NIMHANS: ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ; ಮುಂದುವರಿದ ಅವ್ಯವಸ್ಥೆ, ರೋಗಿ - ಸಂಬಂಧಿಕರ ಸಂಕಷ್ಟದ ಕಥೆ
NIMHANS: ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ; ಮುಂದುವರಿದ ಅವ್ಯವಸ್ಥೆ, ರೋಗಿ - ಸಂಬಂಧಿಕರ ಸಂಕಷ್ಟದ ಕಥೆ: ಹವ್ಯಾಸಿ ಬರಹಗಾರ ಚಿದು ಯುವ ಸಂಚಲನ ಅವರ ಬರಹ ಇಲ್ಲಿದೆ.
ನಿಮ್ಹಾನ್ಸ್ ಇಲ್ಲಿನ ವೈದ್ಯರ ಚಿಕಿತ್ಸೆಗೆ ಮೆಚ್ಚಲೇಬೇಕು, ಬೇರೆಯವರ ಅನುಭವ ಹೇಗಿದೆಯೋ ಗೊತ್ತಿಲ್ಲ. ಆದರೆ ನಾನು ಇದುವರೆಗೂ ಕರೆದುಕೊಂಡು ಹೋದಂತಹ ಎಲ್ಲರಿಗೂ ಉತ್ತಮ ಚಿಕಿತ್ಸೆ ಸಿಕ್ಕಿದೆ. ಆದರೆ, ಇಲ್ಲಿನ ವ್ಯವಸ್ಥೆಗಳು ಇನ್ನೂ ಸರಿ ಹೋಗಬೇಕಿದೆ. ಇಲ್ಲಿಗೆ ಹೋಗುವುದೇ ತುರ್ತು ಸಂದರ್ಭಗಳಲ್ಲಿ, ಅದರಲ್ಲೂ ತಲೆಗೆ ಸಂಬಂಧಿಸಿದ ವಿಷಯಕ್ಕೆ ಮಾತ್ರ, ಇಲ್ಲಿ ರೋಗಿಯನ್ನು ಆ್ಯಂಬುಲೆನ್ಸ್‌ನಿಂದ ಇಳಿಸಿ, ಆಸ್ಪತ್ರೆಯ ಒಳಕ್ಕೆ ಕರೆದುಕೊಂಡು ಹೋಗುವುದೇ ದೊಡ್ಡ ಸಾಹಸದ ಕೆಲಸ.

ಇದಕ್ಕೆ ಕಾರಣ ಸ್ಟ್ರಕ್ಚರ್, ವೀಲ್ ಚೇರ್ ಮತ್ತು ಜಾಗದ ವ್ಯವಸ್ಥೆ ಸಹ ಸರಿಯಾಗಿ ಇಲ್ಲದೆ ಇರುವುದು ನೋವಿನ ಸಂಗತಿ. ಹೊಳಕ್ಕೆ ಹೋದ ನಂತರ ವೈದ್ಯರು ತಮ್ಮ ಕರ್ತವ್ಯವನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ನಿಮಾನ್ಸ್ ತುರ್ತು ಚಿಕಿತ್ಸಾ ವಿಭಾಗದಲ್ಲಂತೂ ಸೆಕ್ಯೂರಿಟಿಗಳ ವರ್ತನೆ ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತದೆ. (ಎಲ್ಲರೂ ಅಲ್ಲ ಕೆಲವರು ) ಅವರು ಬಳಸುವ ಅವ್ಯಾಚ ಪದಗಳು ಇಂಥವರಿಗೂ ಜಗಳ ಮಾಡಲು ಪ್ರೇರಣೆ ನೀಡುತ್ತದೆ. ಆಸ್ಪತ್ರೆಯಲ್ಲಿ ಎಲ್ಲರನ್ನೂ ಬಿಡುವುದು ಬೇಡ. ಅವರು ಅವರ ಜವಾಬ್ದಾರಿಯನ್ನು ನಿರ್ವಹಿಸಲಿ. ಆದರೆ ಅದು ಪ್ರತಿ ವ್ಯಕ್ತಿಗೂ ಗೌರವ ನೀಡುವಂತಿರಬೇಕು.
ಆಸ್ಪತ್ರೆಯಲ್ಲಿ ರೋಗಿಯ ಸಂಬಂಧಿಕರು ಅವರದೇ ನೋವಿನಲ್ಲಿ, ಭಯದಲ್ಲಿ ಬಳಲುತ್ತಿರುತ್ತಾರೆ. ಅವರ ಜೊತೆಗಿನ ವರ್ತನೆಯು ತುಂಬಾ ಮುಖ್ಯವಾಗಿರುತ್ತದೆ. ಏಕೆಂದರೆ ಆಸ್ಪತ್ರೆ ಒಳಗೆ ಚಿಕಿತ್ಸೆಗಾಗಿ ವ್ಯಕ್ತಿ ಇದ್ದರೆ. ಆಸ್ಪತ್ರೆಯ ಹೊರಗೆ ಪುಟ್‌ಪಾತ್ ಮೇಲೆ ಕೂತು. ಕಾಯುವ ಸ್ಥಿತಿಯಿದೆಯಲ್ಲ ಅದು ತುಂಬಾ ಹೀನಾಯ ಸ್ಥಿತಿ ಎಂದು ನನಗನಿಸುತ್ತದೆ. ನಿಮ್ಹಾನ್ಸ್‌ನಲ್ಲಿ ಇನ್ನೊಂದು ವ್ಯವಸ್ಥೆ ಇದೆ ಅದನ್ನು ಪ್ರಚಾರ ಮಾಡದೆ ಇರುವುದು ಬೇಸರದ ವಿಚಾರ. ರೋಗಿಯ ಸಂಬಂಧಿಕರಿಗೆ ಉಳಿದುಕೊಳ್ಳಲು ಕಮ್ಮಿ ಬೆಲೆಯಲ್ಲಿ ಆಸ್ಪತ್ರೆಯದೆ ರೂಮ್ ವ್ಯವಸ್ಥೆಗಳು ಸಹ ಇವೆ.
ಈ ಮಾಹಿತಿಯು ತುಂಬಾ ಜನಕ್ಕೆ ತಿಳಿದೇ ಇಲ್ಲ. ಪುಟ್ ಬಾತ್ ಮೇಲೆ ಸೊಳ್ಳೆ ಅಷ್ಟೇ ಅಲ್ಲ ಹೆಗ್ಗಣಗಳ ಕೈಯಲ್ಲೂ ಕಚ್ಚಿಸಿಕೊಂಡು ಮಲಗುವ ಸ್ಥಿತಿ ನಿಮ್ಹಾನ್ಸ್ ಮುಂದೆ ಇದೆ. ಸರ್ಕಾರಗಳಿಗೆ ಜನರಿಗೆ ಉತ್ತಮ ಆರೋಗ್ಯ ಕೊಡುವ ಜವಾಬ್ದಾರಿಯು ಮರೆತು ಹೋಗುತ್ತಿರುವುದು ನಾವೆಲ್ಲರೂ ಗಮನಿಸಲೇಬೇಕು. ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಬೇಕೆಂದು ನಿರಂತರವಾಗಿ ಹೋರಾಟ ಮಾಡುತ್ತಿದ್ದರು ಇನ್ನೂ ಅವರಿಗೆ ಇದರ ತೀವ್ರತೆ ಅರಿಯದೆ ಇರುವುದು ಇಂದಿನ ಭ್ರಷ್ಟ ವ್ಯವಸ್ಥೆಗೆ ಸಾಕ್ಷಿಯಾಗಿದೆ.
ನೆಟ್ಟಿಗರು ಹೇಳಿದ್ದೇನು
BSNL ನಲ್ಲಿ ಎಲ್ಲಾ ಸೌಲಭ್ಯಗಳು ಇದ್ದರೂ ನಷ್ಟದ ಹಾದಿ ಹಿಡಿಯಲು ಅಲ್ಲಿನ ಸಿಬ್ಬಂದಿಯ ಬೆಜವಾಬ್ದಾರಿ ನಡವಳಿಕೆಯೆ ಕಾರಣವಾಯಿತು. ಹಾಗೆಯೇ ಈಗ ನಿಮ್ಹಾನ್ಸ್‌ನಲ್ಲಿ ಎಲ್ಲಾ ರೀತಿಯ ಸೌಲಭ್ಯ, ಉತ್ತಮ ಸಂಬಳ ಇದ್ದರು ಅಲ್ಲಿನ ಸಿಬ್ಬಂದಿಯ ನಡವಳಿಕೆಯಿಂದ ಜನ ಬೇಸತ್ತು ಸಾಲ ಮಾಡಿಯಾದರು ಸರಿ ಜೀವ ಉಳಿಸಿಕೊಳ್ಳಲು ಖಾಸಗಿ ಆಸ್ಪತ್ರೆ ಕಡೆಗೆ ಹೋಗುತ್ತಾರೆ. ಮುಂದೊಂದು ದಿನ ಸರ್ಕಾರ ಆಸ್ಪತ್ರೆ ನಷ್ಟ, ನಿರ್ವಹಣೆ ಸರಿ ಇಲ್ಲದ ನೆಪ ಹೇಳಿ ಖಾಸಗಿಯವರಿಗೆ ವಹಿಸುತ್ತದೆ. ಇದರಿಂದ ಬಡವರಿಗೆ ಆರೋಗ್ಯ ಸೇವೆ ದುಬಾರಿ, ವಿದ್ಯಾವಂತರಿಗೆ ಸರ್ಕಾರಿ ಉದ್ಯೋಗ ಅಥವಾ ಉದ್ಯೋಗ ಭದ್ರತೆ ಇಲ್ಲದಾಗಿ ಖಾಸಗಿಯವರು ಹೇಳಿದಂತೆ ರಾತ್ರಿ ಹಗಲೆನ್ನದೆ ದುಡಿಯುವ ಪರಿಸ್ಥಿತಿ ಬರುತ್ತದೆ. ಅಲ್ಲಿನ ಸಿಬ್ಬಂದಿಗೆ ಈ ಸತ್ಯದ ಅರಿವಾಗಬೇಕಿದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಬರಹ: ಚಿದು ಯುವ ಸಂಚಲನ












Click it and Unblock the Notifications