ತಿಪ್ಪೆಯಲ್ಲಿತ್ತು 30 ಲಕ್ಷ, ಚಿಂದಿ ಆಯುತ್ತಿದ್ದ ವ್ಯಕ್ತಿಗೆ ರೇಲ್ವೆ ಟ್ರ್ಯಾಕ್ ಮೇಲೆ ಒಲಿದ ಅದೃಷ್ಟ!
ಯಾರ ಜೀವನ ಹೇಗೆ ಬದಲಾಗುತ್ತೋ ಗೊತ್ತಿಲ್ಲ, ಅದ್ರಲ್ಲೂ ಲಕ್ಷ್ಮಿ ಒಲಿಯಬೇಕು ಅಂತಾ ಡಿಸೈಡ್ ಮಾಡಿದ್ರೆ ಯಾವ ಕ್ಷಣ ಬೇಕಾದರೂ ಜೀವನ ಬದಲಾಗಿಬಿಡುತ್ತೆ. ಹೀಗೆ ಇಲ್ಲೊಬ್ಬ ಚಿಂದಿ ಆಯುತ್ತಿದ್ದ ವ್ಯಕ್ತಿಗೆ, ದಿಢೀರ್ 30 ಲಕ್ಷ ರೂಪಾಯಿ ಮೌಲ್ಯದ ನೋಟುಗಳು ಇದ್ದ ಬ್ಯಾಗ್ ಸಿಕ್ಕುಬಿಟ್ಟಿದೆ! ಆಮೇಲೆ ಏನಾಯ್ತು ಅಂದ್ರಾ? ಅದೇ ಈ ಕಹಾನಿಯಲ್ಲಿ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಪಾರ್ಟ್.
ನಿಮಗೆಲ್ಲ ಗೊತ್ತಿರುವಂತೆ ಬೆಂಗಳೂರಿನಲ್ಲಿ ಕನ್ನಡಿಗರನ್ನ ಬಿಟ್ಟು ಪರಭಾಷಿಗರೇ ಅತಿಹೆಚ್ಚು ಪ್ರಮಾಣದಲ್ಲಿ ಇದ್ದಾರೆ. ಅದರಲ್ಲೂ ದಕ್ಷಿಣ ಭಾರತೀಯರನ್ನ ಬಿಟ್ಟು, ಉತ್ತರ ಭಾರತದ ಹತ್ತಾರು ಲಕ್ಷ ಜನರು ರಾಜಧಾನಿ ಬೆಂಗಳೂರಿನಲ್ಲಿ ವಾಸವಿದ್ದಾರೆ. ಹೀಗೆ ಪಶ್ಚಿಮ ಬಂಗಾಳ ರಾಜ್ಯದ ನಾಡಿಯಾದ ಸಲೇಮನ್ ಎಸ್‌ಕೆ ಕೂಡ, ಬೆಂಗಳೂರಿನಲ್ಲೇ ಜೀವನ ಕಟ್ಟಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದ. ಚಿಂದಿ ಆಯುತ್ತಾ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಈ ವ್ಯಕ್ತಿಗೆ ನಾಗವಾರ ರೈಲು ನಿಲ್ದಾಣ ಪ್ರದೇಶದಲ್ಲಿ ಕಸದಲ್ಲಿ ಅದೃಷ್ಟಲಕ್ಷ್ಮೀ ಒಲಿದುಬಿಟ್ಟಳು.

ಕಸದಲ್ಲಿ ಸಿಕ್ಕಿತ್ತು 30 ಲಕ್ಷ ರೂ.!
ಅಂದಹಾಗೆ ಪ್ರತಿದಿನದ ರೀತಿ ಸಲೇಮನ್ ಎಸ್‌ಕೆ ಚಿಂದಿ ಆಯಲು ಹೋದಾಗ, ರಾಜಧಾನಿ ಬೆಂಗಳೂರಿನ ನಾಗವಾರ ರೈಲು ನಿಲ್ದಾಣದ ಪ್ರದೇಶದಲ್ಲಿ ಸುಮಾರು 3 ಮಿಲಿಯನ್ ಡಾಲರ್ ಹಣವಿದ್ದ ಪ್ಲಾಸ್ಟಿಕ್ ಬ್ಯಾಗ್ ಸಿಕ್ಕಿದೆ. ಕಸವನ್ನು ಸಂಗ್ರಹ ಮಾಡುವ ಸಮಯದಲ್ಲಿ ಹೀಗೆ ಆ ವ್ಯಕ್ತಿಗೆ ಅಮೆರಿಕದ ಕರೆನ್ಸಿ ಇರುವ ಪ್ಲಾಸ್ಟಿಕ್ ಬ್ಯಾಗ್ ಸಿಕ್ಕಿದೆ. ಹೀಗೆ ಒಟ್ಟು 30 ಲಕ್ಷ ರೂ. ಬೆಲೆಬಾಳುವ ಅಮೆರಿಕನ್ ಡಾಲರ್ ನೋಟುಗಳು ಆ ಬ್ಯಾಗ್‌ನಲ್ಲಿತ್ತು ಎನ್ನಲಾಗಿದೆ. ಇನ್ನು ತನ್ನ ಕೈಗೆ ಸಿಕ್ಕಿದ್ದ 30 ಲಕ್ಷ ಬೆಲೆಬಾಳುವ ಪ್ಲಾಸ್ಟಿಕ್ ಬ್ಯಾಗ್‌ನ ಸಲೇಮನ್ ಏನು ಮಾಡಿದ್ದ ಗೊತ್ತಾ?
ಸ್ಕ್ರ್ಯಾಪ್ ಡೀಲರ್‌ಗೆ ಫೋನ್ ಕಾಲ್!
ಹೀಗೆ ಕಸದ ರೀತಿ ಸಿಕ್ಕಿದ್ದ ಪ್ಲಾಸ್ಟಿಕ್ ಬ್ಯಾಗ್ ಅನ್ನ ತೆಗೆದುಕೊಂಡು ಈ ವ್ಯಕ್ತಿ ಬಂದಿದ್ದಾನೆ. ಕೊನೆಗೆ, ಅಮೃತಹಳ್ಳಿಯ ತನ್ನ ಮನೆಗೆ ಅಮೆರಿಕದ ಕರೆನ್ಸಿ ಇದ್ದ ಪ್ಲಾಸ್ಟಿಕ್ ಬ್ಯಾಗ್ ಅನ್ನು ತೆಗೆದುಕೊಂಡು ಬಂದು ನೋಡಿದ್ದಾನೆ. ಮೊದಲಿಗೆ ಸಲೇಮನ್‌ಗೆ ಏನು ಮಾಡಬೇಕು ಅಂತ ಗೊತ್ತಾಗಿಲ್ಲ. ಚೀಲದಲ್ಲಿ ಡಾಲರ್ ನೋಡಿದ ಆತ ಕಕ್ಕಾಬಿಕ್ಕಿ ಆಗಿದ್ದಾನೆ ಜೊತೆಗೆ ಪ್ಲಾಸ್ಟಿಕ್ ಚೀಲದಲ್ಲಿ ವಿಶ್ವಸಂಸ್ಥೆಯ ಮುದ್ರೆ ಹೊಂದಿರುವ ಪತ್ರವು ಇತ್ತು ಎನ್ನಲಾಗಿದೆ. ಆಗ ತಕ್ಷಣವೇ ತನಗೆ ಪರಿಚಯ ಇದ್ದ ಸ್ಕ್ರ್ಯಾಪ್ ಡೀಲರ್‌ಗೆ ಫೋನ್ ಮಾಡಿದ್ದಾನೆ ಸಲೇಮನ್ ಎಸ್‌ಕೆ.

ಪೊಲೀಸರಿಗೆ ಮುಟ್ಟಿತ್ತು ವಿಷಯ!
ಸ್ಕ್ರ್ಯಾಪ್ ಡೀಲರ್ ಬಪ್ಪ ಎನ್ನುವವನಿಗೆ ಸಲೇಮನ್ ಕರೆ ಮಾಡಿ ದುಡ್ಡು ಸಿಕ್ಕ ವಿಚಾರವನ್ನ ತಿಳಿಸಿದ ನಂತರ, ಬಪ್ಪ ತಾನು ಪ್ರಯಾಣ ಮಾಡುತ್ತಿರುವುದಾಗಿ ಹೇಳಿದ್ದಾನೆ. ಬೆಂಗಳೂರಿಗೆ ನಾನು ವಾಪಸ್ ಬರುವ ತನಕ ದುಡ್ಡು ಇರುವ ಚೀಲವನ್ನ ಹುಷಾರಾಗಿ ನಿನ್ನ ಮನೆಯಲ್ಲಿ ಇಟ್ಟುಕೊಂಡಿರು ಎಂದಿದ್ದಾನೆ. ಆದರೆ ಭಯಪಟ್ಟ ಸಲೇಮನ್, ಸಾಮಾಜಿಕ ಕಾರ್ಯಕರ್ತ ಆರ್. ಕಲೀಂ ಉಲ್ಲಾ ಅವರಿಗೆ ಮಾಹಿತಿ ನೀಡಿದ್ದ. ತಕ್ಷಣ ಕಲೀಂ ಉಲ್ಲಾ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ವಿಷಯ ತಿಳಿಸಿದ್ದಾರೆ.
ಇನ್ನು ಹಣ ಸಿಕ್ಕಿದ ಬಗ್ಗೆ ಮಾಹಿತಿಯನ್ನು ಪೊಲೀಸ್ ಆಯುಕ್ತರಿಗೆ ನೀಡಿದಾಗ ಹಣದ ಜತೆಗೆ ಸಲೇಮನ್ ಅವರನ್ನು ಕರೆದುಕೊಂಡು ಬರಲು ಹೇಳಿದ್ದಾರೆ. ಕಚೇರಿಗೆ ಬಂದ ಬಳಿಕ ಬ್ಯಾಗ್ ಪರಿಶೀಲನೆ ಮಾಡಿದ್ದು, ತಕ್ಷಣ ಹೆಬ್ಬಾಳ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿ ಸ್ಥಳವನ್ನು ಪರಿಶೀಲಿಸಿದ್ದಾರೆ. ಆದ್ರೆ ಈಗ ಸಿಕ್ಕ ಮಾಹಿತಿ ಪ್ರಕಾರ ಕಸದಲ್ಲಿ ಇದ್ದ ಕರೆನ್ಸಿ ನೋಟುಗಳು ನಕಲಿ ಎನ್ನಲಾಗುತ್ತಿದೆ. ಹೀಗಾಗಿ ಪರಿಶೀಲನೆಗಾಗಿ ರಿಸರ್ವ್ ಬ್ಯಾಂಕ್‌ಗೆ ನೋಟು ಇದ್ದ ಚೀಲ ಕಳುಹಿಸಲಾಗಿದೆ. ಸಂಪೂರ್ಣ ಮಾಹಿತಿ ಸಿಗುವ ತನಕ ಕಾದು ನೋಡಬೇಕಿದ್ದು ಪರಿಶೀಲನೆ ಬಳಿಕ ನೋಟುಗಳ ಅಸಲಿತನ ಬಯಲಾಗಲಿದೆ.












Click it and Unblock the Notifications