Bengaluru Tunnel Road: ಬೆಂಗಳೂರಿಗೆ ಟನಲ್ ರಸ್ತೆ ಅಗತ್ಯ: ರಾಜ್ಯ ಟ್ರಾವೆಲ್ ಮಾಲೀಕರ ಸಂಘ
ಬೆಂಗಳೂರು, ಅಕ್ಟೋಬರ್ 28: ಬೆಂಗಳೂರು ಟ್ರಾಫಿಕ್ ಸಮಸ್ಯೆ ವಿಚಾರದಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಇಂತಹ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ಟನಲ್ ರಸ್ತೆ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಿದೆ. ಸರ್ಕಾರ ನಿರ್ಧಾರ ಸ್ವಾಗತಿಸಿರುವ ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘವು ರಾಜಧಾನಿಗೆ ಉತ್ತಮ ಮಟ್ಟದ ಟನಲ್ ರಸ್ತೆ ನಿರ್ಮಾಣ ಅಗತ್ಯವೆಂದು ಹೇಳಿದೆ. ಮತ್ತೊಂದು ಕಡೆಗಳಲ್ಲಿ ಈ ಯೋಜನೆಗೆ ಸಾಕಷ್ಟು ವಿರೋಧ ಮೊದಲಿನಿಂದಲೂ ಕೇಳಿ ಬರುತ್ತಿದೆ.
ಬೆಂಗಳೂರು ನಗರದ ಟ್ರಾಫಿಕ್ ದಟ್ಟಣೆ ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಸರ್ಕಾರವು ಹೆಬ್ಬಾಳ ಜಂಕ್ಷನ್‌ನ ಎಸ್ಟೀಮ್ ಮಾಲ್‌ನಿಂದ ಹಿಡಿದು HSR ಲೇಔಟ್‌ನ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ 16.7 ಕಿಮೀ ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದು ಸ್ವಾಗತಾರ್ಹ ಎಂದು ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅವರು ತಿಳಿಸಿದ್ದಾರೆ.

ನಗರದ ಉತ್ತರ-ದಕ್ಷಿಣ ದಿಕ್ಕಿನ ಸಂಚಾರವನ್ನು ಸುಗಮಗೊಳಿಸುವ ಈ ಯೋಜನೆ, ಸುಮಾರು ₹17,780 ಕೋಟಿ ವೆಚ್ಚದಲ್ಲಿ ಜಾರಿಗೊಳ್ಳಲಿದೆ. ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ಟನಲ್ ರಸ್ತೆ ನಿರ್ಮಾಣವಾಗಬೇಕೆಂಬುದು ನಮ್ಮ ಸಂಘದ ಒತ್ತಾಯ. ನಗರದದ ಭವಿಷ್ಯ ಗಮನದಲ್ಲಿಟ್ಟುಕೊಂಡು ಸುರಕ್ಷಿತ, ವೇಗವಾದ ಮತ್ತು ದೀರ್ಘಕಾಲೀನ ಪರಿಹಾರ ನೀಡುವಂತಹ ಟನಲ್ ರಸ್ತೆ ಅಗತ್ಯವಾಗಿದೆ.
ಪ್ರವಾಸೋದ್ಯಮ ಮತ್ತು ಪ್ರಯಾಣಿಕರ ಸಂಚಾರ ವ್ಯವಸ್ಥೆಗೆ ಇದು ಮಹತ್ತರ ಸಹಾಯ ಮಾಡಲಿದೆ. ಇಂಧನ ಉಳಿತಾಯ, ಸಮಯದ ಉಳಿವು ಮತ್ತು ಅಪಘಾತಗಳ ಕಡಿತಕ್ಕೆ ಈ ರಸ್ತೆ ಪ್ರಾಮುಖ್ಯವಾಗಲಿದೆ. ನಮ್ಮ ಮೆಟ್ರೋ ಟ್ರಾಕ್ ನಿರ್ಮಾಣಕ್ಕಾಗಿ ಮಿಲಿಟರಿ ಜಾಗವನ್ನು ಬಳಸಿದಂತೆ, ನಗರದ ಅಭಿವೃದ್ಧಿ ಸಂದರ್ಭದಲ್ಲಿ ಹಲವು ಕೆರೆಗಳ ಬಫರ್ ಝೋನ್‌ಗಳಲ್ಲಿ ರಸ್ತೆಗಳನ್ನು ರೂಪಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಗರದ ಸುರಕ್ಷತೆ, ಭವಿಷ್ಯದ ವಾಸ್ತವ್ಯ ಹಾಗೂ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯುತ್ತಮ ಮಟ್ಟದ ಟನಲ್ ರಸ್ತೆ ನಿರ್ಮಾಣ ಸರ್ಕಾರದಿಂದ ನಡೆಯಬೇಕೆಂದು ಸಂಘದ ಅಭಿಪ್ರಾಯ ಹೊರ ಹಾಕಿದೆ.
ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂತಹ ನಗರಕ್ಕೆ ಮೂಲಸೌಕರ್ಯ ಅಭಿವೃದ್ಧಿ ಅತ್ಯಗತ್ಯ. ಆದರೆ, ಪ್ರತಿಯೊಂದು ಯೋಜನೆಯನ್ನು ರಾಜಕೀಯ ಪೈಪೋಟಿ ಅಥವಾ ತಾತ್ಕಾಲಿಕ ಲಾಭ-ನಷ್ಟದ ಕಣ್ಣಿನಲ್ಲಿ ನೋಡುವುದು ಸರಿಯಲ್ಲ.
ನಗರದಲ್ಲಿನ ಕೆರೆಗಳು ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ, ಇಂತಹ ಯೋಜನೆಗಳು ತೇವಾಂಶ ಸೇಕರಣೆಗೆ, ಪರಿಸರ ಸಮತೋಲನಕ್ಕೆ, ಹಾಗೂ ಹವಾಮಾನದ ತಾಪಮಾನ ಸರಿದೂಗಿಸಲು ಸಹಕಾರಿಯಾಗುತ್ತವೆ. ಇದು ಅಭಿವೃದ್ಧಿ ಮಾತ್ರವಲ್ಲ, ಪರಿಸರ ಸಂರಕ್ಷಣೆಗೂ ಸಹಕಾರಿಯಾಗಿದೆ ಎಂದು ಹೇಳಿದರು.
ಇಜಿಪುರ ಕೆರೆ, ರಾಷ್ಟ್ರೀಯ ಡೈರಿಯ ಭಾಗದಲ್ಲಿದ್ದ ಕೆರೆ, ಕೋರಮಂಗಲ, ಸಂಪಂಗಿ ಕೆರೆ (ಇಂದಿನ ಕಂಠೀರವ ಮೈದಾನ), ಅಕ್ಕಿ ತಿಮ್ಮನ ಹಳ್ಳಿಯ ಕೆರೆ, ಅಗರ ಕೆರೆ ಮುಂತಾದವುಗಳನ್ನು ಮುಚ್ಚಿ, ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ ಎಂದು ಸಂಘವು ಕಳವಳ ವ್ಯಕ್ತಪಡಿಸಿದೆ. ಟನಲ್ ರಸ್ತೆ ಇನ್ನಿತರ ವೈಜ್ಞಾನಿಕ ದೃಷ್ಟಿಯ ಯೋಜನೆಗಳನ್ನು ವಿರೋಧಿಸುವುದು ನಗರ ಹಿತಕ್ಕೆ ವಿರುದ್ಧ ಎಮದು ಅವರು ಅಭಿಪ್ರಾಯ ಹೊರ ಹಾಕಿದ್ದಾರೆ.












Click it and Unblock the Notifications