Bengaluru Stray Dog: ಬೆಂಗಳೂರಿನ ಬೀದಿ ನಾಯಿಗಳಿಗೆ ಆಹಾರ: ಈ 5 ನಿಯಮಗಳನ್ನು ಪಾಲಿಸಬೇಕು
Bengaluru Stray Dog: ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳು ಬೀದಿ ನಾಯಿಗಳ ಆರೈಕೆಯ ವಿಚಾರದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಅದರಲ್ಲೂ ಮುಖ್ಯವಾಗಿ ಸುಪ್ರೀಂ ಕೋರ್ಟ್, ಬೀದಿ ನಾಯಿಗಳ ವಿಚಾರದಲ್ಲಿ ಕೆಲವೊಂದು ಪ್ರಮುಖ ನಿರ್ದೇಶನಗಳನ್ನು ನೀಡಿದ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೆಂಗಳೂರಿನಲ್ಲಿನ ಬೀದಿ ನಾಯಿಗಳ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಯೋಜನೆಗಳನ್ನು ರೂಪಿಸುತ್ತಿದೆ.
ಇದೀಗ ಬೀದಿ ನಾಯಿಗಳಿಗೆ ಆಹಾರ ನೀಡುವ ಜಾಗಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ. ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಮಾನವೀಯ ನಿರ್ವಹಣೆ, ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಪರಿಸರ ಸ್ವಚ್ಛತೆಯನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಪಾಲಿಕೆಯ ಪ್ರಾಣಿ ಕಲ್ಯಾಣ ವಿಭಾಗವು 70 ನಿರ್ದಿಷ್ಟ ಸ್ಥಳಗಳನ್ನು ಬೀದಿ ನಾಯಿಗಳಿಗೆ ಆಹಾರ ನೀಡುವ ಅಧಿಕೃತ ಜಾಗಗಳಾಗಿ (Designated Feeding Spots) ಗುರುತಿಸಿದೆ. ಗುರುತಿಸಲಾದ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ ಎಂದು ಬೆಂಗಳೂರು ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳು, ಪ್ರಾಣಿ ಕ್ರೂರತೆ ನಿವಾರಣೆ ಕಾಯ್ದೆ, 1960 ಹಾಗೂ Animal Birth Control (ABC) ನಿಯಮಾವಳಿಗಳ ಅನ್ವಯ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥಿತ ಹಾಗೂ ನಿಯಂತ್ರಿತ ರೀತಿಯಲ್ಲಿ ಆಹಾರ ನೀಡುವ ವ್ಯವಸ್ಥೆಯನ್ನು ರೂಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುರುತಿಸಲಾದ Feeding Spotsಗಳಲ್ಲಿ ಕೆಳಕಂಡ ಸೂಚನೆಗಳನ್ನು ಪ್ರಕಟಿಸಲಾಗಿದೆ.
1. ಆಹಾರವನ್ನು ಗುರುತಿಸಿದ ಸ್ಥಳಗಳಲ್ಲೇ ನೀಡಬೇಕು.
2. ಮುಖ್ಯ ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಆಹಾರ ನೀಡಬಾರದು.
3. ಆಹಾರ ನೀಡಿದ ನಂತರ ಸ್ಥಳವನ್ನು ಸ್ವಚ್ಛವಾಗಿಡುವುದು ಆಹಾರ ನೀಡುವವರ ಜವಾಬ್ದಾರಿಯಾಗಿದೆ.
4. ನಾಯಿಗಳಿಗೆ ಹಾನಿ ಮಾಡುವುದು ಅಥವಾ ಕಿರುಕುಳ ನೀಡುವುದು ಕಾನೂನುಬಾಹಿರವಾಗಿದೆ.
5. ಸಾರ್ವಜನಿಕ ಸುರಕ್ಷತೆ ಕಾಪಾಡುವಂತೆ ಶಿಸ್ತಿನಿಂದ ಆಹಾರ ನೀಡಬೇಕು.
ಈ Feeding Spotsಗಳನ್ನು ವಾರ್ಡ್ ಮಟ್ಟದ ಅಧಿಕಾರಿಗಳು, ಸ್ಥಳೀಯವಾಗಿ ಆಹಾರ ನೀಡುವವರು, ಪಶುವೈದ್ಯಾಧಿಕಾರಿಗಳು ಹಾಗೂ ಪಶುಪಾಲನಾ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿ, ಪಶುಪಾಲನ ವಿಭಾಗ, ಬ್ಯಾಟರಾಯನಪುರಕ್ಕೆ ಭೇಟಿ ಕೊಡಬಹುದು.
ಪಾಲಿಕೆ ಸಹಾಯವಾಣಿ: 1533
ಬೀದಿ ನಾಯಿಗಳ ದತ್ತು ಪ್ರಕ್ರಿಯೆ
ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳಲ್ಲಿ ನಾಯಿಗಳ ದತ್ತು ಯೋಜನೆಯನ್ನು ಸಹ ಪರಿಚಯಿಸಲಾಗಿದೆ. ಈ ದತ್ತು ಕಾರ್ಯವನ್ನು ಪ್ರಾಣಿಗಳ ಮೇಲೆ ಕ್ರೂರತೆ ತಡೆ ಕಾಯ್ದೆ, 1960 (PCA Act) ಹಾಗೂ Animal Birth Control (ABC) Rules, 2023 ನಿಯಮಾವಳಿಗಳ ಅನುಸಾರ ಮಾನವೀಯ ವಿಧಾನದಲ್ಲಿ ನಡೆಸಲಾಗಿದೆ. ದತ್ತು ನೀಡಲಾದ ಎಲ್ಲಾ ನಾಯಿಗಳಿಗೆ ಅಗತ್ಯವಾದ ಲಸಿಕೆ (ARV ಹಾಗೂ ಸಂಯುಕ್ತ ಲಸಿಕೆ) ಸಂತಾನ ಹರಣ ಶಸ್ರ ಚಿಕಿತ್ಸೆ (ABC), ಆರೋಗ್ಯ ಪರಿಶೀಲನೆ ಮತ್ತು ಗುರುತು ಗುರುತಿಸುವಿಕೆ (Tagging) ಕ್ರಮಗಳನ್ನು ಪಾಲಿಕೆಯ ವತಿಯಿಂದ ಪೂರ್ಣಗೊಳಿಸಲಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications