ಬೆಂಗಳೂರು: ಬೀದಿ ನಾಯಿಗಳಿಗೆ ಆಹಾರ ನೀಡಲು 90 ಸ್ಥಳಗಳಲ್ಲಿ ಫೀಡಿಂಗ್ ಸ್ಪಾಟ್
ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಲ್ಯಾಣ ಮತ್ತು ನಿರ್ವಹಣೆ, ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಪರಿಸರ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಪಶು ಸಂಗೋಪನೆ ವಿಭಾಗವು ಬೀದಿನಾಯಿಗಳಿಗೆ ಆಹಾರ ನೀಡಲು 90 ಸ್ಥಳಗಳನ್ನು ಅಧಿಕೃತ ಆಹಾರ ನೀಡುವ ಸ್ಥಳಗಳನ್ನು (ಫೀಡಿಂಗ್ ಸ್ಪಾಟ್ ಗಳನ್ನಾಗಿ) ಗುರುತಿಸಿದೆ. ಗುರುತಿಸಲಾದ ಸ್ಥಳಗಳಲ್ಲಿ ಫೀಡಿಂಗ್ ಪಾಯಿಂಟ್ ಎಂಬ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಸದರಿ ಸ್ಥಳಗಳಲ್ಲಿ ಆಹಾರ ನೀಡಬಹುದೆಂದು ಕೇಂದ್ರ ನಗರ ಪಾಲಿಕೆ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಅವರು ತಿಳಿಸಿದ್ದಾರೆ.
ಮಾನವ ಮತ್ತು ಸಮುದಾಯ ಪ್ರಾಣಿಗಳ ನಡುವೆ ಸಹಬಾಳ್ವೆ ವೃದ್ಧಿಸಲು ಮತ್ತು ಸಂಘರ್ಷ ಕಡಿಮೆಗೊಳಿಸಲು ಬೀದಿ / ಸಮುದಾಯ ನಾಯಿಗಳಿಗೆ ಆಹಾರ ನೀಡುವ ಕಾರ್ಯವು ಮಹತ್ವದ್ದಾಗಿದೆ. ಸಮುದಾಯ ನಾಯಿಗಳಿಗೆ / ಬೀದಿನಾಯಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಆಹಾರ ಒದಗಿಸುವುದರಿಂದ ಶ್ವಾನಗಳ ಹಸಿವು ನೀಗಿಸುವ ಮೂಲಕ ಅವುಗಳ ಕ್ರೂರ ಸ್ವಭಾವ ಮತ್ತು ಕಚ್ಚುವ ಪ್ರವೃತ್ತಿಯನ್ನು ಕಡಿಮೆಗೊಳಿಸಬಹುದಾಗಿದೆ. ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಹಾಗೂ ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ನಿರ್ವಹಿಸಲು ಇದು ಸಹಕಾರಿಯಾಗಿರುತ್ತದೆ ಎಂದು ಅಭಿವೃದ್ಧಿ ವಿಭಾಗದ ಹೆಚ್ಚುವರಿ ಆಯುಕ್ತರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನಿರ್ದೇಶನ ಹಾಗೂ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮಾರ್ಗಸೂಚಿಗಳನ್ವಯ ಮುಖ್ಯರಸ್ತೆಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು ಸೇರಿದಂತೆ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತಹ ಮತ್ತು ಜನಸಂದಣಿ ಪ್ರದೇಶದಿಂದ ದೂರದಲ್ಲಿರುವ, ಸ್ಥಳೀಯವಾಗಿ ಆಹಾರ ನೀಡುವವರು ಹಾಗೂ ಪ್ರಾಣಿ ಪ್ರಿಯರು ಬೀದಿನಾಯಿಗಳಿಗೆ ಆಹಾರ ನೀಡಲು ಬಯಸುವ ಆದ್ಯತಾ ಸ್ಥಳಗಳಲ್ಲಿಯೇ, ಪಶುವೈದ್ಯಾಧಿಕಾರಿಗಳು ಮತ್ತು ಪಶುಪಾಲನಾ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ಅಧಿಕೃತವಾಗಿ ಆಹಾರ ನೀಡುವ ಸ್ಥಳಗಳನ್ನು (ಫೀಡಿಂಗ್ ಸ್ಪಾಟ್ ಗಳನ್ನು) ಗುರುತಿಸಿಲಾಗಿದೆ ಎಂದು ತಿಳಿಸಿದ್ದಾರೆ.
ಗುರುತಿಸಲಾದ ಫೀಡಿಂಗ್ ಸ್ಪಾಟ್‌ಗಳ ವಿವರ
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಜೀವನ್ ಭೀಮಾನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಹಲಸೂರು, ಇಂದಿರಾನಗರ, ಯಮಹಲ್, ಕಾಟನ್ ಪೇಟೆ, ಬಿನ್ನಿಪೇಟೆ, ಅಗರಂ, ಅಗ್ರಹಾರ, ದೊಮ್ಮಲೂರು, ಎಚ್.ಎ.ಎಲ್ ಸೇರಿದಂತೆ ಎಲ್ಲಾ 43 ವಾರ್ಡ್ ಗಳಲ್ಲಿ 90 ಸ್ಥಳಗಳನ್ನು ಗುರುತಿಸಲಾಗಿದೆ. ಆ ಸ್ಥಳಗಳಲ್ಲಿ ಆಹಾರ ನೀಡುವ ಸ್ಥಳವೆಂದು ಸಾರ್ವಜನಿಕ ಮಾಹಿತಿಯ ಫಲಕಗಳನ್ನು ಸಹ ಅಳವಡಿಸಿದ್ದು, ಸಾರ್ವಜನಿಕರು / ಪ್ರಾಣಿಪ್ರಿಯರು ಈ ಸ್ಥಳದಲ್ಲಿ ಆಹಾರ ನೀಡಲು ಪಾಲಿಕೆ ಮನವಿ ಮಾಡಿದೆ.
ಈ ನಿಯಮಗಳನ್ನು ಪಾಲಿಸಲು ಸೂಚನೆ
1. ಅಧಿಕೃತವಾಗಿ ಗುರುತಿಸಲಾದ ಫೀಡಿಂಗ್ ಸ್ಪಾಟ್‌ಗಳಲ್ಲೇ ಆಹಾರವನ್ನು ನೀಡಬೇಕು.
2. ಮುಖ್ಯ ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಆಹಾರ ನೀಡುವಂತಿಲ್ಲ.
3. ಬೀದಿ ನಾಯಿಗಳಿಗೆ ಆಹಾರ ನೀಡಿದ ನಂತರ ಸ್ಥಳವನ್ನು ಸ್ವಚ್ಛವಾಗಿಡುವುದು ಆಹಾರ ನೀಡುವವರ ಜವಾಬ್ದಾರಿಯಾಗಿರುತ್ತದೆ.
4. ಎಲ್ಲಾ ಸಾರ್ವಜನಿಕರು ಸಹ ಬೀದಿನಾಯಿಗಳಿಗೆ ನಿಗದಿಪಡಿಸಿದ ಸ್ಥಳದಲ್ಲಿ ಆಹಾರ ನೀಡಬಹುದು. ಬೀದಿನಾಯಿಗಳಿಗೆ ಆಹಾರ ನೀಡುವುದನ್ನು ತಡೆಯುವುದು ಶಿಕ್ಷಾರ್ಹ ಅಪರಾಧವಾಗುತ್ತದೆ.
5. ಅಧಿಕೃತ ಆಹಾರ ನೀಡುವ ಸ್ಥಳಗಳಲ್ಲಿ (ಫೀಡಿಂಗ್ ಸ್ಪಾಟ್ ಗಳಲ್ಲಿ) ಅಳವಡಿಸಿರುವ ಫಲಕಗಳನ್ನು ಸ್ಥಳಾಂತರಿಸುವುದು, ವಿರೂಪಗೊಳಿಸುವುದು ಹಾಗೂ ಧ್ವಂಸಗೊಳಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
6. ಬೀದಿ ನಾಯಿಗಳಿಗೆ ಹಾನಿ ಮಾಡುವುದು ಅಥವಾ ಕಿರುಕುಳ ನೀಡುವುದು ಕಾನೂನುಬಾಹಿರವಾಗಿರುತ್ತದೆ.
7. ಸಾರ್ವಜನಿಕರ ಸುರಕ್ಷತೆ ಕಾಪಾಡುವಂತೆ ಶಿಸ್ತಿನಿಂದ ಆಹಾರ ನೀಡುವುದು ಸೇರಿದಂತೆ ಇನ್ನಿತರೆ ನಿಯಂತ್ರಿತ ಹಾಗೂ ವ್ಯವಸ್ಥಿತ ಕ್ರಮದ ಮೂಲಕ ಬೀದಿನಾಯಿಗಳಿಗೆ ನಿಗದಿತ ಸ್ಥಳಗಳಲ್ಲಿಯೇ ಆಹಾರ ನೀಡುವಂತೆ ಸಾರ್ವಜನಿಕರಲ್ಲಿ ಪಾಲಿಕೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications