ಬೆಂಗಳೂರು ಮಳೆ: ಕಳಪೆ ಮೂಲಸೌಕರ್ಯ- ಒಂದೇ ದಿನದಲ್ಲಿ 225 ಕೋಟಿ ರೂ. ನಷ್ಟ
ಬೆಂಗಳೂರು, ಸೆಪ್ಟೆಂಬರ್ 05: ಬೆಂಗಳೂರು ಹೊರ ವರ್ತುಲ ರಸ್ತೆ ಪ್ರದೇಶದಲ್ಲಿರುವ ಐಟಿ ಮತ್ತು ಬ್ಯಾಂಕಿಂಗ್ ಕಂಪನಿಗಳ ಸಂಘಟನೆಯಾದ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ಒಆರ್‌ಆರ್‌ಸಿಎ)ವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ತಮ್ಮ ಸದಸ್ಯ ಕಂಪನಿಗಳು ಮತ್ತು ಸಂಸ್ಥೆಗಳು ತೀವ್ರ ಮಳೆ ಮತ್ತು ಜಲಾವೃತದಿಂದಾಗಿ ಒಂದೇ ದಿನದಲ್ಲಿ 225 ಕೋಟಿ ರೂ. ನಷ್ಟ ಅನುಭವಿಸಿವೆ ಎಂದು ಅಳಲು ತೋಡಿಕೊಂಡಿವೆ.
ಭಾರತದ ಐಟಿ ಹಬ್ ಮತ್ತು ಸ್ಟಾರ್ಟ್ಅಪ್ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು ನಗರದ ಕೆಲವು ಭಾಗಗಳು ಪೂರ್ಣ ಮುಳುಗಿದ್ದವು. ಹೊರ ವರ್ತುಲ ರಸ್ತೆಯ ಕಾರಿಡಾರ್‌ನಲ್ಲಿನ ಕಳಪೆ ಮೂಲಸೌಕರ್ಯದಿಂದಾಗಿ ಇಲ್ಲಿ ನೆಲೆಗೊಂಡಿರುವ ಕಂಪನಿಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟಾಗಿದೆ ಎಂದು ಅವು ಹೇಳಿವೆ.
ಅಪಾರ ಮಳೆಯು ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಅಪಾಯಕ್ಕೆ ಒಡ್ಡಿದೆ. ಆಗಸ್ಟ್ 30ರಂದು ಹೊರ ವರ್ತುಲ ರಸ್ತೆಯಲ್ಲಿ ಪ್ರವಾಹ ಉಂಟಾಗಿದ್ದು, ಈ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ 5 ಗಂಟೆಗಳಿಗೂ ಹೆಚ್ಚು ಕಾಲ ಮಳೆ ತುಂಬಿದ ರಸ್ತೆಯಲ್ಲಿ ಸಿಲುಕಿದ್ದರು. ಹೀಗಾಗಿ ನಮಗೆ ಒಂದೇ ದಿನದಲ್ಲಿ 225 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ ಸಿಎಂ ಬೊಮ್ಮಾಯಿ ಅವರಿಗೆ ಪತ್ರದಲ್ಲಿ ತಿಳಿಸಿದೆ.

ಕಚೇರಿಯಿಂದ ಕೇವಲ 30% ಸಿಬ್ಬಂದಿ ಕೆಲಸ
ಹೊರ ವರ್ತುಲ ರಸ್ತೆಯಲ್ಲಿ ಸದ್ಯ ಇರುವ ಅಸಮರ್ಪಕ ಮೂಲಸೌಕರ್ಯ ಪರಿಸ್ಥಿತಿಯು ಖಾಸಗಿ ಕಂಪೆನಿಗಳಿಗೆ ಅಪಥ್ಯವಾಗಿದೆ. ಇಲ್ಲಿ ನೆಲೆಗೊಂಡಿರುವ ಕಂಪೆನಿಗಳ ಕಚೇರಿಯಿಂದ ಕೇವಲ 30% ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಸಮರ್ಪಕ ಮೂಲಸೌಕರ್ಯಗಳು ಇಲ್ಲದೆ ಇಲ್ಲಿರುವ ಕಂಪೆನಿಗಳ ನಿರ್ವಹಣೆ ಕಷ್ಟಕರವಾಗಿದ್ದು, ಇದು ಬೆಂಗಳೂರಿನ ಸಾಮರ್ಥ್ಯದ ಮೇಲೆ ಜಾಗತಿಕ ಗಮನವನ್ನು ಸೆಳೆದಿದೆ ಎಂದು ಅದು ಹೇಳಿದೆ.

ಕೆಲಸಕ್ಕಾಗಿ ಬೆಂಗಳೂರು ಬಿಡುವ ಸ್ಥಿತಿ
ಹೊರ ವರ್ತುಲ ರಸ್ತೆಯಲ್ಲಿ ಕಚೇರಿ ಹೊಂದಿ ಹೆಚ್ಚು ಹೂಡಿಕೆ ಮಾಡಿರುವ ಈ ಖಾಸಗಿ ಕಂಪನಿಗಳು ತುರ್ತು ವ್ಯಾಪಾರ ಮುಂದುವರಿಕೆಯ ಯೋಜನೆಗಳ ಉತ್ತೇಜನಕ್ಕೆ ಕೆಲಸ ಮಾಡಲಾಗದೆ ಮನೆಯಿಂದ ಕೆಲಸವನ್ನು ಮರು ಪ್ರಾರಂಭಿಸಬೇಕಾಗಿತ್ತು. ಅಲ್ಲದೆ ಬೆಂಗಳೂರಿನ ಹೊರಗಿನ ಸ್ಥಳಗಳಿಂದ ಈ ಕೆಲಸವನ್ನು ಮಾಡಬೇಕಾಗಿತ್ತು. ಇದರಿಂದ ಬೆಂಗಳೂರು ನಗರ ಮತ್ತು ರಾಜ್ಯಕ್ಕೆ ಖ್ಯಾತಿಗೆ ಧಕ್ಕೆಯಾದಲ್ಲದೆ ಆರ್ಥಿಕವಾಗಿ ಹಾನಿಯನ್ನುಂಟು ಮಾಡಿತು ಎಂದು ಪತ್ರದಲ್ಲಿ ಬರೆಯಲಾಗಿದೆ.

ಯೋಜಿತ ನಿರ್ಮಾಣ ಕಾಮಗಾರಿ ಸ್ಥಗಿತ
ಕಳೆದ ಮೂರು ದಿನಗಳಿಂದ ಮಳೆಯ ಪರಿಸ್ಥಿತಿ ಮುಂದುವರಿದಿದೆ. ಹೊರ ವರ್ತುಲ ರಸ್ತೆಯ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಸರಾಗಗೊಳಿಸುವ ಉದ್ದೇಶದಿಂದ ಹಲವಾರು ಯೋಜಿತ ನಿರ್ಮಾಣ ಕಾಮಗಾರಿಗಳೂ ಸ್ಥಗಿತಗೊಂಡಿವೆ ಎಂದು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ ಆರೋಪಿಸಿದೆ. ಇನ್ನೂ ಹಲವಾರು ಯೋಜನೆಗಳಿಗೆ ಹೊಂದಿಕೊಂಡಿರುವ ರಸ್ತೆಗಳ ನಿರ್ಮಾಣ, ಹೆಚ್ಚಿನ ಸಾಂದ್ರತೆಯ ಕಾರಿಡಾರ್ ರಸ್ತೆಗಳು ಮತ್ತು ಮೆಟ್ರೋ ನಿರ್ಮಾಣದ ಕಾರಣ ಟ್ರಾಫಿಕ್ ಪರಿಸ್ಥಿತಿಯನ್ನು ಸುಧಾರಿಸಲು ಕೆಲವು ವರ್ಷಗಳ ಹಿಂದೆ ಹಸಿರು ನಿಶಾನೆ ತೋರಿಸಲಾಗಿತ್ತು. ಆದರೆ ಇದು ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಸುಧಾರಣೆಗೆ ಸ್ಪಷ್ಟ ಮಾರ್ಗಸೂಚಿಯನ್ನು ತರುವಂತೆ ಸಂಘ ಒತ್ತಾಯಿಸಿದೆ.

ಇತರ ತೊಂದರೆಗಳ ಬಗ್ಗೆಯೂ ಚರ್ಚೆ
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಳೆ ಮತ್ತು ಜಲಾವೃತದಿಂದ ಆಗಿರುವ ಹಾನಿ ಮತ್ತು ಪರಿಹಾರದ ಬಗ್ಗೆ ಪತ್ರ ಬರೆದಿರುವ ಕಂಪೆನಿಗಳ ಜೊತೆ ಚರ್ಚಿಸುತ್ತೇನೆ. ನಾವು ಐಟಿ ಕಂಪನಿಗಳಿಗೆ ಕರೆದು ನೀರಿನ ಸಮಸ್ಯೆಯಿಂದ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇವೆ. ಮಳೆಯಿಂದ ಉಂಟಾದ ಹಾನಿ ಹಾಗೂ ಇತರ ಸಂಬಂಧಿತ ತೊಂದರೆಗಳ ಬಗ್ಗೆಯೂ ಚರ್ಚಿಸುತ್ತೇವೆ ಎಂದು ಬೊಮ್ಮಾಯಿ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.












Click it and Unblock the Notifications