Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ: ರೇಸ್‌ನಿಂದ ಹೊರಗುಳಿದ ಪ್ರಮುಖ ಪ್ರದೇಶಗಳು!
Bengaluru Second Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಲಿಸ್ಟ್‌ನಿಂದ ಬಿಡದಿ ಸೇರಿದಂತೆ ಪ್ರಮುಖ ಪ್ರದೇಶಗಳೇ ಔಟ್ ಆಗಿವೆ. ಕನಕಪುರ ರೋಡ್ ಇನ್ ಆಗಿದೆ. ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಇದರ ಹಿಂದೆ ಹಲವು ಲೆಕ್ಕಾಚಾರಗಳು ಇವೆ. ಇನ್ನು ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇದೀಗ ಮೂರು ಜಾಗಗಳನ್ನು ಗುರುತು ಮಾಡಲಾಗಿದೆಯಾದರೂ ಇದು ಪ್ರಾರಂಭದ ಪ್ರಕ್ರಿಯೆಯಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಹೆಚ್ಚು ಸದ್ದು ಮಾಡದೆ ಜಾಗಗಳನ್ನು ಗುರುತು ಮಾಡಿ ಭಾರತೀಯ ವಿಮಾನ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಿದೆ. ಬಿಡದಿ ಸೇರಿದಂತೆ ವಿವಿಧ ಪ್ರಮುಖ ಪ್ರದೇಶಗಳು ಇದೀಗ ರೇಸ್‌ನಿಂದ ಹೊರಗುಳಿದಿವೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವೇಗ ಕೊಟ್ಟಿದೆ. ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಮುಂದಾಗುತ್ತಿದ್ದಂತೆಯೇ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಪ್ರಕ್ರಿಯೆಯು ವೇಗ ಪಡೆದುಕೊಂಡಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಹೆಸರು ಅಂತಿಮವಾಗುವ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಮೊದಲ ಹಂತದಲ್ಲಿ 7 ಸ್ಥಳಗಳನ್ನು ಎರಡನೇ ಹಂತದಲ್ಲಿ 5 ಸ್ಥಳಗಳನ್ನು ಗುರುತು ಮಾಡಲಾಗಿತ್ತು. ಇದೀಗ ಅಂತಿಮವಾಗಿ ಮೂರು ಜಾಗಗಳನ್ನು ಫೈನಲ್ ಮಾಡಲಾಗಿದೆ. ಆದರೆ, ಮೊದಲಿನಿಂದಲೂ ಚರ್ಚೆಯಲ್ಲಿದ್ದ ಬಿಡದಿಯನ್ನೇ ಲಿಸ್ಟ್‌ನಿಂದ ಕೈ ಬಿಟ್ಟಿರುವುದು ಕುತೂಹಲ ಮೂಡಿಸಿದೆ.

ಬಿಡದಿಯನ್ನು ಕೈಬಿಟ್ಟಿರುವ ಹಿಂದೆ ಜಾಗದ ಕೊರತೆ ಅಥವಾ ಅದಕ್ಕಿಂತ ಉತ್ತಮ ಜಾಗ ಸಿಕ್ಕಿದೆ ಎಂದೇ ಹೇಳಲಾಗುತ್ತಿದೆ. ಇನ್ನು ವಿಮಾನ ನಿಲ್ದಾಣವನ್ನು ಬಿಡದಿಯಲ್ಲಿ ನಿರ್ಮಾಣ ಮಾಡಿದರೆ ಬೆಂಗಳೂರು - ಮೈಸೂರು ಎರಡೂ ಭಾಗಕ್ಕೂ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಗುರುತಿಸುವ ಪ್ರದೇಶಗಳು ಎರಡೂ ಜಿಲ್ಲೆಗಳಿಗೂ ಸಮೀಪದಲ್ಲೇ ಇದೆಯಾದರೂ ಬೆಂಗಳೂರಿನಿಂದ ಸ್ವಲ್ಪ ದೂರವಾದಂತೆ ಆಗಿದೆ. ಆದರೆ ಇನ್ನೊಂದು ಅಚ್ಚರಿಯ ವಿಷಯವೆಂದರೆ ನೆಲಮಂಗಲ ಇನ್ನೂ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ರೇಸ್‌ನಲ್ಲಿ ಇದೆ.
ಬೆಂಗಳೂರು ದಕ್ಷಿಣ ಭಾಗದಲ್ಲೇ ವಿಮಾನ ನಿಲ್ದಾಣ: ಬೆಂಗಳೂರು ಎರಡನೇ ವಿಮಾನ ನಿಲ್ದಾಣವು ಬೆಂಗಳೂರಿನ ದಕ್ಷಿಣ ಭಾಗದಲ್ಲೇ ನಿರ್ಮಾಣವಾಗುತ್ತಿದೆ. ರಾಜ್ಯ ಸರ್ಕಾರವು ಈ ಹಿಂದೆಯೇ ಬೆಂಗಳೂರು ಎರಡನೇ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಸಮೀಪದಲ್ಲೇ ನಿರ್ಮಾಣ ಮಾಡುವುದಾಗಿ ಹೇಳಿತ್ತು. ಅಲ್ಲದೆ ಎಲ್ಲರಿಗೂ ಅನುಕೂಲವಾಗುವ ಮಾದರಿಯಲ್ಲಿ ಹಾಗೂ ಕೇಂದ್ರ ಭಾಗದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವುದಾಗಿ ಹೇಳಲಾಗಿತ್ತು. ಅದರಂತೆ ಇದೀಗ ಬೆಂಗಳೂರಿನಿಂದ 60ರಿಂದ 80 ಕಿ.ಮೀ ದೂರದಲ್ಲಿ ಇರುವ ಮೂರು ಜಾಗಗಳನ್ನು ಗುರುತು ಮಾಡಲಾಗಿದೆ.
ರೇಸ್‌ನಿಂದ ಹೊರಗುಳಿದ ಪ್ರಮುಖ ಪ್ರದೇಶಗಳು: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ರೇಸ್‌ನಿಂದ ತುಮಕೂರು, ಬಿಡದಿ ಹಾಗೂ ದೊಡ್ಡಬಳ್ಳಾಪುರ ಜಿಲ್ಲೆಗಳು ಹೊರಗೆ ಉಳಿದಂತೆ ಆಗಿವೆ. ಪ್ರಾಥಮಿಕ ಹಂತದಲ್ಲಿ ಈ ಭಾಗದಲ್ಲೂ ವಿಮಾನ ನಿಲ್ದಾಣ ನಿರ್ಮಾಣ ಆಗಬೇಕು ಎನ್ನುವ ಬಗ್ಗೆ ಭಾರೀ ಬೇಡಿಕೆಗಳು ಕೇಳಿ ಬಂದಿದ್ದವು. ಆದರೆ, ಇದು ಮೊದಲ ಹಂತದಲ್ಲೇ ಎಲಿಮಿನೇಟ್ ಆದಂತೆ ಆಗಿವೆ.
ಮೂರು ಸ್ಥಳ ನಿಗದಿ: ಇನ್ನು ಇದೀಗ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕನಕಪುರ ರಸ್ತೆ ಹಾಗೂ ಹಾರೋಹಳ್ಳಿಯಲ್ಲಿ 2 ಜಾಗ ಗುರುತು ಮಾಡಲಾಗಿದೆ. ನೆಲಮಂಗಲ ಕುಣಿಗಲ್ ರಸ್ತೆ ಸಹ ಇದರಲ್ಲಿ ಸೇರಿದೆ. ನೆಲಮಂಗಲ, ಕುಣಿಗಲ್ ರಸ್ತೆ ಹಾಗೂ ಕನಕಪುರ ರಸ್ತೆ ಫೈನಲ್ ಲಿಸ್ಟ್‌ನಲ್ಲಿ ಇವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಪೈಪೋಟಿ: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ವಿಚಾರವಾಗಿ ಕರ್ನಾಟಕದಲ್ಲಿಯೇ ಭಾರೀ ಪೈಪೋಟಿ ನಡೆದಿತ್ತು. ಈಗಲೂ ನಡೆಯುತ್ತಿದೆ ಸಹ. ತುಮಕೂರಿನಲ್ಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸಚಿವರು ಪ್ರಯತ್ನಿಸಿದ್ದರು. ರಾಜ್ಯ ಗೃಹಸಚಿವ ಜಿ. ಪರಮೇಶ್ವರ್ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಈ ಸಂಬಂಧ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಇದು ಸಾಧ್ಯವಾಗಿಲ್ಲ.
ತಮಿಳುನಾಡಿಗೆ ಟಕ್ಕರ್: ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಜಾಗವನ್ನು ನಿಗದಿ ಮಾಡುವ ಮೂಲಕ ತಮಿಳುನಾಡಿಗೆ ಟಕ್ಕರ್ ಕೊಟ್ಟಿದೆ. ತಮಿಳುನಾಡು ಸರ್ಕಾರ ಸಹ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಸಂಬಂಧ ಈಗಾಗಲೇ ಭಾರತೀಯ ವಿಮಾನ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸ್ಥಳ ಪರಿಶೀಲನೆ ಸಹ ಮುಕ್ತಾಯವಾಗಿದೆ.












Click it and Unblock the Notifications