Bengaluru Rain: ಮಧ್ಯರಾತ್ರಿ ರಾಜಧಾನಿಗೆ ತಂಪೆರದ ವರುಣ: ಇನ್ನೂ ಎರಡು ದಿನ ರಾಜ್ಯದಲ್ಲಿ ಭರ್ಜರಿ ಮಳೆ
ಬೇಸಿಗೆಯಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರಿಗೆ ಮಳೆ ತಂಪೆರದಿದೆ. ಭಾನುವಾರ ರಾತ್ರಿ ಸುಮಾರು ಒಂದು ಗಂಟೆಗಳ ಕಾಲ ರಾಜಧಾನಿಯ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಸೋಮವಾರ ಮುಂಜಾನೆ ಬೆಂಗಳೂರು ಫುಲ್ ಕೂಲ್, ಕೂಲ್ ಆಗಿತ್ತು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಭಾಗಗಳಲ್ಲಿ ಕೂಡ ಉತ್ತಮ ಮಳೆಯಾಗಿದೆ.
ಭಾನುವಾರ ರಾತ್ರಿ ಬೆಂಗಳೂರಿನ ಲಗ್ಗೆರೆ, ರಾಜಾಜಿನಗರ, ಜಯನಗರ, ಕೆಆರ್ ಮಾರ್ಕೆಟ್, ಮೆಜೆಸ್ಟಿಕ್, ಹೆಬ್ಬಾಳ, ಕೋರಮಂಗಲ, ಸಿಲ್ಕ್ ಬೋರ್ಡ್, ಯಶವಂತಪುರ ಸೇರಿದಂತೆ ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ಉತ್ತಮ ಮಳೆಯಿಂದಾಗಿ ಮಧ್ಯರಾತ್ರಿ ಹಲವು ರಸ್ತೆಗಳು ಕೂಡ ಜಲಾವೃತವಾಗಿವೆ, ಸೋಮವಾರ ಬೆಳಿಗ್ಗೆ ಕೂಡ ಹಲವು ಕಡೆ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಯಿತು.

ಮೇ 3 ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಭರ್ಜರಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರವಾಳಿ ಭಾಗಗಳಲ್ಲಿ ಕೂಡ ಬಿರುಗಾಳಿ ಸಹಿತ ಮಳೆಯಾಗುತ್ತದೆ ಎಂದು ಹೇಳಲಾಗಿದೆ.
ಬೆಂಗಳೂರು ಮಾತ್ರವಲ್ಲದೆ, ತುಮಕೂರು, ಶಿರಾ, ಕುಣಿಗಲ್, ಗುಬ್ಬಿ, ಶ್ರೀರಂಗಪಟ್ಟಣ, ಹೊಸದುರ್ಗ, ಶ್ರವಣಬೆಳಗೊಳ, ಬೇಲೂರು, ಯಾದಗಿರಿ, ತಾವರಗೇರಾ, ಮುದಗಲ್, ಸಿಂಧನೂರು, ಬಾದಾಮಿ, ಇಳಕಲ್, ಹುಣಸಗಿ, ಭಾಗಮಂಡಲ, ಮಡಿಕೇರಿ, ಭಾಗಮಂಡಲ, ಪೊನ್ನಂಪೇಟೆ, ಮೈಸೂರು, ವಿರಾಜಪೇಟೆ ಮುಂತಾದ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಇನ್ನೂ ಎರಡು ದಿನ ಉತ್ತಮ ಮಳೆ ಮುನ್ಸೂಚನೆ
ರಾಜ್ಯದಲ್ಲಿ ಇನ್ನೂ ಎರಡು ದಿನ (ಮೇ 3ರವರೆಗೆ) ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಳಗಾವಿ, ಚಿತ್ರದುರ್ಗ ವಿಜಯಪುರ, ಕಲಬುರ್ಗಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ತುಮಕೂರು, ಚಿಕ್ಕಮಗಳೂರ, ಮೈಸೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಕಡಿಮೆಯಾದ ತಾಪಮಾನ: ಹೆಚ್ಚು ಬಿಸಿಲಿನಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಉತ್ತಮ ಮಳೆಯಿಂದಾಗಿ ಸ್ವಲ್ಪ ನೆಮ್ಮದಿ ಸಿಕ್ಕಂತಾಗಿದೆ. ಬಿಸಿ ಗಾಳಿ, ಅತ್ಯಧಿಕ ತಾಪಮಾನ ಜನರನ್ನು ಕಂಗೆಡಿಸಿತ್ತು, ರಾಜಧಾನಿ ಬೆಂಗಳೂರಿನಲ್ಲಿ ಕೂಡ ಬಿಸಿಲು ಹೆಚ್ಚಾಗಿದ್ದರಿಂದ ಜನ ಪರಿತಪಿಸಿದ್ದರು. ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ತಾಪಮಾನ ಗಮನಾರ್ಹವಾಗಿ ಕಡಿಮೆಯಾಗಿದೆ. ಇನ್ನೂ ಎರಡು ದಿನ ಉತ್ತಮ ಮಳೆಯಾಗಲಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ ಇನ್ನಷ್ಟು ಕಡಿಮೆಯಾಗಲಿದೆ.












Click it and Unblock the Notifications