Bengaluru Second Airport: ಶಿರಾ ಸ್ಥಳ ಮತ್ತೆ... ಈ ಪ್ರಭಾವಿ ನಾಯಕರು ಸೂಚಿಸಿದ ಸ್ಥಳ ಆಯ್ಕೆ ಆಗುತ್ತಾ?
ಬೆಂಗಳೂರು, ಜುಲೈ 17: ಬೆಂಗಳೂರು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡಕ್ಕೆ ಪರ್ಯಾಯವಾಗಿ ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Second Airport) ನಿರ್ಮಿಸಲು ಮುಂದಾಗಿದ್ದ ಕರ್ನಾಟಕ ಸರ್ಕಾರಕ್ಕೆ ತಾತ್ಕಾಲಿಕವಾಗಿ ಹಿನ್ನಡೆ ಆಗಿದೆ. ಗುರುತಿಸಿದ್ದ ಮೂರು ಸ್ಥಳ ಸೂಕ್ತವಲ್ಲ ಎಂದು ತಜ್ಞರು ಹೇಳುತ್ತಿದ್ದಂತೆ ಮತ್ತೆ ಹಳೇಯ ಸ್ಥಳಗಳ ಹೆಸರು ಮುನ್ನೆಲೆಗೆ ಬರುತ್ತಿದೆ. ಮೂರು ಸ್ಥಳಗಳ ಗುರುತಿಸುವಾಗ ಕೈ ಬಿಟ್ಟ ಸ್ಥಳಗಳಲ್ಲಿ ಯೋಜನೆ ನಿರ್ಮಾಣಕ್ಕೆ ಒತ್ತಾಯ ಹೆಚ್ಚಾಗಬಹುದು ಎನ್ನಲಾಗಿದೆ. ಈ ಮೂಲಕ ರಾಜಕಾರಣಿಗಳಿಂದ ಮತ್ತೆ ಪೈಪೋಟಿ ಏರ್ಪಡಲಿದೆ.
ಹೌದು, ಬೆಂಗಳೂರು ಎರಡನೇ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆಯಲ್ಲಿ ಶಿರಾ ವ್ಯಾಪ್ತಿಯಲ್ಲಿ ನಿರ್ಮಿಸುವಂತೆ ಪ್ರಭಾವಿ ರಾಜಕಾರಣಿಗಳೇ ಒತ್ತಾಯಿಸಿದ್ದರು. ಇತ್ತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕನಕಪುರ ವ್ಯಾಪ್ತಿಯಲ್ಲಿ ಏರ್‌ಪೋರ್ಟ್ ಸ್ಥಾಪಿಸಲು ಮುಂದಾಗಿದ್ದರು. ಒಟ್ಟು ಮೂರು ಸ್ಥಳ ಕೇಂದ್ರದ ಅಂಗಳಕ್ಕೆ ತಲುಪಿತು. ಆದರೆ ವರದಿ ಇನ್ನು ಸಲ್ಲಿಕೆ ಆಗಿಲ್ಲ. ಅಷ್ಟರೊಳಗಾಗಿ ಮೂರು ಸ್ಥಳಗಳಲ್ಲಿ ನಿರ್ಮಾಣ ಸೂಕ್ತ ಅಲ್ಲ ಎಂದು ವಿಮಾನಯಾನ ತಜ್ಞ ದೇವೇಶ್ ಅಗರವಾಲ್ ಅವರು ತಿಳಿಸಿದ್ದಾರೆ.

ಏರ್‌ಪೋರ್ಟ್ : ಹಳೆಯ ಸ್ಥಳಗಳು ಯಾವುವು?
ಹಾಗಾದರೆ ಬೆಂಗಳೂರು-ಮೈಸೂರು ಮಧ್ಯೆ ಅಂದರೆ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಿರ್ಮಿಸುವ ಬೇಡಿಕೆ, ಶಿರಾ ಭಾಗದಲ್ಲಿ ನಿರ್ಮಾಣ, ಚಿತ್ರದುರ್ಗದಲ್ಲಿ ನಿರ್ಮಾಣ ಹಾಗೂ ಉತ್ತರ ಕರ್ನಾಟಕದಲ್ಲಿ ನಿರ್ಮಿಸುವಂತೆ ಈಗಾಗಲೇ ಇಟ್ಟಿದ್ದ ಬೇಡಿಕೆಗಳು ಮತ್ತೆ ಮುನ್ನೆಲೆಗೆ ಬರಲಿವೆ. ಏಕೆಂದರೆ ಬೆಂಗಳೂರು ಸಂಚಾರ ದಟ್ಟಣೆಯ ತವರೂರು. ಈಗಾಗಲೇ ಅಭಿವೃದ್ಧಿ ವಿಚಾರದಲ್ಲಿ ಪ್ರಾದೇಶಿಕ ಅಸಮಾನತೆ ಇದೆ. ಈ ಹಿಂದೆ ಮಧ್ಯ ಕರ್ನಾಟಕದಲ್ಲಿ ನಿರ್ಮಿಸುವಂತೆ ಶಾಸಕ ಟಿ. ರಘುಮೂರ್ತಿ, ಉತ್ತರ ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಆಗ್ರಹಿಸಿದ್ದರು.
ಪ್ರಭಾವಿ ನಾಯಕರಾದ ಸಚಿವ ವಿ.ಸೋಮಣ್ಣ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಶಿರಾ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದರು. ಶಿರಾದ ದಾಬಾಸ್‌ಪೇಟೆ ಭಾಗದಲ್ಲಿ ಡಿಆರ್‌ಡಿಓ ಕಚೇರಿ, ರಕ್ಷಣಾ ಕಚೇರಿ, ಕೈಗಾರಿಕೆಗಳು ಇವೆ. ಇಲ್ಲಿ ನಿರ್ಮಾಣವಾದರೆ ಸುತ್ತಮುತ್ತಲಿನ ಅನೇಕ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಹತ್ತಿರವೇ ರಾಷ್ಟ್ರೀಯ ಹೆದ್ದಾರಿ -4 (NH4) ಇದೆ. ಇದೇ ವಿಚಾರವಾಗಿ ರಾಜ್ಯ ರಾಜಕಾರಣಿಗಳ ಮಧ್ಯದಲ್ಲೇ ಪೈಪೋಟಿ ನಡೆದಿತ್ತು. ಇದೀಗ ಮತ್ತೆ ಅದೇ ಸ್ಥಳಗಳಲ್ಲಿ ಏರ್‌ಪೋರ್ಟ್ ಸ್ಥಾಪನೆಗೆ ಒತ್ತಾಯ ಕೇಳಿ ಬಂದಿವೆ.
ರಾಜ್ಯ ಸರ್ಕಾರದ ನಡೆಯೇನು?
ಕೈಗಾರಿಕೆ ಸಚಿವರು ಹಾಗೂ ಸರ್ಕಾರದ ಮುಂದಾಳತ್ವದಲ್ಲಿ ಕನಕಪುರ, ಮಾರ್ಗ ರಸ್ತೆಯ ಎರಡು ಸ್ಥಳ ಸೇರಿ ಒಟ್ಟು ಮೂರು ಸ್ಥಳಗಳನ್ನು ಅಂತಿಮಗೊಳಿಸಲಾಯಿತು. ನಂತರ ಕೇಂದ್ರ ಎಎಐ ತಂಡ ಬಂದು ಮೂರು ಸ್ಥಳ ಪರಿಶೀಲನೆ ಮಾಡಿದರು. ಆದರೆ ಎಎಐ ತಂಡ ಮೂರು ತಿಂಗಳಾದರು ರಾಜ್ಯ ಸರ್ಕಾರಕ್ಕೆ ವರದಿ ನೀಡಿಲ್ಲ. ಹೀಗಾಗಿ ಎಂಬಿ ಪಾಟೀಲ್ ಅವರೇ ಕೇಂದ್ರ ವಾಯುಯಾನ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ..
ಈ ಮಧ್ಯೆ ಚಿತ್ರದುರ್ಗ, ಹುಬ್ಬಳ್ಳಿ ಹಾಗೂ ತುಮಕೂರು ಜಿಲ್ಲೆ ವ್ಯಾಪ್ತಿಯ ಶಿರಾ ಭಾಗದಲ್ಲಿ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವಂತೆ ಆಗ್ರಹ ಕೇಳಿ ಬಂದಿದೆ. ಮತ್ತೆ ತೆರೆಮರೆಯ ಕಸರತ್ತು ಜೋರಾಗುವ ಲಕ್ಷಣಗಳು ಇವೆ. ತಮಿಳುನಾಡಿನ ಸರ್ಕಾರದಿಂದ ಹೊಸೂರು ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ಏರ್‌ಪೋರ್ಟ್ ನಿರ್ಮಾಣ ಪ್ರಕ್ರಿಯೆ ವೇಗಗೊಳಿಸಿದೆ.












Click it and Unblock the Notifications