Bengaluru Rains: ಸಂಜೆಯ ವೇಳೆಗೆ ತಂಪಾದ ಸಿಲಿಕಾನ್ ಸಿಟಿ, ಹಲವೆಡೆ ಅಬ್ಬರಿಸಿದ ವರುಣ
ಕೋರಮಂಗಲ, ಸರ್ಜಾಪುರ ರಸ್ತೆ, ಜಯನಗರ, ಮಡಿವಾಳ, ಬಾಣಸವಾಡಿ, ಬಸವನಗುಡಿ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಬೆಂಗಳೂರು, ಮಾರ್ಚ್ 17: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆಯೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆಗಮನವಾಗಿದೆ. ಗುರುವಾರದಂತೆಯೇ ಶುಕ್ರವಾರ ಸಂಜೆಯಿಂದಲೇ ನಗರದ ಹಲವೆಡೆ ಮಳೆಯಾಗುತ್ತಿದೆ. ಕೆಲ ದಿನಗಳಿಂದ ಕಾದ ಕಾವಲಿಯಂತಾಗಿದ್ದ ಸಿಲಿಕಾನ್ ಸಿಟಿ ಈಗ ಫುಲ್ ತಂಪು ತಂಪು ಕೂಲ್ ಕೂಲ್ ಆಗಿದೆ.
ಶುಕ್ರವಾರ ಸಂಜೆ 6 ಗಂಟೆಯಿಂದ ಮಳೆ ಆರಂಭವಾಗಿದ್ದು, ಕೆಲವೆಡೆ ಸಾಧಾರಣವಾಗಿದ್ದರೇ ಮತ್ತೆ ಕೆಲವೆಡೆ ಭರ್ಜರಿ ಮಳೆಯಾಗಿದೆ. ಕೋರಮಂಗಲ, ಸರ್ಜಾಪುರ ರಸ್ತೆ, ಜಯನಗರ, ಮಡಿವಾಳ, ಬಾಣಸವಾಡಿ, ಬಸವನಗುಡಿ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ವಾಹನ ಸವಾರರು ನಿಧಾನಗತಿಯಲ್ಲಿ ಸಾಗುತ್ತಿದ್ದ ದೃಶ್ಯಗಳು ಕಂಡು ಬಂದಿವೆ. ಇನ್ನು ರಾಜಾಜಿನಗರ, ಯಶವಂತಪುರ, ಮಲ್ಲೇಶ್ವರಂ, ವಿಧಾನಸೌಧ, ಮೆಜೆಸ್ಟಿಕ್ ಸುತ್ತಮುತ್ತ ಸಾಧಾರಣದಿಂದ ತುಂತುರು ಮಳೆಯಾಗಿದೆ.

ಕೋರಮಂಗಲ, ಸರ್ಜಾಪುರ ರಸ್ತೆ, ಜಯನಗರ, ಮಡಿವಾಳ, ಬಾಣಸವಾಡಿ, ಬಸವನಗುಡಿ ಭಾಗಗಳಲ್ಲಿ ಜೋರು ಗಾಳಿಯೊಂದಿಗೆ ಒಂದೇ ಸಮನೇ ವರುಣ ಆರ್ಭಟಿಸಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದಿದೆ. ರಾಜಾಜಿನಗರ ಭಾಗಗಳಲ್ಲಿ ಬಿರುಸಾದ ಗಾಳಿಯಿದ್ದು, ತುಂತುರು ಮಳೆಯಾಗಿದೆ. ಗಾಳಿಯಿಂದ ವಾಹನ ಸವಾರರು ಕೊಂಚ ಕಾಲ ಪರದಾಡುವಂತಾಗಿದೆ.
ಬೆಂಗಳೂರಿನಲ್ಲಿ ಗುರುವಾರ ಮಾರ್ಚ್ 16 ರಂದು 3.4 ಮಿಮೀ ಮಳೆಯಾಗಿದೆ. ಇದು ಮೊದಲ ಮುಂಗಾರು ಪೂರ್ವ ಮಳೆಯಾಗಿದ್ದು ಇತರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಮಾರ್ಚ್ 19ರವರೆಗೆ ಮೋಡ ಕವಿದ ವಾತಾವರಣ ಇರಲಿದೆ. ರಾಜಧಾನಿಯಲ್ಲಿ ಗರಿಷ್ಠ 29 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಇದರ ಜೊತೆಗೆ ಮುಂದಿನ 48 ಗಂಟೆಗಳ ಕಾಲ ರಾಜ್ಯದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಸಮುದ್ರಮಟ್ಟದಲ್ಲಿ ಸೃಷ್ಟಿಯಾದ ಸುಳಿಗಾಳಿ ಕಾರಣದಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧಡೆ ಮುಂದಿನ ಮೂರು - ನಾಲ್ಕು ದಿನ ಹಗುರ ಮಳೆಯಾಗಲಿದೆ. ಎಂದು ಹವಾಮಾನ ಇಲಾಖೆ ಹೇಳಿದೆ.

ಗುರುವಾರ ತಡರಾತ್ರಿಯೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಬಸವನಗುಡಿ, ಕಾರ್ಪೋರೇಷನ್, ಹನುಮಂತ ನಗರ, ವಿದ್ಯಾಪೀಠ, ಯಲಹಂಕ, ಶಿವಾಜಿ ನಗರ, ವಿಧಾನಸೌಧ ಸುತ್ತಮುತ್ತ, ಯಲಹಂಕ, ರಾಜಾಜಿ ನಗರ, ಆರ್.ಟಿ.ನಗರದಲ್ಲಿಯೂ ಮಳೆಯಾಗಿತ್ತು.
ಇನ್ನು, ಕರ್ನಾಟಕದ ಒಳನಾಡಿನ ಕೆಲವು ಸ್ಥಳಗಳು ಮತ್ತು ಕರಾವಳಿ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿಗಾಳಿ ಅಂತ್ಯಗೊಂಡಿದ್ದು, ಶುಕ್ರವಾರವೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈ ಹಿಂದೆಯೇ ಹೇಳಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ (ಎನ್‌ಐಕೆ), ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ದಿನೇ ದಿನೆ ತಾಪಮಾನದಲ್ಲಿ ಬದಲಾವಣೆ ಆಗುತ್ತಿದ್ದು, ಇಷ್ಟು ದಿನ ಕಾಡುತ್ತಿದ್ದ ಬಿಸಿಲು ಮಾಯವಾಗಿ ಮಳೆ ಆರಂಬವಾಗಿದೆ. ಕಳೆದ ತಿಂಗಳು ಕರಾವಳಿ ಕರ್ನಾಟಕದಲ್ಲಿ ತಾತ್ಕಾಲಿಕವಾದ ಶಾಖದ ಅಲೆ ಕಂಡು ಬಂದಿತ್ತು. ಅರಬ್ಬಿ ಸಮುದ್ರ ಚಂಡಮಾರುತದಂತಹ ಅಲೆಗಳನ್ನು ಬೀಸುತ್ತಿದ್ದು, ಈಗ, ತೇವಾಂಶವು ಹೆಚ್ಚುತ್ತಿದ್ದು, ಈ ಕಾರಣದಿಂದ ಸಾಧಾರಣ ಮಳೆ ಮತ್ತು ಗುಡುಗು ಸಹಿತ ಮಳೆ ಆಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications