Bengaluru Second Airport: ವಿಮಾನ ನಿಲ್ದಾಣ ಯೋಜನೆ ಚುರುಕು, ಮುಂದಿನ ವಾರವೇ ವರದಿ ಸಲ್ಲಿಕೆ
ಬೆಂಗಳೂರು, ನವೆಂಬರ್ 21: ಉದ್ಯಾನ ನಗರಿ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಬೇಕು ಎಂಬ ಬೇಡಿಕೆ ಇದೆ. ಈ ನಿಲ್ದಾಣವನ್ನು ಎಲ್ಲಿ ನಿರ್ಮಾಣ ಮಾಡಬೇಕು? ಎಂದು ಇನ್ನೂ ಸಹ ಸ್ಥಳ ಅಂತಿಮಗೊಳಿಸಿಲ್ಲ. ಸರ್ಕಾರ ಈ ವಿಚಾರದಲ್ಲಿ ವಿಳಂಬ ಮಾಡುತ್ತಿದೆ ಎಂಬ ಆರೋಪದ ನಡುವೆಯೇ ಯೋಜನೆಗೆ ವೇಗ ನೀಡಲು ಸರ್ಕಾರ ಮುಂದಾಗಿದೆ. ಶೀಘ್ರವೇ ಸ್ಥಳ ಅಂತಿಮವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.
ತಮಿಳುನಾಡು ರಾಜ್ಯ ಸರ್ಕಾರ ಬೆಂಗಳೂರು ಸಮೀಪದ ಹೊಸೂರಿನಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ ಘೋಷಣೆ ಮಾಡಿತು. ಬಳಿಕ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣದ ಯೋಜನೆಗೆ ಚಾಲನೆ ನೀಡಿತು. ಆದರೆ ಇನ್ನೂ ಸಹ ವಿಮಾನ ನಿಲ್ದಾಣದ ಸ್ಥಳ ಅಂತಿಮಗೊಳಿಸಿಲ್ಲ.

ಆಗಸ್ಟ್ ತಿಂಗಳಿನಲ್ಲಿ ಸರ್ಕಾರ 2ನೇ ವಿಮಾನ ನಿಲ್ದಾಣಕ್ಕಾಗಿ ಸ್ಥಳವನ್ನು ಹುಡುಕಾಡಲು ಪ್ರಾರಂಭಿಸಿತು. ಐಡಿಇಸಿ ಎಂಬ ಸಂಸ್ಥೆಯು ಅಧ್ಯಯನವನ್ನು ನಡೆಸಿ, 7 ಸಂಭಾವ್ಯ ಸ್ಥಳಗಳನ್ನು ಗುರುತಿಸಿತು. ಆದರೆ ಸ್ಥಳದ ವಿಚಾರದಲ್ಲಿ ಸಚಿವರ ನಡುವೆ ಒಮ್ಮತ ಮೂಡಿಲ್ಲ. ಅಷ್ಟರಲ್ಲೇ ಉಪ ಚುನಾವಣೆ, ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಬಂದ ಕಾರಣ ಸ್ಥಳ ಅಂತಿಮಗೊಳ್ಳಲಿಲ್ಲ.
ಯೋಜನೆಯತ್ತ ಸರ್ಕಾರದ ಗಮನ: ಈಗ ಎಲ್ಲಾ ಕಾರ್ಯಗಳನ್ನು ಮುಗಿಸಿ ಸರ್ಕಾರ ಮತ್ತೆ ಬೆಂಗಳೂರು ನಗರದ ಉದ್ದೇಶಿತ ಎರಡನೇ ವಿಮಾನ ನಿಲ್ದಾಣ ಯೋಜನೆಯತ್ತ ಗಮನಹರಿಸಿದೆ. ರಾಜ್ಯದ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ ವಿಮಾನ ನಿಲ್ದಾಣದ ಸ್ಥಳ ಗುರುತಿಸುವ ಕಾರ್ಯ ಅಂತಿಮ ಹಂತದಲ್ಲಿದೆ.
ಎಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬೇಕು? ಎಂಬ ವಿವರವಾದ ವರಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಮುಂದಿನ ವಾರ ಸಲ್ಲಿಕೆ ಮಾಡಲಾಗುತ್ತದೆ. ವರದಿ ತಯಾರಾಗಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಖಾತ ಸಚಿವ ಎಂ. ಬಿ. ಪಾಟೀಲ್ ಅಂತಿಮ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.
ತುಮಕೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಬೇಡಿಕೆ ಇಟ್ಟಿದ್ದರು. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ರಾಮನಗರ ಜಿಲ್ಲೆಯ ಬಿಡದಿ, ಹಾರೋಹಳ್ಳಿಯಲ್ಲಿ ಸ್ಥಾಪನೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ಇಬ್ಬರು ಸಚಿವರ ನಡುವಿನ ಪೈಪೋಟಿಯ ಹೊತ್ತಿನಲ್ಲಿಯೇ ಉದ್ದೇಶಿತ ಎರಡನೇ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ರಾಮನಗರ, ಮಂಡ್ಯ ಹಾಗೂ ಮೈಸೂರು ಭಾಗದ ಜನಪ್ರನಿಧಿಗಳು ಮನವಿ ಸಲ್ಲಿಕೆ ಮಾಡಿದರು.
ಡಿ. ಕೆ. ಶಿವಕುಮಾರ್ ಅವರ ಕನಸಿನ ಸ್ಕೈಡೆಕ್ ಅಥವಾ ವೀಕ್ಷಣಾ ಗೋಪುರ ಯೋಜನೆ ಮತ್ತು ಎರಡನೇ ವಿಮಾನ ನಿಲ್ದಾಣದ ಸ್ಥಳದ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಕಾರಣ ಸ್ಥಳ ಅಂತಿಮ ವಿಳಂಬವಾಗಿದೆ. ಆದರೆ ಈಗ ಯೋಜನೆ ಚುರುಕುಗೊಳಿಸಲು ಸರ್ಕಾರ ಮುಂದಾಗಿದೆ.
ಈ ಕುರಿತು ಮಾತನಾಡಿರುವ ಐಟಿ-ಬಿಟಿ ಖಾತೆ ಸಚಿವ ಮತ್ತು ಸರ್ಕಾರದ ವಕ್ತಾರ ಪ್ರಿಯಾಂಕ್ ಖರ್ಗೆ, "ಸ್ಥಳವನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುತ್ತಿದೆ. ಯಾವುದೇ ವಿಳಂಬವಾಗುವುದಿಲ್ಲ" ಎಂದು ಹೇಳಿದ್ದಾರೆ.












Click it and Unblock the Notifications