ನಾಟಿ ಕೋಳಿ ಸಾರು & ಮುದ್ದೆ ಉಣ್ಣುವ ಸ್ಪರ್ಧೆ ಬೆಂಗಳೂರಿನಲ್ಲಿ, ಮಿಸ್ ಮಾಡದೆ ಎಂಟ್ರಿ ಕೊಡಿ!
ಕರ್ನಾಟಕ ಅಂದ್ರೆ ರಾಗಿ ಮುದ್ದೆ, ರಾಗಿ ಮುದ್ದೆಗೆ ಕರ್ನಾಟಕವೇ ಫೇಮಸ್... ಯಾಕಂದ್ರೆ ಕರ್ನಾಟಕದ ಜನಪ್ರಿಯ ಆಹಾರದ ಪೈಕಿ ರಾಗಿ ಮುದ್ದೆ ಕೂಡ ಒಂದಾಗಿದೆ. ಸಸ್ಯಹಾರಿಗಳಿಗೆ ರಾಗಿ ಮುದ್ದೆ ಜೊತೆಗೆ ಬಸ್ಸಾರು & ಸೊಪ್ಪು ಸಾರು ಇದ್ದರೆ, ನಾನ್ ವೆಜ್ ಪ್ರಿಯರಿಗೆ ಮಾತ್ರ ವೆರೈಟಿ ವೆರೈಟಿ ಸಾರುಗಳು ರಾಗಿ ಮುದ್ದೆ ಜೊತೆಗೆ ಸಿಗುತ್ತವೆ. ಅದರಲ್ಲೂ ರಾಗಿ ಮುದ್ದೆ & ನಾಟಿ ಕೋಳಿ ಸಾರು ಅಂದ್ರೆ ಕೇಳಬೇಕೆ? ಯಾಕಪ್ಪ ಈ ಮಾತು ಅಂದ್ರೆ ನೀವು ನಾಟಿ ಕೋಳಿ ಸಾರು & ರಾಗಿ ಮುದ್ದೆ ಪ್ರಿಯರಾಗಿದ್ದರೆ ನಾಳೆ ಮಿಸ್ ಮಾಡದೆ ಎಚ್‌ಎಸ್‌ಆರ್ ಲೇಔಟ್ ಕಡೆ ಹೋಗಿ ಬನ್ನಿ!
ಹೌದು, ಒಂದು ಕಾಲದಲ್ಲಿ ರಾಗಿ ತಿನ್ನುವವರು ಬಡವರು ಎಂಬ ಮಾತು ಇತ್ತು. ಆದರೆ ಇದೀಗ ರಾಗಿ ಇಲ್ಲದ ಮನೆಗಳೇ ಇಲ್ಲ ಅನ್ನಬಹುದು. ಯಾಕಂದ್ರೆ ಶುಗರ್ ಅನ್ನೋ ಮಾರಕ ಕಾಯಿಲೆ ಕಾಟ ಹೆಚ್ಚಾದ ನಂತರ ರಾಗಿ ಬಳಕೆ ಮಾಡುವವರ ಸಂಖ್ಯೆ ಕೂಡ ದೊಡ್ಡ ಪ್ರಮಾಣದಲ್ಲೇ ಏರಿಕೆ ಕಂಡಿದೆ. ಹಾಗೇ ರಾಗಿ ಬೆಲೆ ಕೂಡ ಆಕಾಶ ಮುಟ್ಟುತ್ತಿದೆ. ಒಂದು ಕೆಜಿ ಬಾಸ್ಮತಿ ಅಕ್ಕಿ ಬೆಲೆಗೆ ಕಾಂಪಿಟೇಷನ್ ಕೊಡುವಷ್ಟು ರಾಗಿ ಬೆಲೆ ಹೆಚ್ಚಾಗುತ್ತಿದೆ. ಹೀಗಿದ್ದಾಗ ಬೆಂಗಳೂರಿನಲ್ಲಿ ರಾಗಿ ಮುದ್ದೆ & ನಾಟಿ ಕೋಳಿ ಸಾರು ತಿನ್ನುವ ಭರ್ಜರಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ.

ಎಚ್‌ಎಸ್‌ಆರ್ ಬಡಾವಣೆಯಲ್ಲಿ ಸ್ಪರ್ಧೆ
ನಾಳೆ ಭಾನುವಾರ, ಹೀಗಾಗಿ ಬಹುತೇಕರು ನಾನ್ ವೆಜ್ ಮಾಡಿ ತಿನ್ನುತ್ತಾರೆ. ಹೀಗಿದ್ದಾಗಲೇ ಬೆಂಗಳೂರಿನ ಪ್ರತಿಷ್ಠಿ ಲೇಔಟ್ ಪೈಕಿ ಒಂದಾದ ಎಚ್‌ಎಸ್‌ಆರ್ ಬಡಾವಣೆಯ ಪರಂಗಿಪಾಳ್ಯ ಸಮೀಪ ಇದೀಗ ನಾಟಿ ಕೋಳಿ ಸಾರು & ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ಅಷ್ಟಕ್ಕೂ ನವೆಂಬರ್ 10ರ ಭಾನುವಾರ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಭಾನುವಾರ ಮಧ್ಯಾಹ್ನ 12 ಗಂಟೆಗೆ ಸ್ಪರ್ಧೆ ಆರಂಭ ಆಗಲಿದ್ದು, 12:45ರ ತನಕ ಈ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯಲ್ಲಿ ಬಹುಮಾನ ಸಿಗಲಿದೆ!
'ಕರ್ನಾಟಕ ಸುವರ್ಣ ಸಂಭ್ರಮ'ದ ಹಿನ್ನೆಲೆ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಎಚ್‌ಎಸ್ಆರ್ ಬಡಾವಣೆಯ ಸ್ಥಳೀಯ ಮುಖಂಡ ಅನಿಲ್ ರೆಡ್ಡಿ ಮುಂದಾಳತ್ವದಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ನಾಟಿ ಕೋಳಿ ಸಾರು & ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ, ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ಟಗರು, ದ್ವಿತೀಯ ಬಹುಮಾನ ಕುರಿ ಪಟ್ಲಿ, 3ನೇ ಬಹುಮಾನವಾಗಿ 2 ನಾಟಿ ಕೋಳಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ಫೋಟೋ ಪ್ರಕಾರ, ಈ ಸ್ಪರ್ಧೆಗೆ ರಿಜಿಸ್ಟರ್ ಮಾಡಿಕೊಳ್ಳಲು & ಹೆಚ್ಚಿನ ಮಾಹಿತಿಗೆ 99165 06837ಗೆ ಸಂಪರ್ಕ ಮಾಡಬಹುದಾಗಿದೆ.
ಬಹುಮಾನ ವಿತರಿಸಲಿದ್ದಾರೆ ಸಚಿವರು
ನಾಟಿ ಕೋಳಿ ಸಾರು & ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಬಹುಮಾನ ವಿತರಿಸಲಿದ್ದಾರೆ. ಹಾಗೇ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿಯೇ ಈ ಕಾರ್ಯಕ್ರಮಕ್ಕೆ ಅಬ್ಬರದ ಸಿದ್ಧತೆಯನ್ನು ಮಾಡಲಾಗಿದೆ.












Click it and Unblock the Notifications