ಬೆಂಗಳೂರು ಮಳೆ: ಬೀಳುವ ಮರಗಳ ಬಗ್ಗೆ ಚಿಂತೆ ಬಿಡಿ, ಫಟಾಫಟ್ ತೆರವಿಗೆ ವ್ಯವಸ್ಥೆ ರೆಡಿ
ಬೆಂಗಳೂರು, ಜೂನ್ 08: ಮಳೆಗಾಲ ಶುರುವಾಗಿದ್ದು, ಬೆಂಗಳೂರಿನಲ್ಲಿ ಬರುವ ಮಳೆ ಗಾಳಿಗೆ ಮರಗಳು ಧರೆಗುರುಳುವುದು ಸಾಮಾನ್ಯ. ಕಳೆದ ಬಾರಿಯ ಮಳೆಗೆ ನೂರಾರು ಮರಗಳು, ಮರದ ಕೊಂಬೆಗಳು ಮುರಿದು ಬಿದ್ದಿದ್ದವು. ಇದೀಗ ಮರಗಳನ್ನು ತ್ವರಿತವಾಗಿ ತೆರವು ಮಾಡಿ, ಜನ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಬಿಬಿಎಂಪಿ ವ್ಯವಸ್ಥೆ ಮಾಡಿಕೊಂಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಬೃಹತ್ ಮರಗಳು ಧರೆಗುರುಳಿದ್ದು, ಹೆಚ್ಚುವರಿಯಾಗಿ ಕ್ರೇನ್ ಗಳನ್ನು ಹಾಗೂ ಸಿಲ್ಟ್ ಮತ್ತು ಟ್ರ್ಯಾಕ್ಟರ್ ಗಳನ್ನು ಅಗತ್ಯ ಸಿಬ್ಬಂದಿ/ಅಭಿಯಂತರರು/ಅರಣ್ಯ ಸಿಬ್ಬಂದಿ ಬಳಸಿಕೊಂಡು ಮರಗಳನ್ನು ತೆರವುಗೊಳಿಸಲಾಗುತ್ತಿದೆ.

ಪಾಲಿಕೆ ಅರಣ್ಯ ವಿಭಾಗದಿಂದ 39 ಮರ ತೆರವುಗೊಳಿಸುವ ತಂಡಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಧರೆಗುರುಳಿದ ಮರ, ರೆಂಬೆ/ಕೊಂಬೆಗಳನ್ನು ತೆರವುಗೊಳಿಸಲಾಗುತ್ತಿದೆ. ಇದರ ಜೊತೆಗೆ 4 ದ್ವಿಚಕ್ರ ತಂಡಗಳಿಂದಲೂ ಬಿದ್ದಿರುವ ಮರಗಳ ತೆರವು ಕಾರ್ಯ ನಿರಂತರವಾಗಿ ನಡೆಯುತ್ತಿದೆ.
11 ಕ್ರೇನ್ ಗಳು, 2 ಜೆಸಿಬಿ, ಕಟಾವು ಯಂತ್ರಗಳು
ಅರಣ್ಯ ವಿಭಾಗದ ಮರ ತೆರವು ತಂಡಗಳ ಜೊತೆಗೆ ವಲಯವಾರು ಹೆಚ್ಚುವರಿ ಮರ ತೆರವು ತಂಡಗಳು, ವಾಹನಗಳನ್ನು ನಿಯೋಜಿಸಿಕೊಂಡು ತೆರವು ಮಾಡಲಾಗುತ್ತಿದೆ. ದೊಡ್ಡ ದೊಡ್ಡ ಮರಗಳನ್ನು ತೆರವುಗೊಳಿಸಲು 11 ಕ್ರೇನ್ ಗಳು, 2 ಜೆಸಿಬಿ ಹಾಗೂ ಮರ ಕಟಾವು ಯಂತ್ರೋಪಕರಣಗಳನ್ನು ಬಳಿಸಿಕೊಳ್ಳಲಾಗಿದೆ.
ಬಿಬಿಎಂಪಿ ವಾಡ್೯ಗಳಲ್ಲಿರುವ ಟ್ರ್ಯಾಕ್ಟರ್ ಗಳಿಂದ ಕಟಾವು ಮಾಡಿರುವ ಮರದ ದಿಮ್ಮಿ, ಕೊಂಬೆಗಳನ್ನು ಡಂಪಿಂಗ್ ಯಾರ್ಡ್ ಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಮರದ ತ್ಯಾಜ್ಯ ಮರದ ದಿಂಬೆ, ಕೊಂಬೆ ತೆರವಿಗಾಗಿ ಈಗಾಗಲೇ ವಾರ್ಡ್ ಗಳಲ್ಲಿರುವ ಶಿಲ್ಟ್ ಮತ್ತು ಟ್ರ್ಯಾಕ್ಟರ್ ಬಳಕೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ವಿಲೇವಾರಿಗೆ ಶಿಲ್ಟ್ ಮತ್ತು ಟ್ರ್ಯಾಕ್ಟರ್ ಬಳಕೆ
ಧರೆಗುರುಳಿರುವ ಮರಗಳ ಸ್ಥಳದಲ್ಲಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿಸುವ ಸಲುವಾಗಿ ಆಯಾ ವಲಯಗಳಲ್ಲಿ ಕಾರ್ಯನಿರ್ವಹಿಸುವ ಶಿಲ್ಟ್ ಹಾಗೂ ಟ್ರ್ಯಾಕ್ಟರ್ ಗಳನ್ನು ಬಳಸಿಕೊಂಡು ರಸ್ತೆ ಬದಿ, ಪಾದಚಾರಿ ಮಾರ್ಗದಲ್ಲಿರುವ ತ್ಯಾಜ್ಯವನ್ನು ತೆರುವುಗೊಳಿಸಲಾಗುತ್ತಿದೆ.
ಚಿಂತೆ ಬಿಟ್ಟು ಮರಗಳ ತೆರವಿಗೆ ಸಂಪರ್ಕಿಸಿ
ಬೃಹತ್ ಮರಗಳು ಧರೆಗುರುಳಿರುವ ಕಡೆ ಮರ ಕಟಾವು ಯಂತ್ರದ ಮೂಲಕ ಕತ್ತರಿಸಿ, ಚಿಕ್ಕ-ಚಿಕ್ಕ ರೆಂಬೆ, ಎಲೆಗಳು ರಸ್ತೆ ಬದಿ, ಪಾದವಾರಿ ಮಾರ್ಗ ಅಥವಾ ಸ್ಥಳದಲ್ಲೇ ಇದೆ. ಇದರಿಂದ ನಾಗರೀಕರಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆ ಆಗುತ್ತಿದ್ದರೆ ಪಾಲಿಕೆ ಉಚಿತ ಸಹಾಯವಾಣಿ ಸಂಖ್ಯೆಯಾದ 1533 ಗೆ ನಾಗರೀಕರು ಕರೆ ಮಾಡಿ ದೂರು ನೀಡಬಹುದು. ದೂರು ನೀಡಿದ ಕೂಡಲೆ ಅರಣ್ಯ ವಿಭಾಗದ ಮರ ತೆರವು ತಂಡವು ಸ್ಥಳಕ್ಕೆ ತೆರಳಿ ತೆರವುಗೊಳಿಲು ಸಿಬ್ಬಂದಿ ಕಳುಹಿಸುತ್ತಾರೆ.
ಕಳೆದ ವಾರ ಬಂದ ಮಳೆಗೆ ಬೆಂಗಳೂರಿನಲ್ಲಿ ಬಿದ್ದ ನೂರಾರು ಮರಗಳು, ಕೊಂಬೆಗಳನ್ನು ತೆರವು ಮಾಡಲಾಗಿದೆ. ಈ ಕುರಿತು ಬಿಬಿಎಂಪಿ ಅಧಿಕೃತ ಮಾಹಿತಿ ನೀಡಿದೆ.












Click it and Unblock the Notifications