Bengaluru land: ಬೆಂಗಳೂರಿನ ಪ್ರಮುಖ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಚುರುಕು: ಜಿಬಿಎ, ಎಲ್ಲೆಲ್ಲಿ ಭೂಸ್ವಾಧೀನ
ಬೆಂಗಳೂರು: ಬೆಂಗಳೂರಿನ ಮತ್ತೊಂದು ಪ್ರಮುಖ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮಹತ್ವದ ಅಪ್ಡೇಟ್ಸ್ ನೀಡಿದೆ. ಬೆಂಗಳೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಲಾಗಿದ್ದು, ಈ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಬೆಂಗಳೂರಿನ ಕಾಡುಗೋಡಿ ರಸ್ತೆ ಅಗಲೀಕರಣ, ಗ್ರೇಡ್ ಸೆಪರೇಟರ್ ಹಾಗೂ ಎಲಿವೇಟೆಡ್ ಕಾಮಗಾರಿಗೆ ಸಂಬಂಧಿಸಿದಂತೆ ಸಭೆ ನಡೆದಿದೆ. ಈ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಮುಖ್ಯವಾಗಿ ಈ ಯೋಜನೆಗೆ ಅವಶ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯ ವೇಗ ಹೆಚ್ಚಿಸಿ ಮತ್ತು ಅಭಿವೃದ್ದಿ ಕಾಮಗಾರಿ ಕೈಗೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ. ಈ ಯೋಜನೆಗೆ ಅವಶ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು ವಿವಿಧ ಇಲಾಖೆಗಳ ನಡುವೆ ನಡೆದ ಸಮನ್ವಯ ಸಭೆಯಲ್ಲಿ ಹೇಳಿದ್ದಾರೆ.

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆ.ಆರ್.ಡಿ.ಸಿ.ಎಲ್ ವತಿಯಿಂದ ಕೈಗೊಳ್ಳಬೇಕಿರುವ ರಸ್ತೆ ಅಗಲೀಕರಣ, ಗ್ರೇಡ್ ಸೆಪರೇಟರ್ ಹಾಗೂ ಎಲಿವೇಟೆಡ್ ಕಾರಿಡಾರ್ ಕಾಮಗಾರಿಗಳ ಭೂಸ್ವಾಧೀನ ಮತ್ತು ಟಿ.ಡಿ.ಆರ್. ಪ್ರಕ್ರಿಯೆಗೆ ಸಂಬಂಧಿಸಿದಂತೆ ಗೊಂದಲಗಳನ್ನು ಪರಿಹರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕಾಡುಗೋಡಿ: ರೈಲ್ವೆ ಮೇಲ್ಸೇತುವೆ ಕಾಮಗಾರಿ
ಇನ್ನು ಕಾಡುಗೋಡಿ ಹೆಚ್ಚುವರಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಸಂಬಂಧಿಸಿದಂತೆ ಆಗಿರುವ ಸಮಸ್ಯೆಗಳ ಬಗ್ಗೆ ಆಯುಕ್ತರು ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅಗತ್ಯವಿರುವ ಭೂಮಿಯನ್ನು ಸ್ವತ್ತಿನ ಮಾಲೀಕರ ಮನವೊಲಿಸುವ ಮೂಲಕ ಪಡೆದುಕೊಳ್ಳುವ ಬಗ್ಗೆ ನಿರ್ಧರಿಸಲಾಗಿದೆ. ಇನ್ನು ವರ್ತೂರು ಕೋಡಿಯಿಂದ ವರ್ತೂರು ಗ್ರಾಮದವರೆಗಿನ ಪರಿಷ್ಕೃತ ಮಹಾಯೋಜನೆಯಂತೆ 45.00ಮೀ ಅಗಲದ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ 14 ಸ್ವತ್ತುಗಳ ಮಾಲೀಕರಿಂದ ರಸ್ತೆ ಅಗಲೀಕರಣಕ್ಕೆ ಅವಶ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆಯೂ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಸ್ವತ್ತುಗಳು ವಶಕ್ಕೆ ಪಡೆಯಲು ನಿರ್ಧಾರ
ಇನ್ನು ಬೆಂಗಳೂರಿನ ವಿನಾಯಕ ಥಿಯೇಟರ್ ಬಳಿ ರಸ್ತೆ ಅಗಲೀಕರಣಕ್ಕಾಗಿ 143 ಸ್ವತ್ತುಗಳನ್ನು ಈಗಾಗಲೇ ಅಧಿಸೂಚನೆ ಹೊರಡಿಸಿಲಾಗಿದೆ. ಆ ಪೈಕಿ ಆರ್.ಡಿ ಲ್ಯಾಂಡ್ ಆಗಿರುವ ಸ್ವತ್ತುಗಳನ್ನು ಈ ಕೂಡಲೇ ವಶಕ್ಕೆ ಪಡೆದು ಅಭಿವೃದ್ದಿ ಕಾಮಗಾರಿ ಕೈಗೊಳ್ಳುವಂತೆ ತಿಳಿಸಲಾಗಿದೆ. ಕಾಡುಗೋಡಿ ಗ್ರಾಮದ ಸರ್ವೆ ಸಂಖ್ಯೆ 307 ಮತ್ತು 308 ರಲ್ಲಿರುವ ಸರ್ಕಾರಕ್ಕೆ ಸೇರಿರುವ ಸ್ವತ್ತು ಇದೆ. ಬೆಂಗಳೂರು ಪೂರ್ವ ತಾಲ್ಲೂಕು ಹಾಗೂ ನಗರ ಪಾಲಿಕೆಯ ಭೂ ದಾಖಲೆಗಳು ಇಲಾಖೆ ಜಂಟಿಯಾಗಿ ಸ್ವತ್ತಿನ ಮಾಲೀಕರ ಸಮ್ಮುಖದಲ್ಲಿ ಸಮೀಕ್ಷೆ ನಡೆಸಿ ಇನ್ನೆರಡು ದಿನಗಳಲ್ಲಿ ವರದಿ ನೀಡುವಂತೆ ನಿರ್ಧರಿಸಲಾಗಿದೆ.
ಕಾಡುಗೋಡಿ ಗ್ರಾಮದ ಸರ್ವೆ ಸಂಖ್ಯೆ 271ರಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವದ ದಾಖಲೆಗಳನ್ನು ಪರಿಶೀಲಿಸಿ ಸ್ವತ್ತಿನ ಮಾಲೀಕರೊಂದಿಗೆ ರಸ್ತೆ ಅಗಲೀಕರಣಕ್ಕೆ ಅವಶ್ಯವಿರುವ ಜಾಗವನ್ನು ಭೂಸ್ವಾಧೀನ ಪಡೆಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ. ವರ್ತೂರು ಕೋಡಿ ಗ್ರೇಡ್ ಸೆಪರೇಟರ್ ಕಾಮಗಾರಿಗೆ ಸಂಬಂಧಿಸಿದಂತೆ 11 ಸ್ವತ್ತುಗಳ ಮಾಲೀಕರ ವಿಚಾರದಲ್ಲೂ ಇದೇ ಮಾದರಿ ಅನುಸರಿಸಲು ನಿರ್ಧರಿಸಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆ.ಆರ್.ಡಿ.ಸಿ.ಎಲ್ ವತಿಯಿಂದ ಕೈಗೊಳ್ಳಬೇಕಿರುವ ರಸ್ತೆ ಅಗಲೀಕರಣ, ಗ್ರೇಡ್ ಸೆಪರೇಟರ್ ಹಾಗೂ ಎಲಿವೇಟೆಡ್ ಕಾರಿಡಾರ್ ಕಾಮಗಾರಿಗಳ ಭೂಸ್ವಾಧೀನ ಮತ್ತು ಟಿ.ಡಿ.ಆರ್. ಪ್ರಕ್ರಿಯೆಗೆ ಸಂಬಂಧಿಸಿದ ಜಟಿಲತೆಯನ್ನು ಬಗೆಹರಿಸಿಕೊಂಡು ಸಮನ್ವಯದೊಂದಿಗೆ ಅಭಿವೃದ್ದಿ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಆಯುಕ್ತರು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.












Click it and Unblock the Notifications