Bengaluru Property Owners: ಖಾಲಿ ನಿವೇಶನದಾರರಿಗೆ ನೋಟಿಸ್ ಜಾರಿ, ದಂಡ ಎಚ್ಚರಿಕೆ ಕೊಟ್ಟ ಪಾಲಿಕೆ
ಬೆಂಗಳೂರು: ಉದ್ಯಾನ ನಗರ ಬೆಂಗಳೂರಿನ ಸೌಂದರ್ಯ ಹೆಚ್ಚಳಕ್ಕೆ, ಸ್ವಚ್ಛತೆಗೆ, ಜನ ಆರೋಗ್ಯದ ಕುರಿತು ನಿರಂತರ ಮೇಲ್ವಿಚಾರಣೆ ಮಾಡುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಅನೇಕ ಕ್ರಮಗಳನ್ನು ಜರುಗಿಸುತ್ತಿದೆ. ಇದರ ಭಾಗವಾಗಿ ಆರೋಗ್ಯ ದೃಷ್ಟಿಯಿಂದ ಖಾಲಿ ನಿವೇಶಗಳಲ್ಲಿ ಕಸ ಚೆಲ್ಲುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಡೆಡ್‌ಲೈನ್ ಒಳಗೆ ಯಾರೆಲ್ಲ ನಿವೇಶನ ಸ್ವಚ್ಛವಾಗಿಟ್ಟಿಲ್ಲವೋ ಅಂತಹ ಸುಮಾರು 41 ಖಾಲಿ ನಿವೇಶನಗಳ ಮಾಲೀಕರಿಗೆ ಆಸ್ತಿ ಮಾಲೀಕರಿಗೆ ಸ್ವಚ್ಛತೆಗಾಗಿ ನೋಟೀಸ್ ಜಾರಿಗೊಳಿಸಲಾಗಿದೆ.
ಹೌದು, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರಾದ ಡಾ.ರಾಜೇಂದ್ರ ಕೆ.ವಿ. ಅವರ ನಿರ್ದೇಶನದ ಮೇರೆಗೆ ಪಾಲಿಕೆಯ ವ್ಯಾಪ್ತಿಯಲ್ಲಿರುವ ಅನೈರ್ಮಲ್ಯದಿಂದ ಕೂಡಿರುವ ಖಾಲಿ ನಿವೇಶನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಪ್ರಾಥಮಿಕವಾಗಿ ಒಟ್ಟು41 ಅಸ್ವಚ್ಛ ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳನ್ನು ಸ್ವಚ್ಛ ಹಾಗೂ ಆರೋಗ್ಯಕರ ಸ್ಥಿತಿಯಲ್ಲಿ ನಿರ್ವಹಿಸಲು ಮುಂದಾಗಿದೆ.
ನೋಟಿಸ್ ಜಾರಿಯಾದ ನಿವೇಶನಗಳ ವಿವರ
* ಗೋವಿಂದರಾಜನಗರ : 09
* ಬಸವನಗುಡಿ : 05
* ರಾಜಾಜಿನಗರ : 05
* ಮಲ್ಲೇಶ್ವರಂ : 02
* ಪದ್ಮನಾಭನಗರ : 20
* ಒಟ್ಟು: 41
ಕಾನೂನು ನಿಯಮಗಳ ಉಲ್ಲೇಖ
ಘನತ್ಯಾಜ್ಯ ನಿರ್ವಹಣಾ ನಿಯಮಗಳು-2016ರ ನಿಯಮ 15 (2), ಘನತ್ಯಾಜ್ಯ ನಿರ್ವಹಣಾ ಉಪ-ನಿಯಮಗಳು-2020ರ ಉಪ-ನಿಯಮ 18(1)(a), 18(1)(b) ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024ರ ಸೆಕ್ಷನ್ 274(1), 285(2) ಮತ್ತು 290ರ ಅನ್ವಯ ಖಾಲಿ ನಿವೇಶನಗಳಲ್ಲಿ ಕಸ ಸುಡುವುದು ಮತ್ತು ತ್ಯಾಜ್ಯ ಎಸೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿವೇಶನಗಳಲ್ಲಿ ಸಂಗ್ರಹವಾಗಿರುವ ಕಸ, ಕಳೆಗಿಡಗಳು ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು (C&D Waste) ಸ್ವಚ್ಛಗೊಳಿಸಿ ಸೂಕ್ತವಾಗಿ ನಿರ್ವಹಿಸುವುದು ಆಯಾ ಮಾಲೀಕರ ಕರ್ತವ್ಯವಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ನೋಟಿಸ್ ನಿರ್ಲಕ್ಷಿಸಿದರೆ ದಂಡ ವಸೂಲಿ
ಸದ್ಯ ನೋಟಿಸ್ ಜಾರಿಗೊಳಿಸಿದ ಮೇಲೂ ಸಂಬಂಧಿಸಿದ ಮಾಲೀಕರು ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಬೇಕು. ನಿಗದಿತ ಅವಧಿಯೊಳಗೆ ಸ್ವಚ್ಛಗೊಳಿಸದಿದ್ದರೇ ಪಾಲಿಕೆಯ ವತಿಯಿಂದಲೇ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಗುತ್ತದೆ. ನಿವೇಶನದ ವಿಸ್ತೀರ್ಣಕ್ಕೆ ಅನುಗುಣವಾಗಿ ತಗಲುವ ಸಂಪೂರ್ಣ ಸ್ವಚ್ಛತಾ ವೆಚ್ಚ ಮತ್ತು ತ್ಯಾಜ್ಯ ಸಾಗಾಣಿಕೆ ವೆಚ್ಚವನ್ನು ನಿಯಮಾನುಸಾರ ಸಂಬಂಧಪಟ್ಟ ಮಾಲೀಕರ ಆಸ್ತಿ ತೆರಿಗೆಯೊಂದಿಗೆ (Property Tax) ಸೇರಿಸಿ ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಸ್ವಚ್ಛಗೊಳಿಸದ ಖಾಲಿ ನಿವೇಶನಗಳನ್ನು ಆಯಾ ಪಾಲಿಕೆಗಳ ವಶಕ್ಕೆ ಪಡೆಯುವುದಾಗಿಯು ಎಚ್ಚರಿಕೆ ಕೊಡಲಾಗಿದೆ.
ಸಾಂಕ್ರಾಮಿಕ ರೋಗದ ಭೀತಿ
ಖಾಲಿ ನಿವೇಶನಗಳು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಹಾಗೂ ಸಾಂಕ್ರಾಮಿಕ ರೋಗ ಹರಡುವ ಅನೈರ್ಮಲ್ಯದ ತಾಣಗಳಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛ ಹಾಗೂ ಸುಸ್ಥಿರ ಪರಿಸರ ನಿರ್ಮಿಸಲು ಸಾರ್ವಜನಿಕರು ಮತ್ತು ನಿವೇಶನ ಮಾಲೀಕರು ಪಾಲಿಕೆಯೊಂದಿಗೆ ಸಹಕರಿಸಬೇಕಾಗಿ ಕೋರಿದೆ ಎಂದು ಆಯುಕ್ತರು ತಿಳಿಸಿದ್ದಾರೆ.


Click it and Unblock the Notifications
