Bengaluru rain: ವಿಪತ್ತು ನಿರ್ವಹಿಸಲು ವಾರ್ಡಿಗೊಬ್ಬ ಇಂಜಿನಿಯರ್ ನಿಯೋಜನೆ, ಬಿಬಿಎಂಪಿ ಸೂಚನೆಗಳೇನು
ಬೆಂಗಳೂರು, ನವೆಂಬರ್ 07: ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನೂ 2-3 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದೆ. ಸುರಕ್ಷತಾ ದೃಷ್ಟಿಯಿಂದ ಈ ಕೂಡಲೇ ವಿಪತ್ತು ನಿರ್ವಹಣೆಗಾಗಿ ಪ್ರತಿ ವಾರ್ಡ್‌ನಲ್ಲಿಯು ಒಬ್ಬ ಇಂಜಿನಿಯರ್ ಗೆ ಜವಾಬ್ದಾರಿ ವಹಿಸಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿಯಾದ ರಾಕೇಶ್ ಸಿಂಗ್ ಎಂಟು ವಲಯ ಆಯುಕ್ತರಿಗೆ ನಿರ್ದೇಶಿಸಿದರು.
ಬೆಂಗಳೂರಿನ ವಿವಿಧೆಡೆ ಸೋಮವಾರ ರಾತ್ರಿ ಹಲವು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಇಂದು ವರ್ಚ್ಯುವಲ್ ಮೂಲಕ ನಡೆದ ಸಭೆಯಲ್ಲಿ ಮಾತನಾಡಿದ ರಾಕೇಶ್ ಸಿಂಗ್ ಅವರು, ವಿಪತ್ತು ನಿರ್ವಹಣೆ, ರಸ್ತೆ ಗುಂಡಿ, ಕಸದ ಸಮಸ್ಯೆ, ಪಾದಚಾರಿ ಮಾರ್ಗ ದುರಸ್ತಿಪಡಿಸುವ ಸಲುವಾಗಿ ಪ್ರತಿ ವಾರ್ಡ್‌ನಲ್ಲಿ ಪ್ರತ್ಯೇಕವಾಗಿ ಒಬ್ಬೊಬ್ಬ ಇಂಜಿನಿಯರ್ ಗೆ ಜವಾಬ್ದಾರಿ ನೀಡಬೇಕು ಎಂದರು.\

ನಮ್ಮ ಮೆಟ್ರೋ (Namma Metro), ಬೆಸ್ಕಾಂ (BESCOM), ಜಲಮಂಡಳಿ (BWSSB) ಯಿಂದ ಕೆಲಸ ನಡೆಯುವ ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಸಂಬಂಧಪಟ್ಟ ಇಲಾಖೆಗಳಿಗೆ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಎಲ್ಲಾದರು ಸಮಸ್ಯೆ ಇದ್ದರೆ ಅದಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿ ನಂತರ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಸೂಚಿಸಿದರು.
ಎಂತಹ ಪರಿಸ್ಥಿತಿ ಎದುರಿಸಲು ಸಜ್ಜಾಗಿ:ತುಷಾರ್
ಸಭೆಯಲ್ಲಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಬೆಂಗಳೂರಿಗೆ ಮಳೆ ಮುನ್ಸೂಚನೆ ನೀಡಲಾಗಿದ್ದು, ಅಧಿಕಾರಿಗಳು ಎಂತಹ ಪರಿಸ್ಥಿತಿಯನ್ನು ಎದುರಿಸಲು ಸರ್ವ ಸನ್ನದ್ಧವಾಗುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಗರದಲ್ಲಿ ಜೋರು ಮಳೆ ಆಗುವ ಸಮಯದಲ್ಲಿ ರಸ್ತೆಗಳ ಮೇಲೆ ಹೆಚ್ಚು ನೀರು ನಿಂತು ವಾಹನಗಳ ಸಂಚಾರಕ್ಕೆ ಹೆಚ್ಚು ಸಮಸ್ಯೆ ಆಗುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಮೇಲೆ ಬೀಳುವ ನೀರು ಚರಂಡಿಗಳಿಗೆ ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ಶೋಲ್ಡರ್ ಡ್ರೈನ್ ಗಳ ಬಳಿ ಸ್ವಚ್ಚತೆ ಕಾಪಾಡಬೇಕು.

ನಮ್ಮ ಮೆಟ್ರೋ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಅಳವಡಿಸಿರುವ ತಾತ್ಕಾಲಿಕ ಬ್ಯಾರಿಕೇಡ್ ಗಳಿಂದ ಕೆಲವೆಡೆ ಮಳೆ ನೀರು ನಿಲ್ಲುತ್ತದೆ. ಇದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗಲಿದ್ದು, ಮೆಟ್ರೊ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಇರುವ ಸಮಸ್ಯೆಯನ್ನು ಬಗೆಹರಿಸಿಕೊಂಡು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ನೀರು ನಿಲ್ಲದಂತೆ ನೋಡಿಕೊಳ್ಳಿ
ಸರ್ವೀಸ್ ರಸ್ತೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇತ್ತ ಅರಣ್ಯ ವಿಭಾಗದ ತಂಡಗಳು ಸದಾ ಸನ್ನದ್ಧರಾಗಿರಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಜಲಾವೃತವಾಗುವ ಸ್ಥಳಗಳಲ್ಲಿ ಪಂಪ್ ಗಳನ್ನಿಟ್ಟು ನೀರು ತೆರವುಗೊಳಿಸಬೇಕು. ರಸ್ತೆ ಬದಿ ಚರಂಡಿ ಹಾಗೂ ರಾಜಕಾಲುವೆಗಳಲ್ಲಿ ಹೂಳನ್ನು ಕಾಲಕಾಲಕ್ಕೆ ತೆರವುಗೊಳಿಸುತ್ತಿರಬೇಕು. ತೆರವುಗೊಳಿಸಿದ ಹೂಳನ್ನು ಕೂಡಲೆ ಸ್ಥಳದಿಂದ ತೆರವು ಮಾಡಬೇಕು ಎಂದರು.
ಮಳೆನೀರು ನುಗ್ಗುವ ಮನೆಗಳ ಪಟ್ಟಿ ಮಾಡಿ
ಸೋಮವಾರದ ಮಳೆಗೆ ನಿಮ್ಮ ನಿಮ್ಮ ವಲಯದಲ್ಲಿ ಎಷ್ಟು ಮನೆಗಳಿಗೆ ನೀರು ನುಗ್ಗಿದೆ ಎಂಬುದನ್ನು ಗುರುತಿಸಿ ಪರಿಹಾರ ನೀಡುವ ಕೆಲಸ ಮಾಡಬೇಕು. ಈ ಸಂಬಂಧ ಯಾವ ವಲಯದಲ್ಲಿ ಎಷ್ಟು ಮನೆಗಳಿಗೆ ನೀರು ನುಗ್ಗಿದೆ ಎಂಬ ಪಟ್ಟಿಯನ್ನು ಸಿದ್ದಪಡಿಸಬೇಕು.
ಕೆರೆಯಲ್ಲಿ ಅಳವಡಿಸಿರುವ ಸ್ಲೂಯಿಸ್ ಗೇಟ್ ತೆರವು ಮಾಡಿ
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ಬೆಳ್ಳಂದೂರು ಹಾಗೂ ವರ್ತೂರು ಕೆರೆಯ ಸ್ಲೂಯಿಸ್ ಗೇಟ್ ಗಳನ್ನು ಕೂಡಲೇ ತೆಗೆದು ನೀರನ್ನು ಹೊರಬಿಡಿ ಎಂದು ಗಿರಿನಾಥ್ ಹೇಳಿದರು.
ಬಿಬಿಎಂಪಿ ಜೊತೆಗೆ ಅಗ್ನಿ ಶಾಮಕ ಇಲಾಖೆ, ಎಸ್.ಡಿ.ಆರ್.ಎಫ್ ಹಾಗೂ ಎನ್.ಡಿ.ಆರ್.ಎಫ್ ಇಲಾಖೆಗಳು ಕೈಜೋಡಿಸಲಿವೆ. ಆಯಾ ವಲಯ ಆಯುಕ್ತರು ಸದರಿ ಇಲಾಖೆಗಳ ಜೊತೆ ನಿತ್ಯ ಸಂಪರ್ಕದಲ್ಲಿರಬೇಕು. ತುರ್ತು ಪರಿಸ್ಥಿತಿಯ ವೇಳೆ ಸದರಿ ಇಲಾಖೆಗಳ ಸಹಾಯ ಪಡೆದು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ
ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಬೇಕು. ರಸ್ತೆಗುಂಡಿ ಮುಚ್ಚಲು ಟೆಂಡರ್ ಪ್ರಕ್ರಿಯೆ ನಡೆಯದಿದ್ದರೆ ಕೂಡಲೆ ಟೆಂಡರ್ ಕರೆದು ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಮಳೆಗಾಲದ ವೇಳೆ ಕೋಲ್ಡ್ ಮಿಕ್ಸ್ ಅನ್ನು ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಿದರು. ಸಭೆಯಲ್ಲಿ ವಲಯ ಆಯುಕ್ತರು, ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications