Namma Metro Yellow Line: ತಾಂತ್ರಿಕ ಸಮಸ್ಯೆಯಿಂದಾಗಿ ಮೆಟ್ರೋ ಸೇವೆಯಲ್ಲಿ ಕೆಲಕಾಲ ವಿಳಂಬ
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ನೂತನ ಮಾರ್ಗವಾದ ಹಳದಿ ಮಾರ್ಗದ (Namma Metro Yellow Line) ರೈಲು ಸೇವೆಯಲ್ಲಿ ಈ ಹಿಂದೆ ಒಂದೆರಡು ಬಾರಿ ತಾಂತ್ರಿಕ ಸಮಸ್ಯೆ ಆಗಿತ್ತು. ಇದೀಗ ಇಂದು ಗುರುವಾರ ಸಂಜೆ ಮತ್ತೆ ತಾಂತ್ರಿಕ ಸಮಸ್ಯೆಯಾಗಿ ಕೆಲವು ನಿಮಿಷಗಳ ಕಾಲ ಮೆಟ್ರೋ ಸಂಚಾರದಲ್ಲಿ ವಿಳಂಬವಾಯಿತು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ತಿಳಿಸಿದ್ದಾರೆ.
ಸಂಜೆ ಪೀಕ್ ಹವರ್ ಆಗಿದ್ದರಿಂದ ಮೆಟ್ರೋ ಸಂಚಾರದಲ್ಲಿನ ವಿಳಂಬದಿಂದ ಪ್ರಯಾಣಿಕರು ಪರದಾಡಿದ್ದಾರೆ. ಹಳದಿ ಮಾರ್ಗದ (ರೀಚ್-5) ರಾಷ್ಟ್ರೀಯ ವಿದ್ಯಾಲಯ ರಸ್ತೆ (ಆರ್.ವಿ. ರಸ್ತೆ) ಮತ್ತು ಬೊಮ್ಮಸಂದ್ರ ನಡುವಿನ ವಿಭಾಗದಲ್ಲಿ ಇಂದು ಸಂಜೆ 17:19 ಗಂಟೆಗೆ ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ವ್ಯತ್ಯಯ ಉಂಟಾಯಿತು. ಈ ವೇಳೆ ಹಸಿರು ಮಾರ್ಗದ ಇಂಟರ್ ಚೇಂಜ್ ನಿಲ್ದಾಣಕ್ಕೆ ಇಳಿಯಬೇಕಿದ್ದ, ಮತ್ತು ಅಲ್ಲಿಂದ ಹತ್ತಬೇಕಿದ್ದ ಪ್ರಯಾಣಿಕರಿಗೆ ತೊಂದರೆ ಆಯಿತು.

ಕೂಡಲೇ ಎಚ್ಚೆತ್ತುಕೊಂಡ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು, ತಂತ್ರಜ್ಞರು ಮತ್ತಿ ಸಿಬ್ಬಂದಿ ಕೂಡಲೇ ಸಮಸ್ಯೆ ಪರಿಹಾರ ಮಾಡಿದರು. ವಿದ್ಯುತ್ ಪೂರೈಕೆಯನ್ನು 17:21 ಗಂಟೆಗೆ ಪುನಃಸ್ಥಾಪಿಸಲಾಯಿತು. ಪರಿಣಾಮವಾಗಿ ಹಳದಿ ಮಾರ್ಗದ ರೈಲು ಸೇವೆಯಲ್ಲಿ ಸುಮಾರು ಮೂರು ನಿಮಿಷಗಳ ವಿಳಂಬ ಉಂಟಾಯಿತು ಎಂದು ತಿಳಿಸಿದರು.
ಸಮಸ್ಯೆ ಪರಿಹಾರವಾದ ಕೂಡಲೇ ಎಂದಿನಂತೆ ಪ್ರಸ್ತುತ ಎಲ್ಲ ರೈಲು ಸೇವೆಗಳು ಕಾರ್ಯಾಚರಣೆ ಮಾಡಿದವು. ಅಷ್ಟೊತ್ತಿಗಾಗಲೇ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಇಂದಿನ ಸಮಸ್ಯೆಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕಾಗಿ ಬಿಎಂಆರ್‌ಸಿಎಲ್ ವಿಷಾದಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸಮಸ್ಯೆ ಆಗದಂತೆ ಎಚ್ಚರಿಕೆ ಅಗತ್ಯ
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಿ ಕಳೆದ ಆಗಸ್ಟ್ 11ಕ್ಕೆ ಒಂದು ವರ್ಷವಾಗಿದೆ. ಈಗಾಗಲೇ ಸುಮಾರು ಎರಡು ಮೂರು ಬಾರಿ ರೈಲಿನಲ್ಲಿ, ಮಾರ್ಗದಲ್ಲಿ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿತ್ತು. ಇದೀಗ ಮತ್ತೆ ಸಣ್ಣ ಪ್ರಯಾಣದ ಅಡಚಣೆ ಉಂಟಾಗಿದೆ. ಪ್ರಯಾಣಿಕರು ಹೀಗಾಗದಂತೆ ಅಗತ್ಯ ಎಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಹಳದಿ ಮಾರ್ಗವು ಒಟ್ಟು 21ಕಿಲೋ ಮೀಟರ್ ಇದ್ದು. ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್‌ಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಆರ್ ವಿ ರಸ್ತೆಯಲ್ಲಿನ ಇಂಟರ್ ಚೇಂಜ್ ನಿಲ್ದಾಣದ ಮೂಲಕ ಈ ಮಾರ್ಗದಲ್ಲಿ ಸಂಚರಿಸುವವರ ಸಂಖ್ಯೆ ಒಂದು ಲಕ್ಷ ದಾಟಿದೆ. ರೈಲುಗಳ ಸಂಖ್ಯೆ 15 ಕ್ಕೆ ಏರುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.


Click it and Unblock the Notifications
