Bengaluru Rains: ಶುಕ್ರವಾರ ಮಳೆ ಅಬ್ಬರಿಸಿದ ಮುಂಗಾರು, ಜುಲೈ 4ರವರೆಗೆ ವ್ಯಾಪಕ ಮಳೆ ಸಾಧ್ಯತೆ
ಬೆಂಗಳೂರು, ಜೂನ್ 28: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರವು ಮಳೆ ಮುಂದುವರಿದಿದ್ದು, ವಿವಿಧೆಡೆ ಹಗುರದಿಂದ ಸಾಧಾರಣ ಮಳೆ ಬಿದ್ದಿದೆ. ಹಲವು ಬಡಾವಣೆಗಳಲ್ಲಿ ಸಂಜೆ ಕೆಲ ಹೊತ್ತು ಹೊತ್ತು ವ್ಯಾಪಕ ಮಳೆ ಆಗಿದ್ದು ವರದಿ ಆಗಿದೆ. ಜುಲೈ 04 ರವರೆಗೆ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶುಕ್ರವಾರ ಮಧ್ಯಾಹ್ನದ ನಂತರ ವಿಜಯನಗರ, ಆರ್‌ಆರ್ ನಗರ, ಕೆಂಗೇರಿ, ನಾಯಂಡಹಳ್ಳಿ, ದೀಪಾಂಜಲಿ ನಗರ, ಜ್ಞಾನಭಾರತಿ, ಚಾಮರಾಜಪೇಟೆ, ಹಂಪಿನಗರ ಸೇರಿದಂತೆ ಮುಂದಾದ ಕಡೆಗಳಲ್ಲಿ ಜೋರು ಗಾಳಿ ಸಹಿತ ವ್ಯಾಪಕ ಮಳೆ ಸುರಿಯಿತು.

ಇದರಿಂದಾಗಿ ಮುಖ್ಯ ರಸ್ತೆಗಳಲ್ಲಿಯೇ ಅಲ್ಲಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನ ಸವಾರರಿಗೆ ಕಿರಿಕಿರಿ ಉಂಟಾಯಿತು. ರಸ್ತೆ ಸಿಗ್ನಲ್‌ಗಳಲ್ಲಿ ದಟ್ಟಣೆ ಉಂಟಾಗಿದ್ದು, ಕಂಡು ಬಂತು
ನಗರದ ಭಾಗದಲ್ಲಿ ಮಾತ್ರವಲ್ಲದೇ ಕೋರಮಂಗಲ, ಮಾರತ್ತಹಳ್ಳಿ, ವೈಟ್‌ಫಿಲ್ಡ್, ಹಳೆ ಮದ್ರಾಸ್ ರಸ್ತೆ, ಹೆಬ್ಬಾಳ, ಮಡಿವಾಳ ಹಾಗೂ ಇನ್ನಿತರ ಕಡೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆ ಆಯಿತು. ಕೆಲವು ಕಡೆಗಳಲ್ಲಿ ಮಳೆ ಜೊತೆಗೆ ಬಿಸಿಲು ಕಂಡು ಬಂದದ್ದು ವಿಶೇಷವಾಗಿತ್ತು.
ಮುಂಗಾರು ಬಿರುಸು: ಬೆಂಗಳೂರಲ್ಲಿ ಜುಲೈ 04ರವರೆಗೆ ಮಳೆ
ಹವಾಮಾನದಲ್ಲಿ ಉಂಟಾದ ಬದಲಾವಣೆಗಳ ಬೆನ್ನಲ್ಲೆ ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಉಂಟಾಗುತ್ತಾ ಬಂದಿತ್ತು. ಆದರೆ ಎಲ್ಲೂ ಹೇಳಿಕೊಳ್ಳುವಂತಹ ದೊಡ್ಡ ಮಟ್ಟದ ಮಳೆ ಆಗಿರಲಿಲ್ಲ. ಒಂದಷ್ಟು ಕಡೆಗಳಲ್ಲಿ ಸಾಮಾನ್ಯ ಮಳೆ ಆಗಿತ್ತು.

ಅದರ ಹೊರತಾಗಿ ಇಂದು ಜೂನ್ 28ರಂದು ಶುಕ್ರವಾರ ತುಸು ಮುಂಗಾರು ಮಳೆ ಬಿರುಸುಗೊಂಡಿದ್ದು, ಕಂಡು ಬಂತು. ಮುಂದಿನ ಒಂದು ವಾರ ಇದೇ ರೀತಿ ಮಳೆ ಮುಂದುವರಿಯಲಿದೆ. ಜುಲೈ 04ರವರೆಗೂ ಸಾಧಾರಣದಿಂದ ವ್ಯಾಪಕ ಮಳೆ ಆಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ಮುಂದಿನ ಒಂದು ವಾರ ಸಹ ನಗರದಲ್ಲಿ ಬೆಳಗ್ಗೆ, ಸಂಜೆ ಚಳಿಯ ವಾತಾವರಣ ಜೊತೆಗೆ ತೇವಭರಿತ ಗಾಳಿ ಬೀಸಲಿದೆ. ಈ ಅವಧಿಯಲ್ಲಿ ತಾಪಮಾನದ ಪ್ರಮಾಣ ನೋಡುವುದಾದರೆ, ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ.
ಕರ್ನಾಟಕದಲ್ಲಿ ಮಳೆ ಮುನ್ಸೂಚನೆ ಹೇಗಿದೆ?
ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ಅಬ್ಬರಿಸಿದ್ದ ಮಳೆರಾಯ ಕರಾವಳಿ ಹೊರತಾಗಿ ಉಳಿದ ಕಡೆಗಳಲ್ಲಿ ತುಸು ಬಿಡುವು ಪಡೆದುಕೊಳ್ಳಲಿದ್ದಾನೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಮುಂದಿನ ನಾಲ್ಕು ದಿನ (ಜುಲೈ 2ರವರೆಗೆ) ಭಾರೀ ಮಳೆ ಆಗಲಿದ್ದು, ಐಎಂಡಿ 'ಹಳದಿ ಎಚ್ಚರಿಕೆ' ಘೋಷಿಸಿದೆ.
ಉಳಿದಂತೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ಸಾಧಾರಣದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಶುಕ್ರವಾರದ ಐಎಂಡಿ ಮಳೆ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.
ಇಂದು ಬೆಳಗ್ಗೆ ಶನಿವಾರ ತುಸು ಬಿಸಿಲಿನ ವಾತಾವರಣ ಕಂಡು ಬಂದಿದೆ. ಈ ಮೂಲಕ ತಕ್ಕಮಟ್ಟಿಗೆ ಮಳೆಯ ವಾತಾವರಣ ಕಡಿಮೆ ಆಗಿದೆ ಎನ್ನಬಹುದು. ಹೀಗಿದ್ದರೂ ಸಹ ಸಂಜೆ ಹೊತ್ತಿಗೆ ಮತ್ತೆ ಮಳೆಯ ಆಗಮನ ಆದರೂ ಅಚ್ಚರಿ ಇಲ್ಲ. ಏಕೆಂದರೆ ಕಳೆದ ಕೆಲವು ದಿನಗಳಿಂದ ಬಿಸಿಲು ಸಹಿತ ಆಗಾಗ ತುಂತುರು ಮಳೆ ಆಗಿದೆ. ಸದ್ಯ ಇನ್ನೂ ಕೆಲವು ದಿನಗಳ ಕಾಲ ನಗರದಲ್ಲಿ ತುಂತುರು ಮಳೆಯ ವಾತಾವರಣ ಮುಂದುವರಣ ಮುಂದುವರಿಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications