ಬೆಂಗಳೂರು ಉಪನಗರ ರೈಲು ಯೋಜನೆ: 2ನೇ ಹಂತದ ಕಾಮಗಾರಿಗೆ ಟೆಂಡರ್ ಅಂತಿಮ-ವಿ.ಸೋಮಣ್ಣ
ಬೆಂಗಳೂರು, ಸೆಪ್ಟಂಬರ್ 22: ಬೆಂಗಳೂರು ಉಪನಗರ ರೈಲು ಯೋಜನೆಯ ಎರಡನೇ ಹಂತಕ್ಕೆ ಕಾಮಗಾರಿಯ ರೂ.859 ಕೋಟಿ ಟೆಂಡರ್ ಅಂತಿಮಗೊಂಡಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಈ ಕುರಿತು ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಹುನಿರೀಕ್ಷಿತ ಉಪನಗರ ರೈಲು ಯೋಜನೆ ನಾಲ್ಕು ಹಂತದಲ್ಲಿ ಸಿದ್ಧವಾಗುತ್ತಿದೆ. ಇತ್ತೀಚೆಗಷ್ಟೆ 25ಕಿ.ಮೀ. ದೂರದ ಉಪನಗರ ರೈಲು ಯೋಜನೆಯ ಎರಡನೇ ಹಂತದ ಶೀಘ್ರವೇ ಆರಂಭಿಸಲಾಗುವುದು ಎನ್ನಲಾಗಿತ್ತು. ಅದರಂತೆ ಇದೀಗ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ ಎಂದರು.
ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗಿನ ಈ 25 ಕಿಮೀ ಎರಡನೇ ಸ್ಟ್ರೆಚ್ ನಿರ್ಮಾಣಕ್ಕೆ ರೂ.859 ವೆಚ್ಚವನ್ನು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ಆರು ಎತ್ತರಿಸಿದ ಮತ್ತು ಎಂಟು ನೆಲದ ಮೇಲಿನ ನಿಲ್ದಾಣಗಳು ಬರುತ್ತವೆ. ಲಕ್ಷಾಂತರ ಜನರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಈ ಹಂತದ ಕಾಮಗಾರಿಯಲ್ಲಿ 27ತಿಂಗಳುಗಳಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಸಚಿವರು ವಿವರಿಸಿದರು.
ರಾಜ್ಯ ಸರ್ಕಾರ ಉಪನಗರ ರೈಲ್ವೆ ಯೋಜನೆಗಾಗಿ ಒಟ್ಟು 600ಕೋಟಿ ರೂ. ಬಿಡುಗಡೆ ಮಾಡಿದೆ. ಈ ಪೈಕಿ ಯೋಜನೆಯ ಪೂರ್ವಸಿದ್ಧತಾ ಕಾರ್ಯಗಳಿಗಾಗಿ ರಾಜ್ಯ ಸರ್ಕಾರ ರೂ. 120 ಕೋಟಿ ಖರ್ಚು ಮಾಡಿದೆ. ಮೊದಲ ಹಂತದ ಸಿವಿಲ್ ಕಾಮಗಾರಿ ಆರಂಭವಾಗಿದೆ. ಮೂರನೇ ಹಂತದ ಯೋಜನೆ ಕುರಿತು ಟೆಂಡರ್ ಕರೆಯುವ ಬಗ್ಗೆ ಕೇಂದ್ರ ಸರ್ಕಾರದ ಜತೆಗೆ ಚರ್ಚಿಸಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರು.

ಉಪನಗರ ರೈಲು ಯೋಜನೆಗೆ ಅನಂತ್‌ಕುಮಾರ್ ಹೆಸರು?
ಒಟ್ಟು 147ಕಿ.ಮೀ. ವ್ಯಾಪ್ತಿಯ ನಾಲ್ಕು ಹಂತದ ಉಪನಗರ ರೈಲು ಯೋಜನೆಯಲ್ಲಿ ಮೊದಲ ಹಂತ 41ಕಿ.ಮೀ. ಇದ್ದು, ಇದು ಬೆಂಗಳೂರಿನಿಂದ ದೇವನಹಳ್ಳಿಗೆ ಸಂಪರ್ಕ ಕಲ್ಪಿಸಲಿದೆ. ನಂತರ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ, ಕೆಂಗೇರಿ-ವೈಟ್‌ಫಿಲ್ಡ್, ಹಿಲಲಿಗೆ-ರಾಜಾನುಕುಂಟೆ ಸಂಪರ್ಕ ಸಾಧಿಸುವ ಇದೊಂದು ದೊಡ್ಡ ಯೋಜನೆಯಾಗಿದೆ ಎಂದರು.

ಬೆಂಗಳೂರು ಉಪನಗರ ರೈಲು ಯೋಜನೆ ದಿ.ಅನಂತ್‌ಕುಮಾರ್ ಅವರ ಕನಸು. ಹೀಗಾಗಿ ಅವರ ಹೆಸರನ್ನು ಈ ಯೋಜನೆ ಇಡಬೇಕು ಎಂಬುದರ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಈ ಬಗ್ಗೆ ಅವರು ಸಾಕಷ್ಟು ಬಾರಿ ನನ್ನೊಂದಿಗೆ ಮಾತನಾಡಿದ್ದು ಎಂದು ಅವರೊಂದಿಗಿನ ಚರ್ಚೆ ಸ್ಮರಿಸಿ ವಿ.ಸೋಮಣ್ಣ ತಿಳಿಸಿದರು.












Click it and Unblock the Notifications