Bengaluru Suburban Rail: ನಿಧಾನಗತಿಯ ಕಾಮಗಾರಿ: ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಂಬಿ ಪಾಟೀಲ್
ಬೆಂಗಳೂರು, ಆಗಸ್ಟ್ 27: ಬೆಂಗಳೂರಿನಲ್ಲಿ ಸರ್ಕಾರ ಹಾಗೂ ನೈಋತ್ಯ ರೈಲ್ವೆ ವತಿಯಿಂದ ನಾಲ್ಕು ಕಾರಿಡಾರ್‌ಗಳಲ್ಲಿ ಉಪನಗರ ರೈಲು ಯೋಜನೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಪೈಕಿ ಎರಡನೇ ಕಾರಿಡಾರ್ ಚಿಕ್ಕಬಾಣಾವಾರ- ಬೈಯ್ಯಪ್ಪನಹಳ್ಳಿ ಮಾರ್ಗದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಸಂಬಂಧ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳನ್ನು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ತರಾಟೆಗೆ ತೆಗೆದುಕೊಂಡರು.
ಉಪನಗರ ರೈಲು ಯೋಜನೆಯ ಪ್ರಗತಿ ಪರಿಶೀಲನೆ ಸಭೆ ಮಂಗಳವಾರ ಬೆಂಗಳೂರಿನ ಖನಿಜ ಭವನದಲ್ಲಿ ನಡೆಯಿತು. ಈ ವೇಳೆ ನಿರೀಕ್ಷಿತ ಪ್ರಗತಿ ಕಾಣದಿದ್ದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಗುತ್ತಿಗೆ ಪಡೆದ ಎಲ್‌ಆಂಡ್ ಟಿ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಗರಂ ಆರಂದರು.

ಚಿಕ್ಕಬಾಣಾವಾರ- ಬೈಯ್ಯಪ್ಪನಹಳ್ಳಿ ಉಪನಗರ ರೈಲು ಮಾರ್ಗವನ್ನು 2025ರ ಆಗಸ್ಟ್ ವೇಳೆಗೆ ಪೂರ್ಣಗೊಳಿಸಿ ಇಲ್ಲಿ, ರೈಲು ಸಂಚಾರ ಆರಂಭಿಸುವುದಾಗಿ ಜನರಿಗೆ ಮಾತು ಕೊಟ್ಟಿದ್ದೇವೆ. ಆದರೆ, ಕಾಮಗಾರಿಯ ಆಮೆಗತಿಯಲ್ಲಿ ಸಾಗುತ್ತಿದೆ. ಇದೆಲ್ಲ ನೋಡಿದರೆ ನಿಗದಿತ ಗಡುವಿನಲ್ಲಿ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ ಎಂದು ಅವರು ಬೇಸರ ಹೊರ ಹಾಕಿದರು.
ಕಾಮಗಾರಿಯ ಭೌತಿಕ ಪ್ರಗತಿ ಕೇವಲ ಶೇ.28
ಕಾರಿಡಾರ್ ಕಾಮಗಾರಿಯಲ್ಲಿ ಈವರೆಗೆ ಕೇವಲ ಶೇ 28ರಷ್ಟು ಭೌತಿಕ ಹಾಗೂ ಶೇಕಡಾ 22ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ. ಇದೇ ವೇಗದಲ್ಲಿ ಹೋದರೆ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ವಾರಕ್ಕೊಮ್ಮೆ ಇಲ್ಲವೇ ಪ್ರತಿ ತಿಂಗಳಿಗೊಮ್ಮೆ ಕೆ-ರೈಡ್ ಅಧಿಕಾರಿಗಳು ಯೋಜನೆ ಪ್ರಗತಿ ಪರಿಶೀಲಿಸುವಂತೆ ಸೂಚಿಸಿದರು.
ನಿಧಾನಗತಿಯ ಕಾಮಗಾರಿಯನ್ನು ಚುರುಕಗೊಳಿಸಬೇಕು. ಯೋಜನೆ ಪ್ರಕಾರ ತಿಂಗಳಿಗೆ ಕನಿಷ್ಠ 55 ಯು.ಗರ್ಡರ್, 22 ಪೈಯರ್, 42 ಐ-ಗರ್ಡರ್ ನಿರ್ಮಿಸಲೇಬೇಕು. ಅಂದರೆ ತಿಂಗಳಿಗೆ ಕನಿಷ್ಠ 54 ಕೋಟಿ ರೂಪಾಯಿ ವೆಚ್ಚ ಮಾಡಬೇಕು. ಆದರೆ, ಈಗ ಕೇವಲ 9 ಕೋಟಿ ಬಿಲ್ ಮಾಡಲಾಗಿತ್ತದೆ. ಸೂಕ್ತ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು.

ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮದ ಎಚ್ಚರಿಕೆ
ಉದ್ದೇಶಿತ ಒಟ್ಟು 459 ಕೋಟಿ ರೂಪಾಯಿ ಆರ್ಥಿಕ ಪ್ರಗತಿಯಲ್ಲಿ ನಾವು ಕೇವಲ 86 ಕೋಟಿ ರೂಪಾಯಿಯಷ್ಟು ಮಾತ್ರವೇ ಪ್ರಗತಿ ಸಾಧಿಸಿದ್ದೇವೆ. ಕಾಮಗಾರಿಯಲ್ಲಿನ ವಿಳಂಬ ಹೀಗೆ ಮುಂದುವರಿದರೆ ಗುತ್ತಿಗೆ ಪಡೆದ ಸಂಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಅಲ್ಲದೇ ಕಾಮಗಾರಿ ಹೀಗೆ ವಿಳಂಬಗೊಂಡರೆ ಅದರಿಂದಾಗು ನಷ್ಟವನ್ನು ಗುತ್ತಿಗೆದಾರ ಸಂಸ್ಥೆಯೇ ಭರಿಸಬೇಕಾಗುತ್ತದೆ. ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಅವರು ತಿಳಿಹೇಳಿದರು.
ಕಾರಿಡಾರ್ 4: ಸಚಿವರ ಮಹತ್ವದ ಸೂಚನೆಗಳು
ಇನ್ನೂ ಕಾರಿಡಾರ್ 4 ಯೋಜನೆ (ಹೀಲಲಗಿ- ರಾಜಾನುಕುಂಟೆ ಮಾರ್ಗ) ಕಾಮಗಾರಿ ಸಹ ಇದೇ ಎಲ್ ಆಂಡ್ ಟಿ ಸಂಸ್ಥೆ ಗುತ್ತಿಗೆ ನೀಡಲಾಗಿದೆ. ಈ ಕಾಮಗಾರಿ ಸಹ ಚುರುಕುಗೊಳಿಸಬೇಕು. ವಿದ್ಯುತ್, ಚರಂಡಿ ಪೈಪ್ ಇತ್ಯಾದಿ ಸೇವೆಗಳನ್ನು ಸ್ಥಳಾಂತರಿಸುವ ಕೆಲಸವನ್ನು ಶೇ 65ರಷ್ಟು ಮುಗಿಸಿದೆ.
ಈ ಮಾರ್ಗದಲ್ಲಿನ ಗರ್ಡರ್ ನಿರ್ಮಾಣ ಯಾರ್ಡ್ ಸ್ಥಾಪಿಸಲು ಜಾಗ ಗುರುತಿಸಲಾಗಿದೆ. ಆದ್ದರಿಂದ ಯಾವ ಕಾರಣಕ್ಕೂ ಕಾಮಗಾರಿ ವಿಳಂಬ ಮಾಡದೇ ತ್ವರಿತಗತಿಯಲ್ಲಿ ಮುಗಿಸಬೇಕು. ಸೇತುವೆಗಳ ನಿರ್ಮಾಣ ಕೂಡ ಆರಂಭವಾಗಿದ್ದು, ಕಾಮಗಾರಿಗೆ ಮತ್ತಷ್ಟು ಚುರುಕು ನೀಡುವ ಕೆಲಸವಾಗಬೇಕು ಎಂದು ಸಚಿವರು ನಿರ್ದೇಶಿಸಿದರು.
ಎಲ್ ಆಂಡ್ ಟಿ ಗುತ್ತಿಗೆದಾರ ಸಂಸ್ಥೆಯ ಹಿರಿಯ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಿ, ಕಾಮಗಾರಿಗೆ ವೇಗ ನೀಡಬೇಕು ಎನ್ನುವ ಸೂಚನೆಯನ್ನು ಸಚಿವರು ಕೆ-ರೈಡ್ ಅಧಿಕಾರಿಗಳಿಗೆ ನೀಡಿದರು. ಯಾವುದೇ ಕಾರಣಕ್ಕೂ ಕಾಮಗಾರಿ ಮುಗಿಯುವ ಅವಧಿಯನ್ನು ವಿಸ್ತರಿಸುವುದಿಲ್ಲ. ನಿಗದಿತ ಅವಧಿಯೊಳಗೇ ಮುಗಿಸುವ ಹಾಗೆ ರಾತ್ರಿ-ಹಗಲು ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿಯೂ ಆದ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.ಮಂಜುಳಾ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಕೆ-ರೈಡ್ ಅಧಿಕಾರಿಗಳು ಮತ್ತು ಸಮಾಲೋಚಕರು, ಗುತ್ತಿಗೆದಾರ ಸಂಸ್ಥೆಯ ಪ್ರಾಜೆಕ್ಟ್ ವ್ಯವಸ್ಥಾಪಕ ಮತ್ತಿತರು ಪಾಲ್ಗೊಂಡಿದ್ದರು.












Click it and Unblock the Notifications