Bengaluru Rain: ಬೆಂಗಳೂರಿನ ಈ ಭಾಗದಲ್ಲಿ ಮಳೆ ಹನಿಯ ಸಿಂಚನ
ಕರ್ನಾಟಕ ಸುಡು ಬಿಸಿಲಿನಿಂದ ಕಂಗಾಲಾಗಿದೆ. ಸುಡುವ ಬಿಸಿಲಿನ ನಡುವೆಯೂ ರಾಜ್ಯದಲ್ಲಿ ಬುಧವಾರ, ಗುರುವಾರ ಮಳೆಯಾಗಿದೆ. ಬುಧವಾರ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದ್ದರೆ, ಗುರುವಾರ ಚಿಕ್ಕಮಗಳೂರಿನ ಹಲವು ಕಡೆಗಳಲ್ಲಿ ಮಳೆಯಾಗಿದೆ. ಶೀಘ್ರದಲ್ಲೇ ರಾಜಧಾನಿ ಬೆಂಗಳೂರಿಗೂ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.
ಗುರವಾರ ಸಂಜೆ ಬೆಂಗಳೂರಿನ ಉತ್ತರ ಭಾಗದಲ್ಲಿ ಮಳೆ ಹನಿಗಳ ಸಿಂಚನವಾಗಿದೆ. ನಗರದಲ್ಲಿ ಲಘುವಾಗಿ ಮಳೆ ಹನಿಗಳು ಬಿದ್ದಿದ್ದು, ಜನರಲ್ಲಿ ಮಳೆಯ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ಬೆಂಗಳೂರು ಉತ್ತರ ಭಾಗದ ಚಿಕ್ಕಬಾಣಾವಾರ, ಯಲಹಂಕದ ಹಲವು ಕಡೆಗಳಲ್ಲಿ ಮಳೆ ಹನಿಗಳು ಬಿದ್ದಿವೆ. ಒಂದು ನಿಮಿಷ ಕೂಡ ಮಳೆ ಹನಿಗಳು ಬೀಳದೇ ಇದ್ದರು ಇದು ಮುಂದಿನ ದಿನಗಳಲ್ಲಿ ನಗರಕ್ಕೆ ಉತ್ತಮ ಮಳೆಯಾಗುವ ಮುನ್ಸೂಚನೆ ಎನ್ನಲಾಗಿದೆ.
ಎರಡು ದಿನದಿಂದ ಮಳೆ
ಬುಧವಾರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಿಗ್ಗಾಲು, ಸೋಮವಾರಪೇಟೆ, ಕಾಕೋಟು, ಪರಂಬು ಪ್ರದೇಶಗಳಲ್ಲಿ ಕೂಡ ಬುಧವಾರ ಮಳೆಯಾಗಿದೆ. ಮಳೆಯಾಗುತ್ತಿರುವ ವಿಡಿಯೋಗಳನ್ನು ಕೂಡ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.
Few droplets/extremely light passing drizzles here in Chikkabanawara, Yelahanka, isolated places in North Bengaluru 🤩😍 pic.twitter.com/yFSoDT46ay
— Karnataka Weather (@Bnglrweatherman) March 14, 2024
ಗುರುವಾರ ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರ್ಷದ ಮೊದಲ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಗ್ರಾಮದಲ್ಲಿ ಉತ್ತಮ ಮಳೆಯಾಗಿದೆ. ಬಿಸಿಲಿನ ಝಳಕ್ಕೆ ಬಳಲಿದ್ದ ಜನರಲ್ಲಿ ಬೇಸಿಗೆ ಮಳೆ ಸಂತಸ ತಂದಿದೆ. ಮುತ್ತೋಡಿ ತಪ್ಪಲಿನ ಜಾಗರ ಹೋಬಳಿಯ ಕೊಳಗಾಮೆ, ಮೇಲಿನಹುಲುವತ್ತಿ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ.
ಶೀಘ್ರದಲ್ಲೇ ಬೆಂಗಳೂರಿನಲ್ಲಿ ಮಳೆ
ಬೆಂಗಳೂರಿನಲ್ಲಿ ಈ ಬಾರಿ ಬೇಸಿಗೆ ತೀವ್ರವಾಗಿದೆ, ದಾಖಲೆಯ ಪ್ರಮಾಣದಲ್ಲಿ ತಾಪಮಾನ ಹೆಚ್ಚಾಗಿದ್ದು, ಜನ ಕಂಗಾಲಾಗಿದ್ದಾರೆ. ಬಿಸಿಲಿನ ಬೇಗೆ ಒಂದೆಡೆಯಾದರೆ ಮತ್ತೊಂದೆಡೆ ನೀರಿನ ಅಭಾವ ಕೂಡ ಜನರನ್ನು ಹೈರಾಣಾಗಿಸಿದೆ. ಟ್ಯಾಂಕರ್ ನೀರಿನ ದರ ಗಗನಕ್ಕೇರಿದೆ. ಸದ್ಯ ಬೆಂಗಳೂರಿನ ಈ ಸಮಸ್ಯೆಗೆ ಮಳೆಯೊಂದೇ ಪರಿಹಾರವಾಗಿದೆ.
ಗುರುವಾರ ಮಳೆ ಹನಿಗಳು ಬಿದ್ದ ಬಳಿಕ ನಗರದಲ್ಲಿ ಈ ಬಾರಿ ಅವಧಿಗಿಂತ ಮುನ್ನವೇ ಮಳೆ ಬರುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಏನಾದರೂ ಆಗಲಿ ಮೊದಲು ಮಳೆ ಬಂದ್ರೆ ಸಾಕಪ್ಪಾ ಎಂದು ಜನ ಅಂದುಕೊಳ್ಳುತ್ತಿದ್ದಾರೆ.












Click it and Unblock the Notifications