Bengaluru Second Airport: 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಫೈನಲ್: ದೆಹಲಿಗೆ ಎಂ ಬಿ ಪಾಟೀಲ್
ಬೆಂಗಳೂರು, ಜುಲೈ 22: ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದ್ದು, ಇದು ಅಂದಾಜು ಸಾಮರ್ಥ್ಯ ಮಿತಿಯನ್ನು ಈಗಾಗಲೇ ತಲುಪಿದೆ. ಹೀಗಾಗಿ ಬೆಂಗಳೂರಿನಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೇಕೆಂಬ ಒತ್ತಾಯಗಳು ಕೇಳಿ ಬಂದಿದೆ. ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾಪನೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಮುಂದಾಗಿದ್ದಾರೆ.
ಇತ್ತ ಕರ್ನಾಟಕದಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದ್ರೆ, ಅತ್ತ ತಮಿಳುನಾಡು ಅಡ್ಡಿ ಮಾಡುವ ಸಾಧ್ಯತೆಗಳಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 150 ಕಿ.ಮೀ. ದೂರದಲ್ಲಿರುವ ಹೊಸೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಾಪನೆಗೆ ತಮಿಳುನಾಡು ಒತ್ತಾಯಿಸುತ್ತಿದೆ. ಹೊಸೂರು ಬೆಂಗಳೂರಿನ ಕೂಗಳತೆಯ ದೂರದಲ್ಲಿದೆ. ಕರ್ನಾಟಕ ಸರ್ಕಾರ ಮೂರು ಸಂಭಾವ್ಯ ಸ್ಥಳಗಳನ್ನು ಗುರುತಿಸಿದೆ. ಆದರೆ, ಬೆಂಗಳೂರು ಸುತ್ತಲಿರುವ ಮೂರು ಸ್ಥಳಗಳು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವಿಮಾನಯಾನ ತಜ್ಞರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ ಆಗಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಾಜ್ಯ ರಾಜಧಾನಿಗೆ ಸನಿಹದಲ್ಲೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಏಳು ಸ್ಥಳಗಳ ಫೈಕಿ ಗಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಏಪ್ರಿಲ್‌ನಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮೂರು ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸಿದೆ. ಆದ್ರೆ ಈ ಮೂರು ಸ್ಥಳಗಳ ಕುರಿತು ಅಂತಿಮ ವರದಿ ಇನ್ನು ಸಲ್ಲಿಕೆಯಾಗಿಲ್ಲ. ಇದೀಗ ಈ ಮೂರು ಸ್ಥಳಗಳು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಗ್ಯವಲ್ಲ ಎನ್ನುವ ಮಾತುಗಳು ಕೇಳಿ ಬಂದ ಹಿನ್ನೆಲೆ ಸಚಿವ ಎಂ ಬಿ ಪಾಟೀಲ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರನ್ನು ದೆಹಲಿಯಲ್ಲಿ ಗುರುವಾರ(ಜುಲೈ 24)ಭೇಟಿಯಾಗಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ತಮಿಳುನಾಡು ಸರ್ಕಾರ ಕರ್ನಾಟಕಕ್ಕೆ ಸೆಡ್ಡು ಹೊಡೆಯಲು ಹೊಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಳ ಆಯ್ಕೆಗೆ ವೇಗ ನೀಡಿದೆ. ತಮಿಳು ನಾಡು ಗುರುತಿಸಿದ್ದ ಎರಡು ಸ್ಥಳಗಳು ಏರ್‌ಪೋರ್ಟ್‌ಗೆ ಸೂಕ್ತ ಎಂದು ವರದಿ ಬಂದಿದೆ. ಆದರೆ, ಬೆಂಗಳೂರಿನಲ್ಲಿ ನಿರ್ಮಾಣವಾಗಬೇಕಿದ್ದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ. ಆರಂಭದಿಂದಲೂ ಸ್ಥಳ ಆಯ್ಕೆ ಕುರಿತು ಒಂದಲ್ಲ ಒಂದು ಕಂಟಕಗಳು ಎದುರಾಗುತ್ತಲೇ ಇದ್ದವು ಇದೀಗ ಮತ್ತೊಂದು ವಿಘ್ನ ಎದುರಾಗಿದ್ದು, ಕೇಂದ್ರ ಸಚಿವರ ಭೇಟಿ ಸಾಕಷ್ಟು ಮಹತ್ವವನ್ನ ಪಡೆದುಕೊಂಡಿದೆ.
ಕಳೆದ ಏಪ್ರಿಲ್‌ನಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡುವುದಾಗಿ ತಿಳಿಸಿತ್ತು. ಒಂದು ತಿಂಗಳ ಒಳಗೆ ವರದಿ ನೀಡುವುದಾಗಿ ಹೇಳಿತ್ತು, ಆದರೆ, ಮೂರು ತಿಂಗಳಾದರೂ ಸೂಕ್ತ ಸ್ಥಳ ಯಾವುದು ಎಂದು ಎಎಐ ವರದಿಯನ್ನು ಕೊಟ್ಟಿಲ್ಲ. ಒಂದು ಕಡೆ ಎಂಬಿ ಪಾಟೀಲ್ ಅವರು ರಾಮಮೋಹನ್ ನಾಯ್ಡು ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಇನ್ನೊಂದು ಕಡೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗ ಗುರುತಿಸಿರುವ ಮೂರು ಸ್ಥಳಗಳು ಸೂಕ್ತವಲ್ಲ ಎಂದು ವಿಮಾನಯಾನ ತಜ್ಞ ದೇವೇಶ್ ಅಗರ್ವಾಲ್ ಹೇಳಿದ್ದಾರೆ.
ಇನ್ನೂ ಹೊದ ಏರ್‌ಪೋರ್ಟ್ ನಿರ್ಮಾಣಕ್ಕೆ 4,500 ಎಕರೆ ಭೂಮಿ ಅಗತ್ಯವಿದೆ. ಈಗಾಗಲೇ ಕರ್ನಾಟಕ ಸರ್ಕಾರವು ಬೆಂಗಳೂರು ನಗರ ಜಿಲ್ಲೆಯ ಕಗ್ಗಲಿಪುರ, ರಾಮನಗರ ಜಿಲ್ಲೆಯ ಹಾರೋಹಳ್ಳಿ , ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿರುವ ಚಿಕ್ಕಸೋಲೂರನ್ನು ಗುರುತಿಸಿದೆ. ಆದರೆ, ಈ ಮೂರು ಸ್ಥಳಗಳು ಸೂಕ್ತವಲ್ಲ ಎಂದು ವಿಮಾನಯಾನ ತಜ್ಞರು ಹೇಳಿದ್ದಾರೆ. ಅವರು ಈ ಸ್ಥಳಗಳು ಸೂಕ್ತವಲ್ಲ ಎನ್ನುವುದಕ್ಕೆ ಅವರು ಕಾರಣಗಳನ್ನು ಕೂಡ ನೀಡಿದ್ದಾರೆ. ಈ ಮೂರು ಸ್ಥಳಗಳಲ್ಲಿ ಸರ್ಕಾರಕ್ಕೆ ಭೂಸ್ವಾಧೀನವು ದೊಡ್ಡ ಸಮಸ್ಯೆಯಾಗುವ ಸಾಧ್ಯತೆ ಇದ್ದು, ಕೇಂದ್ರ ವಿಮಾನಯಾನ ಸಚಿವರ ಜೊತೆಗೆ ಎಂ ಬಿ ಪಾಟೀಲ್ ಅವರು ಶೀಘ್ರದಲ್ಲಿ ಚರ್ಚೆ ನಡೆಸಲಿದ್ದು, ಅಂತಿಮ ಉತ್ತರ ಸಿಗಬೇಕಾಗಿದೆ.












Click it and Unblock the Notifications