Bengaluru Rain: "ಬೆಂಗಳೂರು ಮಳೆ ಅನಾಹುತಕ್ಕೆ ಇದೇ ಪಕ್ಷ ಕಾರಣ"
ಬೆಂಗಳೂರು ಗುರುವಾರ ಸಂಜೆಯ ವೇಳೆಗೆ ಅಲ್ಪ ಪ್ರಮಾಣದಲ್ಲಿ ಸಹಜ ಸ್ಥಿತಿಯತ್ತ ತಲುಪಿದೆ. ಆದರೆ, ವಿರೋಧ ಪಕ್ಷಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳುವುದನ್ನು ಮುಂದುವರಿಸಿವೆ. ಇದೀಗ ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಮಳೆಯಿಂದ ಎದುರಾಗಿರುವ ಅನಾಹುತಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ದೂರಿವೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಇದೇ ಮಳೆ ಮುಂದಿನ ಮಾರ್ನಾಲ್ಕು ದಿನ ರಾಜ್ಯದ ವಿವಿಧ ಭಾಗದಲ್ಲಿ ಆಗುವ ಸಾಧ್ಯತೆ ಇದೆ. ಹೀಗಾಗಿ, ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಕೆ ವಹಿಸುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿದೆ.

ಸೋಮವಾರದಿಂದ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ದ್ವೀಪದಂತೆ ಬದಲಾಗಿದ್ದವು. ಗುರುವಾರ ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣ ಇದ್ದ ಹೊರತಾಗಿಯೂ ಬೆಂಗಳೂರಲ್ಲಿ ಬಹುತೇಕ ಭಾಗದಲ್ಲಿ ಮೋಡ ಕವಿದ ವಾತಾವರಣವೇ ಇತ್ತು.
ಈ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಿರೋಧ ಪಕ್ಷಗಳು ನಿರಂತರವಾಗಿ ತರಾಟೆಗೆ ತೆಗೆದುಕೊಂಡಿವೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಮಳೆಯಿಂದ ಸಮಸ್ಯೆ ಆಗಿರುವ ಪ್ರದೇಶಗಳ ವಿಡಿಯೋ ಹಾಗೂ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಟ್ರೋಲ್ ಮಾಡುತ್ತಿವೆ.
ರಾಜ್ಯದಲ್ಲಿ ಹೆಚ್ಚು ಆಳ್ವಿಕೆ ನಡೆಸಿದ್ದು ಕಾಂಗ್ರೆಸ್: ಅನಾಹುತಕ್ಕೂ ಕಾರಣ
ಕರ್ನಾಟಕದಲ್ಲಿ ಬರೋಬ್ಬರಿ 44 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಆಳ್ವಿಕೆ ನಡೆಸಿದೆ. ಈ ಅವಧಿಯಲ್ಲಿ ತಿಂದು ತೇಗಿರುವ ಕಾಂಗ್ರೆಸ್ ಪಕ್ಷವೇ "ಬೆಂಗಳೂರಿನ ಮಳೆ ಅನಾಹುತ" ಪರಿಸ್ಥಿತಿಗೆ ಮೂಲ ಕಾರಣ ಎಂದು ಜೆಡಿಎಸ್‌ಪಕ್ಷ ಹೇಳಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್ ಕರ್ನಾಟಕದಲ್ಲಿ ಅತಿ ಹೆಚ್ಚು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ, ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸಿದೆ. ದೂರದೃಷ್ಟಿ ಹಾಗೂ ಮುಂದಾಲೋಚನೆ ಇಲ್ಲದೆ ಮಾಡಿದ ಕೆಲಸಗಳೇ ಬೆಂಗಳೂರಿನ ಇಂದಿನ ಹದಗೆಟ್ಟ ಪರಿಸ್ಥಿತಿಗೆ ಮುಖ್ಯ ಕಾರಣ ಎಂದು ಹೇಳಿದೆ.
ರಾಜ್ಯದಲ್ಲಿ 44 ವರ್ಷಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿ ತಿಂದು ತೇಗಿರುವ ಕಾಂಗ್ರೆಸ್ ಪಕ್ಷವೇ "ಬೆಂಗಳೂರಿನ ಮಳೆ ಅನಾಹುತ" ಪರಿಸ್ಥಿತಿಗೆ ಮೂಲ ಕಾರಣ
— Janata Dal Secular (@JanataDal_S) October 17, 2024
ಕರ್ನಾಟಕದಲ್ಲಿ ಅತಿ ಹೆಚ್ಚು ವರ್ಷ ಆಡಳಿತ ನಡೆಸಿದ @INCKarnataka ಪಕ್ಷಕ್ಕೆ ವೈಜ್ಞಾನಿಕವಾಗಿ ಕಾಮಗಾರಿಗಳ ದೂರದೃಷ್ಟಿ, ಮುಂದಾಲೋಚನೆ ಇಲ್ಲದಿರುವುದು ಬೆಂಗಳೂರಿನ ಇಂದಿನ ಹದಗೆಟ್ಟ… pic.twitter.com/DRaY8pGCmy
ನಾಡಪ್ರಭು ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರಿನ ಕೆರೆ ಕಟ್ಟೆಗಳನ್ನು ನುಂಗಿ ನೀರು ಕುಡಿದಿದ್ದೀರಿ. ಕಾಮಗಾರಿಗಳ ಹೆಸರಲ್ಲಿ ಪರ್ಸಂಟೇಜ್ ಲೆಕ್ಕದಲ್ಲಿ ತಿಂದು ತೇಗಿ ಬಲಿತಿರುವ ಕಾಂಗ್ರೆಸ್ ನಾಯಕರು ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಾ ನಗರವನ್ನು ಹಾಳುಗೆಡವಿದ್ದೀರಿ ಎಂದು ಹೇಳಿದೆ.
ಈಗ ನುಣಿಚಿಕೊಳ್ಳಲು ವಿರೋಧ ಪಕ್ಷಗಳತ್ತ ಬೊಟ್ಟು ಮಾಡುತ್ತಿರುವುದು, ಕೈಲಾಗದ ಕಾಂಗ್ರೆಸ್ ನಾಯಕರ ಹೊಣೆಗೇಡಿತನದ ಪರಮಾವಧಿಯಷ್ಟೇ ಎಂದೂ ಜೆಡಿಎಸ್ ಹೇಳಿದೆ.
ಈ ನಡುವೆ ಬಿಜೆಪಿ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಹ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಪಾರ್ಟ್ ಟೈಂ ಅಭಿವೃದ್ಧಿ ಮಂತ್ರಿ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications