Bengaluru second airport: ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಬ್ರೇಕ್, ಎಚ್‌ಎಎಲ್‌ಗೆ ಹೊಸ ಲುಕ್?
ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ನಿರ್ಮಾಣದ ವಿಚಾರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ರಾಜ್ಯ ಸರ್ಕಾರವು ಇತ್ತ ಎರಡನೇ ಏರ್‌ಪೋರ್ಟ್ ನಿರ್ಮಿಸಲು ತರಾತುರಿಯಲ್ಲಿದ್ದರೆ, ಅತ್ತ ತಮಿಳುನಾಡು ಸರ್ಕಾರ ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಹೊಸ ಏರ್‌ಪೋರ್ಟ್ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿಕೊಂಡಿದೆ. ಈಗ ಎರಡನೇ ಏರ್‌ಪೋರ್ಟ್ ಬದಲಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಏರ್‌ಪೋರ್ಟ್ ಅನ್ನೇ ಪುನಾರಂಭಿಸುವ ಬಗ್ಗೆ ಕೇಂದ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಪುನರಾರಂಭಿಸುವ ಕುರಿತು ಮುಂದಿನ ವಾರ ಸಭೆ ನಡೆಸುವುದಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಮುಂದಿನ ವಾರದ ದೆಹಲಿಯಲ್ಲಿ ಈ ಸಭೆ ನಡೆಯಲಿದೆ. ನಾಗರಿಕ ವಿಮಾನಯಾನ ಸಚಿವರ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಮತ್ತು ಎಚ್‌ಎಎಲ್‌ನ ಅಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ.

ಹೊಸ ವಿಮಾನ ನಿಲ್ದಾಣದ ಬದಲಿಗೆ ಬೆಂಗಳೂರಿನಲ್ಲಿ ಮೊದಲಿನಿಂದಲೂ ಇರುವ ಹಳೆಯ ಎಚ್‌ಎಎಲ್ ಏರ್‌ಪೋರ್ಟ್ ಅನ್ನೇ ಮತ್ತೆ ಆರಂಭಿಸುವುದರಿಂದ ನಗರಕ್ಕೆ ಇನ್ನೂ ಅನುಕೂಲವಾಗಲಿದೆ. ಎಚ್‌ಎಎಲ್ ನಗರದ ಕೇಂದ್ರ ಭಾಗದಲ್ಲಿ ಇರುವುದರಿಂದ ವಾಣಿಜ್ಯ ವಿಮಾನ ನಿಲ್ದಾಣದ ಎಲ್ಲ ಸೌಲಭ್ಯಗಳಿಗೆ ಸೂಕ್ತ ಜಾಗವಾಗಲಿದೆ. ಇದರಿಂದ ಈಗಿರುವ ಬೆಂಗಳೂರು ಏರ್‌ಪೋರ್ಟ್ ಲಿಮಿಟೆಡ್ ಮಾತ್ರವಲ್ಲದೆ ಎಚ್‌ಎಎಲ್‌ಗೂ ಆದಾಯ ಬರಲಿದೆ ಎಂದು ತೇಜಸ್ವಿ ಸೂರ್ಯ ವಿವರಿಸಿದ್ದಾರೆ.
ಸದ್ಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 2008ರಲ್ಲಿ ಆರಂಭವಾಗಿತ್ತು. ಇದಕ್ಕೂ ಮೊದಲು ಎಚ್‌ಎಎಲ್ ಅನ್ನೇ ಬೆಂಗಳೂರು ಏರ್‌ಪೋರ್ಟ್ ಎಂದು ಕರೆಯಲಾಗುತ್ತಿತ್ತು. ಈಗ ಈ ಏರ್‌ಪೋರ್ಟ್ ಅನ್ನು ಮತ್ತೆ ಶುರು ಮಾಡಬೇಕು ಎಂದು ನಾಗರಿಕ ವಿಮಾನಯಾನ ಸಚಿವರಾದ ಕೆ.ರಾಮಮೋಹನ್ ನಾಯ್ಡು ಅವರೂ ಆಸಕ್ತಿ ತೋರಿದ್ದಾರೆ. ಇದಕ್ಕೆ ಎಚ್‌ಎಎಲ್ ಹಾಗೂ ಬಿಐಎಎಲ್ ಕೂಡ ಸಾಥ್ ಕೊಡುತ್ತಿವೆ ಎನ್ನಲಾಗಿದೆ.

ಈಗ ಎಚ್‌ಎಎಲ್ ಏರ್‌ಪೋರ್ಟ್ ಮತ್ತೆ ಶುರುವಾಗುವುದರಿಂದ ಇದನ್ನು ದೇಶಿಯ ವಿಮಾನ ನಿಲ್ದಾಣವಾಗಿ ಬಳಸಿಕೊಳ್ಳಬಹುದು. ಅಂತರರಾಜ್ಯ ವಿಮಾನಗಳ ಸೇವೆ ಸೇರಿದಂತೆ ಪ್ರಾದೇಶಿಕ ವಿಮಾನ ಸೇವೆಗಾಗಿ ಇದನ್ನು ಉಪಯೋಗಿಸಬಹುದು. ವೈಟ್‌ಫೀಲ್ಡ್ ಸೇರಿದಂತೆ ಐಟಿ ಕಾರಿಡಾರ್‌ಗಳಿಗೆ ವಿದೇಶಗಳಿಂದ ಭೇಟಿ ನೀಡುವವರಿಗೂ ಎಚ್‌ಎಎಲ್ ಹತ್ತಿರವಾಗಲಿದೆ. ಅವರ ಬಿಸಿನೆಸ್ ಸಂಪರ್ಕದ ಉದ್ದೇಶದಿಂದಲೂ ಇದು ಸೂಕ್ತ ಜಾಗ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಸೋಶಿಯಲ್ ಮೀಡಿಯಾದಲ್ಲೂ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಮತ್ತೆ ಆರಂಭಿಸಬೇಕು ಎಂದು ಅಭಿಯಾನ ಶುರುವಾಗಿದೆ. ಈ ಬಗ್ಗೆ ತೇಜಸ್ವಿ ಸೂರ್ಯ ಅವರೂ ಕೇಂದ್ರ ಸಂಸತ್‌ನ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮನವಿ ಮಾಡಿದ್ದಾರೆ. ಎಚ್‌ಎಎಲ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಬೇಕಾದ ಎಲ್ಲ ಸೌಕರ್ಯಗಳು ಈಗಾಗಲೇ ಇದೆ. ಹಾಗಾಗಿ ಅದನ್ನು ಬಳಸಿಕೊಂಡರೆ ಪ್ರಯಾಣದಿಂದ ಸಮಯದ ಉಳಿಯಲಿದೆ. ಮತ್ತೊಂದೆಡೆ ಹೆಬ್ಬಾಳ ಫ್ಲೈಓವರ್ ಬಳಿಕ ಟ್ರಾಫಿಕ್ ಕಡಿಮೆ ಮಾಡಲು ಕೂಡ ನೆರವಾಗಲಿದೆ.
ಈ ಹಿಂದೆ ಎಚ್‌ಎಎಲ್ ಏರ್‌ಪೋರ್ಟ್ ನಗರದ ಒಳಭಾಗದಲ್ಲಿ ಇರುವುದರಿಂದ ದಟ್ಟಣೆ ಹೆಚ್ಚಾಗಿತ್ತು. ಈಗ ಕೆಂಪೇಗೌಡ ಏರ್‌ಪೋರ್ಟ್ ಇರುವುದರಿಂದ ದಟ್ಟಣೆ ಕಡಿಮೆಯಾಗಿದೆ. ಹಾಗಾಗಿ ಈಗ ಎಚ್‌ಎಎಲ್ ಅನ್ನೇ ಹೊಸ ನಿಲ್ದಾಣವಾಗಿ ಬಳಸಿಕೊಳ್ಳಬಹುದು. ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳು ಇಲ್ಲಿವೆ ಎಂದು ಹೇಳಲಾಗುತ್ತಿದೆ.












Click it and Unblock the Notifications