Bengaluru Rain: ರಾಜಧಾನಿಯಲ್ಲಿ ಮಳೆ ಅಬ್ಬರ: ರಸ್ತೆಗಳು ಜಲಾವೃತ, ವಾಹನ ಸವಾರರ ಪರದಾಟ
ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಬಿಡುವು ನೀಡಿದ್ದ ಮಳೆ ಬುಧವಾರ ಸಂಜೆ ಅಬ್ಬರಿಸಲು ಆರಂಭಿಸಿದ್ದು, ಬುಧವಾರ (ಸೆಪ್ಟೆಂಬರ್ 13) ಉತ್ತಮ ಮಳೆಯಾಗುತ್ತಿದೆ. ಸಂಜೆ ವೇಳೆ ನಗರದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾದ ಕಾರಣ ಹಲವು ರಸ್ತೆಗಳು ಜಲಾವೃತವಾಗಿದ್ದವು.
ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ಮಳೆಯಿಂದಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದ್ದು, ಹಲವು ರಸ್ತೆಗಳನ್ನು ತಪ್ಪಿಸುವಂತೆ ಸಂಚಾರ ಪೊಲೀಸರು ವಾಹನ ಸವಾರರಲ್ಲಿ ಮನವಿ ಮಾಡಿದರು.

ಹವಾಮಾನ ವರದಿಯ ಪ್ರಕಾರ ಬುಧವಾರ ಸಂಜೆ ಬೆಂಗಳೂರಿನ, ಶೆಟ್ಟಿಹಳ್ಳಿ 38.5ಮಿ.ಮೀ, ಬಾಗಲಕುಂಟೆ 37.5 ಮಿ.ಮೀ, ಚಿಕ್ಕಬಾಣಾವರ 35 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ 33.5 ಮಿ.ಮೀ, ವಿಶ್ವನಾಥ ನಾಗೇನಹಳ್ಳಿ 32 ಮಿ.ಮೀ, ಕೊಡಿಗೇಹಳ್ಳಿ 30.5 ಮಿ.ಮೀ, ಹುಸ್ಕೂರು 30 ಮಿ.ಮೀ, ಸೋಮಶೆಟ್ಟಿಹಳ್ಳಿ 29 ಮಿ.ಮೀ, ಮಾದಾವರ 28.5 ಮಿ.ಮೀ, ನಂದಿನಿ ಲೇಔಟ್ 27ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ 23.5 ಮಿ.ಮೀ, ಹೆಸರಘಟ್ಟ 21.5 ಮಿ.ಮೀ, ಶಿವಕೋಟೆ 20 ಮಿ.ಮೀ, ನಾಗಪುರ 19.5 ಮಿ.ಮೀ, ಪುಲಕೇಶಿನಗರ 19.5 ಮಿ.ಮೀ, ಬಾಣಸವಾಡಿ 19 ಮಿ.ಮೀ, ದಯಾನಂದನಗರ 18 ಮಿ.ಮೀ, ಹೊರಮಾವು 17 ಮಿ.ಮೀ, ಅತ್ತೂರು 16.5 ಮಿ.ಮೀ, ಸಂಪಂಗಿರಾಮನಗರ 16.5 ಮಿ.ಮೀ ಮಳೆಯಾಗಿದೆ ಎಂದು ಹೇಳಿದೆ.
ರಸ್ತೆಗಳು ಜಲಾವೃತ, ವಾಹನ ಸವಾರರ ಪರದಾಟ
ಬೆಂಗಳೂರು ನಗರದ ಕ್ರೋಮಾ ಸರ್ವಿಸ್ ರಸ್ತೆಯ ಬಳಿ ರಸ್ತೆಯಲ್ಲಿ ನೀರು ತುಂಬಿಕೊಂಡ ಕಾರಣ ಈ ಮಾರ್ಗವನ್ನು ತಪ್ಪಿಸಿ ಪರ್ಯಾಯ ಮಾರ್ಗದಲ್ಲಿ ಚಲಿಸುವಂತೆ ವಾಹನ ಸವಾರರಿಗೆ ಪೊಲೀಸರು ಮನವಿ ಮಾಡಿದ್ದಾರೆ. ರಿಂಗ್ ರಸ್ತೆಯ ಕಸ್ತೂರಿ ನಗರ ಬ್ರಿಡ್ಜ್ ಬಳಿ ಇರುವ ಗ್ರ್ಯಾಂಡ್ ಸೀಸನ್ ಹೋಟೆಲ್ ಮುಂಭಾಗ ರಸ್ತೆ ಜಲಾವೃತವಾಗಿದ್ದು ನಿಧಾನಗತಿಯಲ್ಲಿ ವಾಹನಗಳು ಸಂಚರಿಸಿದವು.
ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮೈಸೂರು ರಸ್ತೆ ಬಿ.ಜಿ.ಎಸ್ ಫ್ಲೈಓವರ್ ವೆಟರ್ನರಿ ಜಂಕ್ಷನ್ ಮೇಲೆ ಭಾರೀ ಮಳೆಯಿಂದ ನೀರು ನಿಂತ ಪರಿಣಾಮ. ಬಿ.ಜಿ.ಎಸ್ ಫ್ಲೈಓವರ್ ರಸ್ತೆಯಲ್ಲಿ ನಿಧಾನಗತಿಯ ಸಂಚಾರಕ್ಕೆ ಕಾರಣವಾಯಿತು.
ಕಲ್ಯಾಣನಗರ 80 ಫೀಟ್ ರಸ್ತೆ, ದೇವಿನಗರ ಬಳಿ ಬೆಲ್ ಮತ್ತು ದೇವಿನಗರ ಅಂಡರ್‌ಪಾಸ್ ಕಡೆಗೆ ನೀರು ನುಗ್ಗಿದ ಕಾರಣ ನಿಧಾನಗತಿಯ ಸಂಚಾರಕ್ಕೆ ಕಾರಣವಾಗಿತ್ತು. ಚಿಕ್ಕಪೇಟೆ ಠಾಣಾ ವ್ಯಾಪ್ತಿಯ ಬಿನ್ನಿಮಿಲ್ ರಸ್ತೆ 'ಬೆಂಗಳೂರು ಒನ್' ಮುಂಭಾಗದ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು. ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಮುಂಭಾಗದ ರಸ್ತೆ ಕೂಡ ಜಲಾವೃತವಾಗಿತ್ತು.
ಸ್ಯಾಂಕಿ ರಸ್ತೆ, ಲೆ ಮೆರಿಡಿಯನ್ ಅಂಡರ್ ಪಾಸ್‌ನಲ್ಲಿ ನೀರು ನಿಂತ ಪರಿಣಾಮ ಸಾರ್ವಜನಿಕ ಸಂಚಾರಕ್ಕೆ ಮುಚ್ಚಲಾಗಿದ್ದು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದರು.












Click it and Unblock the Notifications