ತುರ್ತು ಸಹಾಯವಾಣಿ: ಅನ್ಯ ಭಾಷಿಕರಿಗೆ ನೆರವಾಗಲು ಬೆಂಗಳೂರು ಪೊಲೀಸರ ತಯಾರಿ
ಬೆಂಗಳೂರು, ಮೇ 07: ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕರೆ ಮಾಡಲು ನಾಗರಿಕರಿಗೆ ಏಕರೂಪದ ಸಂಖ್ಯೆ 112ಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಅನ್ಯ ಭಾಷಿಕರು ಸಹ ಇರುವುದರಿಂದ ಅವರಿಗೆ ಸಹಾಯಕವಾಗಲು ಕೃತಕ ಬುದ್ಧಿಮತ್ತೆ ಆಧಾರಿತ ಸಹಾಯ ವ್ಯವಸ್ಥೆ ಮಾಡಲು ಬೆಂಗಳೂರು ನಗರ ಪೊಲೀಸರು ಮುಂದಾಗಿದ್ದಾರೆ.
ಭಾರತದ ವಿವಿಧ ಭಾಷೆಗಳಲ್ಲಿ ಜನರು ಇನ್ನು ಮುಂದೆ ಬೆಂಗಳೂರು ಪೊಲೀಸರಿಗೆ ಕರೆ ಮಾಡಿ ಸಹಾಯ ಪಡೆಯಬಹುದು. ಬೆಂಗಾಲಿ, ಗುಜರಾತಿ, ಒಡಿಯಾ, ಮಣಿಪುರಿ, ಕಾಶ್ಮೀರಿ, ನೇಪಾಳಿ ಮತ್ತು ಅಸ್ಸಾಮಿ ಭಾಷೆಗಳಲ್ಲಿ ಎಐ ಸಹಾಯದಿಂದ ದೂರು ನೀಡಬಹುದು. ಸ್ಪ್ಯಾನಿಷ್, ಫ್ರೆಂಚ್ ಮತ್ತು ಅರೆಬಿಕ್ ಭಾಷೆಗಳಲ್ಲಿಯೂ ಈ ಆಯ್ಕೆ ಲಭ್ಯವಿದೆ.

ಬೆಂಗಳೂರು ನಗರದಲ್ಲಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರಿಗೆ ಸಹಾಯಕವಾಗಲು 112 ತುರ್ತು ವ್ಯವಸ್ಥೆಗೆ ಬೇರೆ ಬೇರೆ ಭಾಷೆಗಳನ್ನು ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಎಐ ತಂತ್ರಜ್ಞಾನದ ಮೊರೆ ಹೋಗಲಾಗಿದೆ.
ನಗರ ಪೊಲೀಸರು ಈ ಮಾದರಿ ವ್ಯವಸ್ಥೆಯ ಸ್ಥಾಪನೆ ಮತ್ತು ನಿರ್ವಹಣೆಗಾಗಿ ಈಗಾಗಲೇ ಟೆಂಡರ್ ಕರೆದಿದ್ದಾರೆ. ಎಐ ಧ್ವನಿ ಸಹಾಯದಿಂದ ಅನೇಕ ಭಾಷೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಂವಹನ ಮಾಡಲು ಸಾಧ್ಯವಿದೆ. ಇದನ್ನು ಉಪಯೋಗ ಮಾಡಿಕೊಂಡು ನಗರದಲ್ಲಿರುವ ಇತರ ಭಾಷಿಕರಿಗೆ ಸಹಾಯ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಆರಂಭದಲ್ಲಿ ಇದನ್ನು ಬೆಂಗಾಳಿ, ಗುಜರಾತಿ, ಒಡಿಯಾ, ಮಣಿಪುರಿ, ಕಾಶ್ಮೀರಿ, ನೇಪಾಳಿ ಮತ್ತು ಅಸ್ಸಾಮಿ ಮುಂತಾದ ಭಾರತೀಯ ಭಾಷೆಗಳ ಜೊತೆಗೆ ಸ್ಪ್ಯಾನಿಷ್, ಫ್ರೆಂಚ್ ಮತ್ತು ಅರೇಬಿಕ್ ಮುಂತಾದ ವಿದೇಶಿ ಭಾಷೆಗಳನ್ನು ಇದು ಬೆಂಬಲಿಸಲಿದೆ. ಈ ಪ್ರಯೋಗ ಯಶಸ್ವಿಯಾದರೆ ಇನ್ನಷ್ಟು ಭಾಷೆಗಳನ್ನು ಸೇರಿಸಲು ಮತ್ತೊಮ್ಮೆ ಟೆಂಡರ್ ಕರೆಯಲಾಗುತ್ತದೆ.
122 ಸಹಾಯವಾಣಿಯಲ್ಲಿ ಸದ್ಯ 100ಕ್ಕೂ ಅಧಿಕ ಸಿಬ್ಬಂದಿಗಳಿದ್ದಾರೆ. ಒಂದು ಶಿಫ್ಟ್‌ನಲ್ಲಿ 30 ಸಿಬ್ಬಂದಿಗಳು ಕೆಲಸ ಮಾಡುತ್ತಾರೆ. ಈ ಸಿಬ್ಬಂದಿಗಳಲ್ಲಿ ಹಲವರು ದಕ್ಷಿಣ ಭಾರತದ ಭಾಷೆಗಳಾದ ತಮಿಳು, ಮಲೆಯಾಳಂ ಮತ್ತು ತೆಲಗು ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಸದ್ಯ ಸಹಾಯವಾಣಿಯ ಪ್ರಮುಖ ಭಾಷೆ ಕನ್ನಡ, ಇಂಗ್ಲಿಶ್, ಹಿಂದಿ ಆಗಿದೆ.
ಕೆಲವು ದಿನಗಳ ಹಿಂದೆ ತುರ್ತು ಸಹಾಯವಾಣಿಗೆ ಕರೆ ಮಾಡಿದ್ದ ಸ್ಪ್ಯಾನಿಷ್ ವ್ಯಕ್ತಿಗೆ ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಲಾಗಿತ್ತು ಎಂಬ ವರದಿಗಳು ಬಂದಿದ್ದವು. ಈ ವರದಿಯನ್ನು ಬೆಂಗಳೂರು ಪೊಲೀಸರು ತಳ್ಳಿ ಹಾಕಿದ್ದರು. ಘಟನೆ ನಡೆದಾಗ ಈ ಕರೆ ಬಂದಿರಲಿಲ್ಲ. ಸ್ಥಳೀಯರ ಮಾಹಿತಿ ಆಧರಿಸಿ ಮರುದಿನ ಬೆಳಗ್ಗೆ ಈ ಘಟನೆ ಕುರಿತು ಕ್ರಮ ಕೈಗೊಳ್ಳಲಾಗಿತ್ತು.
112 ಸಹಾಯವಾಣಿ ಈಗಿರುವ ಸೇವೆಗಳಿಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಣೆ ಮಾಡಲಿದೆ. ಎಐ ಆಧಾರಿತ ವ್ಯವಸ್ಥೆ ವಿವಿಧ ತುರ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬಲ್ಲವು. ಉದಾಹರಣೆಗೆ, ನಾಪತ್ತೆಯಾಗಿರುವ ವ್ಯಕ್ತಿಯ ವರದಿಯಲ್ಲಿ, ನಾಪತ್ತೆಯಾಗಿರುವ ವ್ಯಕ್ತಿ ಮಕ್ಕಳಾ, ವಯಸ್ಕನಾ ಅಥವಾ ವೃದ್ಧನಾ ಎಂಬುದರ ಆಧಾರದ ಮೇಲೆ ತನ್ನ ಪ್ರಶ್ನೆಗಳನ್ನು ಬದಲಾಯಿಸುತ್ತದೆ. ಇದು ತುರ್ತು ಸೇವಾ ವ್ಯವಸ್ಥೆಗಳೊಂದಿಗೆ ಸಂವಹನ ನಡೆಸಿ ಆಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ದಳಗಳು ಮತ್ತು ವಿಪತ್ತು ಪ್ರತಿಕ್ರಿಯಾ ತಂಡಗಳನ್ನು ಸಮನ್ವಯಗೊಳಿಸಬಹುದು, ಜೊತೆಗೆ ಸ್ಥಳ ಟ್ರ್ಯಾಕಿಂಗ್ ವೈಶಿಷ್ಟ್ಯಗಳು ಕರೆಮಾಡುವವರ ಸ್ಥಳವನ್ನು ಹೆಚ್ಚು ನಿಖರವಾಗಿ ಗುರುತಿಸಲು ಸಹಾಯ ಮಾಡುತ್ತವೆ.












Click it and Unblock the Notifications