ಬೆಂಗಳೂರು: 'ನಮ್ಮ ಮೆಟ್ರೋ'ದಿಂದ ಶೀಘ್ರವೇ ಪ್ರೀಪೇಯ್ಡ ಆಟೋ ಸೇವೆ ಆರಂಭ
ಬೆಂಗಳೂರು ಆಗಸ್ಟ್ 16: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮೆಟ್ರೋ ರೈಲು ಸೇವೆ ನೀಡುತ್ತಿರುವ ನಮ್ಮ ಮೆಟ್ರೋ ಇನ್ನುಮುಂದೆ ಸಾರ್ವಜನಿಕರಿಗೆ ಸಕಾಲಕ್ಕೆ, ಸೂಕ್ತ ಬೆಲೆಗೆ ಆಟೋ ಸೇವೆ ಒದಗಿಸಲು ನಿರ್ಧರಿಸಿದೆ.
ಹೌದು, ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ (ಬಿಎಂಆರ್‌ಸಿಎಲ್) ಲಿಮಿಟೆಡ್ ಮೆಟ್ರೋ ನಿಲ್ದಾಣಗಳಿಂದ ತಮ್ಮ ಮನೆಗಳಿಗೆ ಹೋಗಲು ಸಾರಿಗೆ ಸಮಸ್ಯೆ ಎದುರಿಸುತ್ತಿರುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಪ್ರೀಪೇಡ್ ಆಟೋ ಸೇವೆ ನೀಡಲಿದೆ.
ಬೆಂಗಳೂರಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂಪರ್ಕ ಸಾಧಿಸಿರುವ ನಮ್ಮ ಮೆಟ್ರೋ ರೈಲಿನಲ್ಲಿ ನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. ಸುರಕ್ಷತೆ ಹಾಗೂ ಸಂಚಾರ ದಟ್ಟಣೆ ಗೊಡವೆಯೇ ಇಲ್ಲದೇ ತ್ವರಿತ ಸಾರಿಗೆಗಾಗಿ ಅದೇಷ್ಟೋ ನಗರ ವಾಸಿಗಳು ಮೆಟ್ರೋ ಸಾರಿಗೆಯನ್ನೇ ಅವಲಂಬಿಸಿದ್ದಾರೆ.

ಆದರೆ, ಮೆಟ್ರೋ ಬಳಕೆದಾರರಿಗೆ ನಿಲ್ದಾಣದಿಂದ ತಮ್ಮ ಮನೆಗಳಿಗೆ ತೆರಳಲು ಸೂಕ್ತ ಆಟೋ ಸೌಲಭ್ಯ ಸಿಗುತ್ತಿಲ್ಲ. ಸಾಕಷ್ಟು ಆಟೋಗಳ ಮೆಟ್ರೋ ನಿಲ್ದಾಣದ ಪಕ್ಕದಲ್ಲೆ ಇದ್ದರು ಕರೆದ ಕಡೆಗಳಿಗೆ ಬರಲ್ಲ. ಇನ್ನೂ ಕೆಲ ಆಟೋ ಚಾಲಕರು ಬಾಯಿ ಬಂದ ರೇಟ್ ಕೇಳುತ್ತಾರೆ. ಅಷ್ಟು ಹಣ ನೀಡಿ ಆಟೋದಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ಈ ಬಗ್ಗೆ ಗಮನ ಹರಿಸುವಂತೆ ಸಾರ್ವಜನಿಕರು ನಗರ ಸಂಚಾರ ಪೊಲೀಸರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.
ಈ ಮಧ್ಯೆ ನಮ್ಮ ಮೆಟ್ರೋ ಅಧಿಕಾರಿಗಳ ಜತೆ ಸಭೆ ನಡೆಸಿತ್ತ. ಸಭೆಯಲ್ಲಿ ಕೆಲವು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ನಿಲ್ದಾಣಗಳಿಂದ ಮನೆಗಳಿಗೆ ತೆರಳಲು ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಪರಿಹಾರ ಕಂಡು ಕೊಳ್ಳುವ ಬಗ್ಗೆ ಚರ್ಚಿಸಿ ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಅವರಿಗೆ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರು ಪತ್ರ ಬರೆದಿದ್ದರು.

ಇದಾದ ಬಳಿಕ ನಗರ ಪೊಲೀಸ್ ಸಂಚಾರ ವಿಭಾಗದಿಂದ ಗ್ರೀನ್ ಸಿಗ್ನಲ್ ದೊರೆತ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಆರಂಭಿಕ ಹಂತದಲ್ಲಿ ಒಂದಷ್ಟು ಮೆಟ್ರೋ ನಿಲ್ದಾಣಗಳ ವ್ಯಾಪ್ತಿಯಲ್ಲಿ ಈ ಪ್ರಿಪೇಯ್ಡ್ ಮೆಟ್ರೋ ಸೇವೆ ಒದಗಿಲು ಚಿಂತನೆ ನಡೆಸಿದೆ. ಆಟೋ ಸೇವೆ ಹೇಗಿರಲಿದೆ, ಯಾವ ಯಾವ ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಸೇವೆ ಅಗತ್ಯವಿದೆ, ಆಟೋ ಪ್ರಯಾಣ ದರ, ಸಮಯ ಸೇರಿದಂತೆ ಮುಂತಾದ ಅಂಶಗಳು ಆದಷ್ಟು ಶೀಘ್ರವೇ ತಿಳಿಯಲಿದೆ.












Click it and Unblock the Notifications