Bengaluru Rain : ಸೋಮವಾರ ಬೆಂಗಳೂರಿನ ಹಲವು ಭಾಗಗಳಲ್ಲಿ ಉತ್ತಮ ಮಳೆ ಮುನ್ಸೂಚನೆ
ರಾಜಧಾನಿ ಬೆಂಗಳೂರು ಶತಮಾನದಲ್ಲೇ ಅತ್ಯಂತ ಕೆಟ್ಟ ಆಗಸ್ಟ್ ತಿಂಗಳ ಬರಕ್ಕೆ ಸಾಕ್ಷಿಯಾಗಿದೆ. ಹೆಚ್ಚಾದ ತಾಪಮಾನ, ಕೈಕೊಟ್ಟ ಮಳೆಯಿಂದಾಗಿ ಜನ ಪರದಾಡುವಂತಾಗಿತ್ತು, ಕೂಲ್ ಎನಿಸಿಕೊಳ್ಳುವ ಬೆಂಗಳೂರು, ಮಳೆಗಾಲದಲ್ಲೇ ತೀವ್ರ ಬಿಸಿಲು, ಸೆಖೆಗೆ ಸಾಕ್ಷಿಯಾಗಿತ್ತು. ಆಗಸ್ಟ್ 31ರ ರಾತ್ರಿಯಿಂದ ರಾಜಧಾನಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸುವ ಮುನ್ಸೂಚನೆ ಸಿಕ್ಕಿದೆ.
ವಾರಾಂತ್ಯದಲ್ಲಿ ರಾಜಧಾನಿಯ ಹಲವು ಭಾಗಗಳಲ್ಲಿ ಸಾಧಾರಣೆ ಮಳೆಯಾಗಿದೆ. ಸೋಮವಾರ (ಸೆಪ್ಟೆಂಬರ್ 4) ಬೆಳಗ್ಗೆಯಿಂದಲೇ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೆ ಇನ್ನೂ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ.

ಸೋಮವಾರ ಬೆಳಗ್ಗೆ ಮಲ್ಲೇಶ್ವರಂ, ಮತ್ತಿಕೆರೆ, ನಂದಿನಿ ಲೇಔಟ್, ರಾಜಾಜಿನಗರ, ಹಲಸೂರು, ವಸಂತನಗರ, ಯಶವಂತಪುರ, ಇಂದಿರಾ ನಗರ, ಜಯನಗರ, ಜಾಲಹಳ್ಳಿ, ಕಮ್ಮನಹಳ್ಳಿ, ಕೆಂಗೇರಿ, ಲಿಂಗರಾಜಪುರ, ಬಿಟಿಎಂ ಲೇಔಟ್, ದೊಮ್ಮಲೂರು, ಬಸವೇಶ್ವರ ನಗರದಲ್ಲಿ ಹಗುರ ಮಳೆಯಾಗಿದೆ. ಸೋಮವಾರ ಸಂಜೆ ನಗರದ ಹಲವು ಭಾಗಗಳಲ್ಲಿ ಉತ್ತಮ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆಯಲ್ಲಿ ತಿಳಿಸಿದೆ.
ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರು ತೀವ್ರ ಮಳೆ ಕೊರತೆ ಅನುಭವಿಸಿದ ಬಳಿಕ, ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದೆ. ಹವಾಮಾನ ತಜ್ಞರು, ಹವಾಮಾನ ಇಲಾಖೆ ವಿಜ್ಞಾನಿಗಳು ಕೂಡ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಅಬ್ಬರಿಸುತ್ತಿದೆ ಮಳೆ
ಸದ್ಯ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಭಾರಿ ಮಳೆಯ ಕಾರಣ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಳ್ಳ, ನದಿಗಳು ಮೈತುಂಬಿಕೊಂಡಿವೆ, ಕೆರ, ಜಲಾಶಯಗಳಿಗೆ ನೀರು ಹರಿದುಬರುತ್ತಿದೆ. ಭಾನುವಾರ ಕಲಬುರಗಿ, ವಿಜಯನಗರ, ರಾಯಚೂರು, ಬಳ್ಳಾರಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಕಲಬುರಗಿ ಜಿಲ್ಲೆಯ ಕಾಳಗಿ ಪಟ್ಟಣದಲ್ಲಿ 145 ಮಿಮೀ ಮಳೆಯಾಗಿದ್ದು ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ.
ಧಾರವಾಡದ ಪುದಕಾಲಕಟ್ಟಿಯಲ್ಲಿ ಭಾನುವಾರ 144 ಮಿಮೀ ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಕೇಳೂರು ಪ್ರದೇಶದಲ್ಲಿ 131 ಮಿಮೀ ಮಳೆಯಾಗಿದೆ ಎಂದು ವರದಿಯಾಗಿದೆ. ಗದಗ ಜಿಲ್ಲೆಯ ಗುಲಗುಲಿಯಲ್ಲಿ 130 ಮಿಮೀ, ಡಿಎಸ್ ಹಡಲಗಿಯಲ್ಲಿ 112 ಮಿಮೀ, ನೀಲರಗಿಯಲ್ಲಿ 100 ಮಿಮೀ ಮಳೆಯಾಗಿದೆ.
ಧಾರವಾಡ ಜಿಲ್ಲೆಯಲ್ಲಿ 144 ಮಿಮೀ, ಬಾಗಲಕೋಟೆ ಜಿಲ್ಲೆಯಲ್ಲಿ 131 ಮಿಮೀ, ಗದಗ ಜಿಲ್ಲೆಯಲ್ಲಿ 130 ಮಿಮೀ, ಕೊಪ್ಪಳದಲ್ಲಿ 95 ಮಿಮೀ, ವಿಜಯಪುರ 63 ಮಿಮೀ, ರಾಯಚೂರು ಜಿಲ್ಲೆಯಲ್ಲಿ 60 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.












Click it and Unblock the Notifications