Bengaluru Second Airport: 2ನೇ ವಿಮಾನ ನಿಲ್ದಾಣಕ್ಕೆ 3 ಸ್ಥಳವೂ ಸೂಕ್ತವಲ್ಲ: ಕಾರಣವೇನು? ಹೊಸ ಸ್ಥಳ ಯಾವುದು?
ಬೆಂಗಳೂರು, ಜುಲೈ 17: ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತೆ ಅನ್ನೋ ಖುಷಿ ವಿಚಾರ ಒಂದು ಕಡೆಯಾದ್ರೆ.. ಎರಡನೇ ಏರ್‌ಪೋರ್ಟ್ ಎಲ್ಲಿ ಆಗಬೇಕು ಎನ್ನುವ ಜಟಾಪಟಿ ಕಾಂಗ್ರೆಸ್ ಪಕ್ಷದಲ್ಲಿಯೇ ಶುರುವಾಗಿದೆ. ತಮಿಳು ನಾಡಿಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಎರಡನೇ ವಿಮಾನ ನಿಲ್ದಾಣ ನಿರ್ಮಾಣವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಎಲ್ಲಿ ಸ್ಥಾಪಿಸಬೇಕು ಅಂತ ಕಾಂಗ್ರೆಸ್‌ನಲ್ಲಿ ಸಚಿವರ ನಡುವೆ ಜಟಾಪಟಿ ಶುರುವಾಗಿದ್ದು, ಈಗಾಗಲೇ ಮೂರು ಜಾಗಗಳನ್ನು ಫೈನಲ್ ಮಾಡಿ ಕೇಂದ್ರಕ್ಕೆ ರಾಜ್ಯ ಸರ್ಕಾರವು ಪ್ರಸ್ತಾವನೆಯನ್ನ ಸಲ್ಲಿಸಿತ್ತು. ಈ ಹಿನ್ನೆಲೆ ವಿವಿಧ ಮಾನದಂಡ ಆಧರಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಂದ್ರೆ ಎಎಐ ಮೂರು ಸ್ಥಳಕ್ಕೂ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಕೇಂದ್ರದ ನಿರ್ಧಾರದ ಬಗ್ಗೆ ಕಾದುಕುಳಿತ್ತಿದ್ದ ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್ ಎದುರಾಗಿದೆ.

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ನಿರ್ಮಿಸಲು ಕರ್ನಾಟಕ ಸರ್ಕಾರವು ಮುಂದಾಗಿತ್ತು. ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಮಹತ್ವದ ಚರ್ಚೆ ನಡೆಸಲು ಕೇಂದ್ರ ಸರ್ಕಾರದ ವಿಮಾನಯಾನ ಸಚಿವರನ್ನು ಭೇಟಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಎರಡನೇ ವಿಮಾನ ನಿಲ್ದಾಣಕ್ಕೆ ಗುರುತಿಸಿರುವ ರಾಜ್ಯದ ಮೂರು ಸ್ಥಳಗಳು ಸೂಕ್ತವಲ್ಲ ಎಂದು ವಿಮಾನಯಾನ ತಜ್ಞ ದೇವೇಶ್ ಅಗರ್ವಾಲ್ ಶಾಕ್ ಕೊಟ್ಟಿದ್ದಾರೆ.
ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. 2035 ರ ವೇಳೆಗೆ ಬೆಂಗಳೂರು ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕರ ಸಂಖ್ಯೆ ಅಂದಾಜು 110 ಮಿಲಿಯನ್ ತಲುಪು ಸಾಧ್ಯತೆ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ಯೋಜನೆಯನ್ನು ಕರ್ನಾಟಕ ಸರ್ಕಾರ ಕೈಗೊಂಡಿತ್ತು. ಇದಕ್ಕಾಗಿ ರಾಜ್ಯ ಸರ್ಕಾರ 7 ಸ್ಥಳಗಳನ್ನು ಪರಿಶೀಲನೆ ಮಾಡಿ ಮೂರು ಸ್ಥಳಗಳನ್ನು ಅಂತಿಮಗೊಳಿಸಿತ್ತು. ಆ ಮೂರು ಸ್ಥಳಗಳನ್ನು ಕಳೆದ ಏಪ್ರಿಲ್‌ನಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಕೊಡುವುದಾಗಿ ತಿಳಿಸಿದ್ದರು.
ಮೂರು ಸ್ಥಳವನ್ನ ಪರೀಶೀಲನೆ ನಡೆಸಿದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು 15 ದಿನಗಳ ನಂತರ ವರದಿ ನೀಡುವುದಾಗಿ ಹೇಳಿದ್ದರು. ಆದರೆ, ಮೂರು ತಿಂಗಳಾದರೂ ಸೂಕ್ತ ಸ್ಥಳ ಯಾವುದು ಎಂದು ವರದಿ ಕೊಟ್ಟಿಲ್ಲ. ಹೀಗಾಗಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಯೋಜನೆಯನ್ನು ಚುರುಕುಗೊಳಿಸಲು ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.
3 ಸ್ಥಳಗಳು ಯಾಕೆ ಸೂಕ್ತವಲ್ಲ?
ವಿಮಾನ ನಿಲ್ದಾಣ ನಿರ್ಮಾಣಕ್ಕೆ 4,500 ಎಕರೆ ಭೂಮಿ ಅಗತ್ಯವಿದೆ. ಬೆಂಗಳೂರು ನಗರ ಜಿಲ್ಲೆಯ ಕಗ್ಗಲಿಪುರ, ರಾಮನಗರ ಜಿಲ್ಲೆಯ ಹರೋಹಳ್ಳಿ , ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ - ಕುಣಿಗಲ್ ರಸ್ತೆಯಲ್ಲಿರುವ ಚಿಕ್ಕ ಸೋಲೂರನ್ನು ಕರ್ನಾಟಕ ಸರ್ಕಾವು ಗುರುತಿಸಿದೆ. ಆದರೆ, ಈ ಮೂರು ಸ್ಥಳಗಳು ಸೂಕ್ತವಲ್ಲ ಎಂದು ವಿಮಾನಯಾನ ತಜ್ಞ ದೇವೇಶ್ ಅಗರ್ವಾಲ್ ಹೇಳಿದ್ದಾರೆ.
ರಾಜ್ಯ ಕರ್ನಾಟಕ ಸರ್ಕಾರಕ್ಕೆ ಸದ್ಯ ಭೂಸ್ವಾಧೀನವು ದೊಡ್ಡ ಸಮಸ್ಯೆಯಾಗಿದೆ. ಏಕೆಂದರೆ, ದೇವನಹಳ್ಳಿಯಲ್ಲಿ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಂಡಾಗ ರೈತರು ಪ್ರತಿಭಟನೆ ನಡೆಸಿದರು. ಇದು ಮುಂದಿನ ದಿನಗಳಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಸಮಸ್ಯೆಯಾಗಬಹುದು ಎನ್ನಲಾಗಿದೆ. ಜಾಗದ ವಿಚಾರದಲ್ಲಿ ತೀವ್ರ ವಿರೋಧಗಳು ಕೇಳಬರುವ ಸಾದ್ಯತೆ ಇದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಪ್ಪಂದದಂತೆ 25 ವರ್ಷಗಳನ್ನು ಪೂರೈಸುವವರೆಗೂ ಅಂದರೆ, 2033 ರವರೆಗೆ 150 ಕಿ.ಮೀ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣವನ್ನು ತೆರೆಯಲು ಸಾಧ್ಯವಿಲ್ಲ. ಈಗಾಗಲೇ ಆಯ್ಕೆ ಮಾಡಿರುವ ಸ್ಥಳಗಳು ನಗರ ಕೇಂದ್ರದಿಂದ 25 - 45 ಕಿ.ಮೀ ದೂರದಲ್ಲಿವೆ. ಅಲ್ಲದೆ, ಬೆಂಗಳೂರಿನ ಹಳೆಯ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಪುನಃ ತೆರೆಯಲು ಅಗರ್ವಾಲ್ ಸಲಹೆ ನೀಡಿದ್ದಾರೆ.












Click it and Unblock the Notifications