Bengaluru Rain Death: ಸಾವಿನ ಬಳಿಕ ಎಚ್ಚೆತ್ತ ಬಿಬಿಎಂಪಿಯಿಂದ 18 ಅಂಡರ್‌ಪಾಸ್ ಸರ್ವೇ, ಇಂದೇ ವರದಿ ಸಲ್ಲಿಕೆ, ವಿವರ
ಬೆಂಗಳೂರು, ಮೇ 22: ಬೆಂಗಳೂರಿನಲ್ಲಿ ಕೆಡಿಮೆ ಅವಧಿಯಲ್ಲಿ ಸುರಿದ ಮಹಾ ಮಳೆಗೆ ಯುವತಿ ಹಾಗೂ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸಾವಿನ ನಂತರ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ನಗರದಲ್ಲಿನ ದುಸ್ಥಿತಿಯಲ್ಲಿರುವ 18 ಅಂಡರ್‌ಪಾಸ್‌ಗಳನ್ನು ಸರ್ವೇ ಮಾಡಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇಂದು ಸಂಜೆ ಸರ್ಕಾರಕ್ಕೆ ಸರ್ವೇ ವರದಿ ಸಲ್ಲಿಕೆಯಾಗುವ ನಿರೀಕ್ಷೆ ಇದೆ.
ಮಳೆಯ ಸಾವಿನ ಘಟನೆ ಕುರಿತು ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು,ಭಾನುವಾರ ಮಧ್ಯಾಹ್ನ 3.15 ಗಂಟೆಯಿಂದ 4 ಗಂಟೆವರೆಗೆ ಮಳೆ ಆಗಿದೆ. ಇಷ್ಟು ಅಲ್ಪ ಅವಧಿಯಲ್ಲಿ (45 ನಿಮಿಷ) ಸುಮಾರು 50ಮಿಲಿ ಮೀಟರ್‌ನಷ್ಟು ಜೋರು ಮಳೆ ಬಂದಿದೆ ಎಂದು ತಿಳಿದು ಬಂದಿದೆ. ಕೆಲವೆಡೆ ಇದಕ್ಕಿಂತಲೂ ಹೆಚ್ಚೇ ಮಳೆ ಬಿದ್ದಿದೆ. ಈ ವೇಳೆ ಅಂಡರ್‌ಪಾಸ್‌ನಲ್ಲಿ ಸಿಲುಕಿ ಯುವತಿ ಸಾವು ಬೇಸರದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಬಿಬಿಎಂಪಿ ಕಟ್ಟೆಚ್ಚರ ವಹಿಸಲಿದೆ. ನಗರದ ಎಲ್ಲ ಅಂಡರ್ ಪಾಸ್ ಸರ್ವೇ ನಡೆಸುತ್ತಿದ್ದೇವೆ. ರೈಲ್ವೆ ಅಂಡರ್‌ಪಾಸ್ ಸೇರಿದಂತೆ ಒಟ್ಟು 18 ಅಂಡರ್‌ಪಾಸ್‌ಗಳ ಸರ್ವೆ ಕಾರ್ಯ ಆರಂಭವಾಗಿದೆ. ಮಳೆಗಾಲದಲ್ಲಿ ಯಾವ ಯಾವ ಅಂಡರ್‌ಪಾಸ್‌ಗಳು ಸೂಕ್ತ, ಯಾವುವು ಸಾರ್ವಜನಿಕ ಬಳಕೆಗೆ ಸೂಕ್ತವಲ್ಲ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಅಂಡರ್‌ಪಾಸ್ ಸರ್ವೇ ವರದಿ ಇಂದು ಸಂಜೆ ಸಲ್ಲಿಕೆ?
ಈ ಕುರಿತು ವರದಿಯನ್ನು ಅಧಿಕಾರಿಗಳು ಸಂಜೆ ವೇಳೆಗೆ ತಯಾರಿಸಿ ಸಲ್ಲಿಸಲಿದ್ದಾರೆ. ಅದರ ಆಧಾರದ ಮೇಲೆ ನಾವು ಮಳೆ ನೀರು ಅಂಡರ್‌ಪಾಸ್‌ಗಳಲ್ಲಿ ನಿಲ್ಲದಂತೆ ಕ್ರಮ ಕೈಗೊಳ್ಳುತ್ತೇವೆ. ಕೇವಲ ಮಳೆ ನೀರಿಗೆ ಅಂಡರ್‌ಪಾಸ್‌ನಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗುವುದಿಲ್ಲ. ಬದಲಾಗಿ ಬೇರೆಡೆಯಿಂದ ನೀರು ಹರಿದು ಬಂದು ಹೀಗೆ ಅವಘಡ ಸಂಭವಿಸುತ್ತದೆ. ಬೇರೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಆ ಸಮಸ್ಯೆಗೆ ಕಡಿವಾಣ ಹಾಕಲು ನಿರ್ಧರಿಸಿದ್ದೇವೆ.
ಇನ್ನೂ ಆರ್ ವೃತ್ತ ಅಂಡರ್‌ಪಾಸ್‌ನಲ್ಲಿ ವೇಗದ ಗಾಳಿಯಿಂದ ಮರ ಕೊಂಬೆ, ಎಲೆಗಳು ಬಿದ್ದು ಮಳೆ ನೀರು ಹರಿವಿನ ಸ್ಥಳ ಬ್ಲಾಕ್ ಆಗಿದೆ. ಇದೇ ವೇಳೆ ಮಳೆ ಬಂದು ಇಂತಹ ಅವಘಡ ಸಂಭವಿಸಿದೆ ಎಂದು ಅವರು ವಿವರಿಸಿದರು.

ಈ ಜಾಗಗಳಲ್ಲಿ ಮನೆಗಳಿಗೆ ನುಗ್ಗಿದ ನೀರು
ನಗರದಲ್ಲಿ ನೆನ್ನೆ ಸಂಜೆ 7 ಗಂಟೆಗೆ ಸಾಮಾನ್ಯ ಪರಿಸ್ಥಿತಿ ಕಂಡು ಬಂದಿದೆ. ಮಳೆಗೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ 15ರಿಂದ 20 ಮನೆಗೆ, ಡಿಜೆ ಹಳ್ಳಿಯಲ್ಲಿ ನಾಲ್ಕೈದು ಮನೆಗಳಿಗೆ ನೀರು ನುಗ್ಗಿದೆ. ಬೇರೆಡೆ ಸಮಸ್ಯೆಯಾಗಿಲ್ಲ.
ಕೋಟಿ ಕೊಟಿ ಅನುದಾನ ಪಡೆದ ಕೆಲಸ ಮಾಡಿಲ್ಲ ಎಂಬ ಬಸವರಾಜ ಬೊಮ್ಮಾಯಿ ಅವರ ಆರೋಪಕ್ಕೆ ಉತ್ತರಿಸಿದ ಅವರು, ನಿಗದಿತ ಅನುದಾನ ಬಿಬಿಎಂಪಿ ಪಡೆದಿದೆ. ಬಿಬಿಎಂಪಿ ಕಳೆದ ವರ್ಷ ನೀರು ನಿಲ್ಲದಂತೆ ನಿರ್ವಹಣೆ ಮಾಡಲು ನಗರದ 28 ಕ್ಷೇತ್ರಗಳಲ್ಲಿ ಕ್ಷೇತ್ರವಾರು ಗುತ್ತಿಗೆ ನೀಡಿದ್ದೇವೆ. ಆ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.












Click it and Unblock the Notifications