ್ಕೆ ಸಬ್ ಅರ್ಬನ್ ರೈಲು ನಿಲ್ದಾಣ, ಆಸ್ತಿ ಮೌಲ್ಯ ಏರಿಕೆ
ಬೆಂಗಳೂರು, ಡಿಸೆಂಬರ್ 21: ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಕರ್ನಾಟಕ ಸರ್ಕಾರ ಬೆಂಗಳೂರು ಉಪ ನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಅನುಷ್ಠಾನಗೊಳಿಸುತ್ತಿದೆ. ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಯೋಜನೆ ಜಾರಿಯಾಗುತ್ತಿದ್ದು, 2026ರಲ್ಲಿ ಯೋಜನೆಯಡಿ ಮೊದಲ ರೈಲು ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯಡಿ ಒಟ್ಟು 4 ಕಾರಿಡಾರ್ ನಿರ್ಮಾಣವಾಗುತ್ತಿದೆ.
ಬೆಂಗಳೂರು ಉಪ ನಗರ ರೈಲು ಯೋಜನೆ ಅನ್ವಯ ಕನಕನಗರ- ಆರ್. ಟಿ. ನಗರಕ್ಕೆ ರೈಲು ನಿಲ್ದಾಣವೊಂದು ದೊರೆಯಲಿದೆ. ಕನಕನಗರ-ಆರ್. ಟಿ. ನಗರ ಪೋಸ್ಟ್ ಹೆಸರಿನ ನಿಲ್ದಾಣ ನಿರ್ಮಾಣವಾಗುವ ನಿರೀಕ್ಷೆ ಇದೆ. ರಾಷ್ಟ್ರೀಯ ಹೆದ್ದಾರಿ, ನಮ್ಮ ಮೆಟ್ರೋ ಸಂಪರ್ಕವೂ ಸಿಗುವ ಬಡಾವಣೆಗೆ ಈಗ ಬಿಎಸ್‌ಆರ್‌ಪಿ ಯೋಜನೆಯಿಂದಲೂ ಸಹಾಯಕವಾಗಲಿದೆ.

ಕನಕನಗರ ನಿಲ್ದಾಣ: ಕನಕನಗರ ಉತ್ತಮ ಮೂಲಭೂತ ಸೌಲಭ್ಯವನ್ನು ಹೊಂದಿರುವ ಬಡಾವಣೆ. ಹೊರ ವರ್ತುಲ ರಸ್ತೆ ಮೂಲಕ ಬಡಾವಣೆ ರಾಷ್ಟ್ರೀಯ ಹೆದ್ದಾರಿ 44ರ ಸಂಪರ್ಕವನ್ನು ಹೊಂದಿದೆ. ನಮ್ಮ ಮೆಟ್ರೋ ನೀಲಿ ಮಾರ್ಗದ ರೈಲು ಈ ಬಡಾವಣೆ ವ್ಯಾಪ್ತಿಯಲ್ಲಿ ವೀರನಪಾಳ್ಯದಲ್ಲಿ ನಿಲ್ದಾಣವನ್ನು ಹೊಂದಿದೆ. ಈಗ ಬಿಎಸ್‌ಆರ್‌ಪಿ ಮೂಲಕವೂ ಬಡಾವಣೆಗೆ ಮತ್ತೊಂದು ಸಾರಿಗೆ ಸಂಪರ್ಕ ಸಿಗಲಿದೆ.
ಕನಕನಗರ ಬಿಎಸ್ಆರ್‌ಪಿ ಯೋಜನೆಯಲ್ಲಿ 'ಮಲ್ಲಿಗೆ' ಕಾರಿಡಾರ್ ಅಡಿ ಬರುತ್ತದೆ. ಈ ಮಾರ್ಗದ ಸಬ್ ಅರ್ಬನ್ ರೈಲು ಮೂಲಕ ಹೆಬ್ಬಾಳ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ, ಜಾಲಹಳ್ಳಿ ಮೂಲಕ ಚಿಕ್ಕಬಣಾವರ ತನಕ ಸಂಚಾರ ನಡೆಸಬಹುದಾಗಿದೆ. ಮತ್ತೊಂದು ಕಡೆ ಬಾಣಸವಾಡಿ, ಎಂಎಸ್ ನಗರ, ಬೈಯಪ್ಪನಹಳ್ಳಿ ಮೂಲಕ ಕೆಆರ್ ಪುರ ತನಕ ಸಂಚಾರ ನಡೆಸಬಹುದು.
ಈಗಾಗಲೇ ಕನಕನಗರದಲ್ಲಿ ಆಸ್ತಿ ಮೌಲ್ಯ ಹೆಚ್ಚಳವಾಗಿದೆ. ಈಗ ಸಬ್ ಅರ್ಬನ್ ರೈಲು ನಿಲ್ದಾಣ ಸಿಗುವ ಮಾಹಿತಿ ಸಿಕ್ಕಿರುವುದರಿಂದ ದರಗಳು ಇನ್ನಷ್ಟು ಏರಿಕೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿಗಳು.
ಬಿಎಸ್‌ಆರ್‌ಪಿ ಯೋಜನೆ ಸುಮಾರು 148 ಕಿ. ಮೀ. ವ್ಯಾಪ್ತಿಯನ್ನು ಒಳಗೊಂಡಿದೆ. 4 ಕಾರಿಡಾರ್‌ಗಳಲ್ಲಿ 64 ನಿಲ್ದಾಣಗಳು ನಿರ್ಮಾಣವಾಗಲಿದೆ. 2020ರ ಅಕ್ಟೋಬರ್‌ನಲ್ಲಿಯೇ ಕೇಂದ್ರ ಸರ್ಕಾರ ಈ ಯೋಜನೆಗೆ ಒಪ್ಪಿಗೆಯನ್ನು ನೀಡಿದೆ. 2023ರ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಶಂಕು ಸ್ಥಾಪನೆಯನ್ನು ಮಾಡಿದ್ದಾರೆ.
2026ರಲ್ಲಿ ರೈಲು ಸಂಚಾರ ಆರಂಭಿಸುವ ಗುರಿಯೊಂದಿಗೆ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಎರಡು ಕಾರಿಡಾರ್‌ಗಳ ನಿರ್ಮಾಣ ಕಾರ್ಯ ಚುರುಕಿನಿಂದ ಸಾಗಿದೆ. ಇದರಲ್ಲಿ 'ಮಲ್ಲಿಗೆ' ಕಾರಿಡಾರ್ ಸಹ ಒಂದು.
ಕನಕನಗರ ನಿಲ್ದಾಣದಲ್ಲಿ 2041ರ ವೇಳೆಗೆ 21,994 ಜನರು ಆಗಮಿಸಿ ನಿರ್ಗಮಿಸಬಹುದು ಎಂದು ಡಿಪಿಆರ್‌ನಲ್ಲಿ ಅಂದಾಜಿಸಲಾಗಿದೆ. ಸಬ್ ಅರ್ಬನ್ ರೈಲು ಯೋಜನೆಯನ್ನು ಗಂಟೆಗೆ ಗರಿಷ್ಠ 90 ಕಿ. ಮೀ., ಕನಿಷ್ಠ 35 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುವಂತೆ ವಿನ್ಯಾಸಗೊಳಿಸಲಾಗುತ್ತಿದೆ.
ಸಬ್ ಅರ್ಬನ್ ರೈಲು ಯೋಜನೆಯನ್ನು ಕಾರಿಡಾರ್-1 'ಸಂಪಿಗೆ' ಕೆಎಸ್ಆರ್ ಬೆಂಗಳೂರು-ಯಲಹಂಕ-ದೇವನಹಳ್ಳಿ. ಕಾಡಿಡಾರ್-2 'ಮಲ್ಲಿಗೆ' ಬೈಯಪ್ಪನಹಳ್ಳಿ-ಚಿಕ್ಕಬಣಾವರ, ಕಾರಿಡಾರ್-3 'ಪಾರಿಜಾತ' ಕೆಂಗೇರಿ-ವೈಟ್‌ಫೀಲ್ಡ್ ಮತ್ತು ಕಾರಿಡಾರ್-4 'ಕನಕ' ಹೀಗಲಿಗೆ-ರಾಜನಕುಂಟೆ ಎಂದು ನಾಲ್ಕು ಕಾರಿಡಾರ್ ಆಗಿ ವಿಭಾಗ ಮಾಡಲಾಗಿದೆ.












Click it and Unblock the Notifications