ಬೆಂಗಳೂರಿನ ಇಂದಿರಾನಗರದ ಜನಪ್ರಿಯ ಕ್ಲಬ್ BFlat, BTDTಬಂದ್
ಬೆಂಗಳೂರು, ಸೆ. 19: ಬೆಂಗಳೂರಿನ ಇಂದಿರಾನಗರದ ಜನಪ್ರಿಯ ಬಿಫ್ಲಾಟ್ ಹಾಗೂ ಬಿಟಿಡಿಟಿ Been There Done That ಕ್ಲಬ್ ಬಂದ್ ಆಗುತ್ತಿದೆ. ಸಂಗೀತ ಪ್ರತಿಭೆ, ಸ್ಟಾಂಡ್ ಅಪ್ ಕಾಮಿಡಿಯನ್ ಗಳಿಗೆ ಕಳೆದ ಹತ್ತು ವರ್ಷಗಳಿಂದ ವೇದಿಕೆ ಒದಗಿಸುತ್ತಾ ಬಂದಿತ್ತು.
'ಅಕ್ಟೋಬರ್ 02ರಿಂದ ಕ್ಲಬ್ ಬಂದ್ ಆಗಲಿದೆ' ಎಂದು ಬಿಫ್ಲಾಟ್ ತನ್ನ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದೆ. ಬೆನ್ನಿ ದಯಾಳ್, ಲೂಯಿಜ್ ಬ್ಯಾಂಕ್ಸ್, ಮೋನಿಕಾ ಡೊಗ್ರಾ, ರಾಂಡಾಲ್ಫ್ ಕೊರಿಯಾ, ರಂಜಿತ್ ಬರೋತ್, ಸೌಲ್ ಮೇಟ್, ಕರಣ್ ಜೋಸೆಫ್, ತಾಖ್ ಮುಂತಾದ ಸಂಗೀತಗಾರರು, ಮ್ಯೂಸಿಕ್ ಬ್ಯಾಂಡ್ ಗಳು ಇಲ್ಲಿ ಪ್ರದರ್ಶನ ನೀಡಿವೆ.

ಮಾರ್ಚ್ 2009ರಲ್ಲಿ ಆರಂಭವಾದ ಕ್ಲಬ್ ಬೆಂಗಳೂರಿನ ಮ್ಯೂಸಿಕ್ ಪ್ರೇಮಿಗಳ ನೆಚ್ಚಿನ ತಾಣವಾಗಿತ್ತು. ಸ್ಟ್ಯಾಂಡ್ ಅಪ್ ಕಾಮಿಡಿ, ರಂಗಕರ್ಮಿಗಳು, ಕಾರ್ಯಾಗಾರ, ಸಿನಿಮಾ ಸ್ಕ್ರೀನಿಂಗ್ ಗಳಿಗೂ ಅವಕಾಶ ನೀಡಲಾಗುತ್ತಿತ್ತು. ಕ್ಲಬ್ ಬಂದ್ ಮಾಡುತ್ತಿರುವ ಹಿಂದಿನ ಕಾರಣ ಇನ್ನೂ ಬಹಿರಂಗವಾಗಿಲ್ಲ, ಮೂಲಗಳ ಪ್ರಕಾರ ಪೊಲೀಸ್ ಇಲಾಖೆಯಿಂದ ಕೆಲವು ಕ್ಲಬ್, ಪಬ್ ಗಳಿಗೆ ಅದರಲ್ಲೂ ಇಂದಿರಾನಗರದ ಪ್ರತಿಷ್ಠಿತ ಕ್ಲಬ್ ಗಳಿಗೆ ನೋಟಿಸ್ ಬಂದಿದೆ. ಲೈವ್ ಬ್ಯಾಂಡ್, ಪಬ್ ಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ದಳದಿಂದ ಬೆಂಕಿ ಅಪಘಾತದ ಸುರಕ್ಷತಾ ನಿಯಮ ಪಾಲಿಸುತ್ತಿಲ್ಲ ಎಂದು ಕ್ಲಬ್ಬಿಗೆ ನೋಟಿಸ್ ನೀಡಲಾಗಿತ್ತು. ಲೈವ್ ಮ್ಯೂಸಿಕ್ ಕಾರ್ಯಕ್ರಮ ಆಯೋಜನೆಗೆ ಲೈಸನ್ಸ್ ಪಡೆದಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಸುಮಾರು 22 ತಾಣಗಳು ಬಂದ್ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. ಇನ್ನು 27 ತಾಣಗಳ ವಿರುದ್ಧ ಐಪಿಸಿ ಸೆಕ್ಷನ್ 297 ಅನ್ವಯ ಪ್ರಕರಣಗಳು ದಾಖಲಾಗಿವೆ.












Click it and Unblock the Notifications