ಬೆಂಗಳೂರಿನಲ್ಲಿ ಮತ್ತೆ ಮಳೆ ಶುರು: ಕಪ್ಪು ಕಾರ್ಮೋಡಕ್ಕೆ ಬೆದರಿ ಕಚೇರಿಗಳಿಂದ ಮನೆಯತ್ತ ಮುಖ ಮಾಡಿದ ಜನ
ಬೆಂಗಳೂರು ಅಕ್ಟೋಬರ್ 23: ಬೆಂಗಳೂರಿನಲ್ಲಿಂದು ಮತ್ತೆ ಮಳೆ ಆರಂಭವಾಗಿದೆ. ಡಾಲರ್ಸ್ ಕಾಲೋನಿ, ರಿಚ್‌ಮಂಡ್ ಟೌನ್, ಯಲಹಂಕ, ಜಯನಗರ, ಮೆಜೆಸ್ಟಿಕ್, ಕೆಆರ್ ಸರ್ಕಲ್, ಶಾಂತಿನಗರ, ವಿಧಾನಸೌಧ ಸೇರಿದಂತೆ ನಗರದ ಬಹುತೇಕ ಕಡೆ ಗುಡುಗು ಮಿಂಚಿನ ಸಹಿತ ಮಳೆ ಅರ್ಭಟಿಸುತ್ತಿದೆ. ಕಳೆದೆರೆಡು ದಿನಗಳಿಂದ ಮಳೆ ಪ್ರಮಾಣ ಹೆಚ್ಚಾಗಿದ್ದು ನಗರದ ಜನ ಕಂಗಾಲಾಗಿ ಹೋಗಿದ್ದಾರೆ.
ಇಂದು ಬೆಂಗಳೂರಿನ ವಿಜಯನಗರ, ರಾಜರಾಜೇಶ್ವರಿ ನಗರ, ರಾಜಾಜಿ ನಗರ ಹಾಗೂ ಕೆಆರ್ ಮಾರುಕಟ್ಟೆ ಸೇರಿದಂತೆ ಬಹುತೇಕ ಕಡೆ ಕಪ್ಪು ಕಾರ್ಮೋಡ ಆವರಿಸಿದ್ದು ಮಳೆ ಬೀಳಲಾರಂಭಿಸಿದೆ. ಬಹುಶ: ಇಂದೂ ಕೂಡ ನಗರದಲ್ಲಿ ಹಿಂದೆಂದೂ ಕೇಳಿ ಕಂಡರಿಯಂದಂತಹ ಮಳೆ ದಾಖಲಾಗುವ ಲಕ್ಷಣಗಳು ಹೆಚ್ಚಾಗಿವೆ. ಹೀಗೆ ಆಗಸದಲ್ಲಿ ಕಪ್ಪು ಮೋಡ ಆವರಿಸುತ್ತಿದ್ದಂತೆ ಜನ ಕಚೇರಿಗಳಿಂದ ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ಅಲ್ಲಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಹಲವೆಡೆ ವಿದ್ಯುತ್ ಕಡಿತ
ಇಂದು ಮಳೆ ಆರಂಭಕ್ಕೂ ಮುನ್ನ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತಗೊಳಿಸಲಾಗಿದೆ. ಗುಡುಗು ಮಿಂಚಿಗೆ ಪುಟ್ಟ ಮಕ್ಕಳು ಬೆಚ್ಚಿಬಿದ್ದಿದ್ದಾರೆ. ಮಳೆಯೊಂದಿಗೆ ಜೋರು ಗಾಳಿ ಬೀಸುವ ಲಕ್ಷಣವಿದ್ದು ವಿದ್ಯುತ್ ಕಂಬ ಹಾಗೂ ಮರಗಳು ಉರುಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದರಲು ಸೂಚನೆ ನೀಡಲಾಗಿದೆ.
ಇಂಟರ್‌ನೆಟ್ ಕೂಡ ನಿಧಾನ
ಇನ್ನೂ ಬೆಂಗಳೂರಿನಲ್ಲಿ ಮಳೆ ತಂದ ಸಮಸ್ಯೆ ಒಂದೆರೆಡೆಲ್ಲ. ಮಳೆಗೆ ರಸ್ತೆಗೆ ಇಳಿಯಲಾಗದೆ ಮನೆಯಲ್ಲಿ ಕುಳಿತು ಕೆಲಸ ಮಾಡುವವರ ತಲೆ ಕೆಟ್ಟು ಹೋಗಿದೆ. ಇಂಟರ್‌ನೆಟ್ ಸಮಸ್ಯೆಯಿಂದಾಗಿ ಜನ ಮನೆಯಿಂದ ಕೆಲಸ ಮಾಡಲಾಗದೆ ತಲೆ ಬಿಸಿ ಮಾಡಿಕೊಂಡಿದ್ದಾರೆ. ಲ್ಯಾಪ್‌ಟಾಪ್ ರೀಸ್ಟಾರ್ಟ್ ಮಾಡಿ, ಮೊಬೈಲ್ ಸ್ವಚ್ ಆಫ್ ಮಾಡಿ ಆನ್ ಮಾಡಿ, ಅಲ್ಲಿ ನಿಂತುಕೊಂಡು ಮಾತಾಡಿ, ನೀವು ಮಾತನಾಡಿದ್ದು ಏನೂ ಕೇಳಿಸುತ್ತಲೇ ಇಲ್ಲ... ಇದೇ ಮಾತುಗಳು ನಗರದ ಬಹುತೇಕ ಮನೆಗಳಿಂದ ಕೇಳಿ ಬರುತ್ತಿವೆ.
ಬನ್ನೇರುಘಟ್ಟ ರಸ್ತೆ ಜಲಾವೃತ
ನಿರಂತರ ಮಳೆಗೆ ಬನ್ನೇರ್‌ಘಟ್ಟ ರಸ್ತೆ ಸಂಪೂರ್ಣವಾಗಿ ನೀರಿನಿಂದ ಆವೃತವಾಗಿದೆ. ಡೈರಿ ಸರ್ಕಲ್ ನಿಂದ ಬನ್ನೇರ್‌ಘಟ್ಟ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಹೀಗಾಗಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ರಸ್ತೆ ಮೂಲಕ ಸಾಗಲು ಆಗದೆ ಜನ ಕಾರು ಬಿಟ್ಟು ದೋಣಿಯಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ.
ಬಿವೈ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಆಕ್ರೋಶ
ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಜನರ ಪಾಲಿಗೆ ಸರ್ಕಾರ ಸತ್ತಿದಿಯಾ? ಬದುಕಿದಿಯಾ? ಎನ್ನುವ ಪ್ರಶ್ನೆ ಉಂಟಾಗಿದೆ. ರೈತರಿಗೆ ಈ ಸರ್ಕಾರ ಸ್ಪಂದನೆ ನೀಡ್ತಾಯಿಲ್ಲ. ಬೆಂಗಳೂರು ಜಲಾವೃತಗೊಂಡಿದೆ ಅದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಮಳೆಯಿಂದಾಗಿ ರೈತರ ಬೆಳೆ ನಾಶವಾಗಿದೆ. ಇದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೂ ಮಳೆ ಅಡ್ಡಿ
ಇನ್ನೂ ಮಳೆ ಸಿಎಂ ಸಿದ್ದರಾಮಯ್ಯ ಅವರಿಗೂ ಅಡ್ಡಿಯನ್ನುಂಟು ಮಾಡಿದೆ. ಮೈಸೂರಿನಿಂದ ಬೆಂಗಳೂರಿಗೆ ವಿಮಾನದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಯಾಣಿಸಬೇಕಾಗಿತ್ತು. ಆದರೆ ಧಾರಾಕಾರ ಮಳೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ವಿಮಾನ ಹಾರಾಟ ರದ್ದಾಗಿದೆ. ಹೀಗಾಗಿ ಮೈಸೂರಿನಿಂದ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ಸಿಎಂ ಸಿದ್ದರಾಮಯ್ಯ ಪ್ರಯಾಣಿಸಿದ್ದಾರೆ.












Click it and Unblock the Notifications