ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಭಾರೀ ಟೋಲ್ ಶುಲ್ಕ ತಪ್ಪಿಸಲು ಹೊಸ ಮಾರ್ಗ ಕಂಡು ಹಿಡಿದ ವಾಹನ ಸವಾರರು!
ಕುಂಬಳಗೋಡು ಮೇಲ್ಸೇತುವೆಯಿಂದ ಬಂದ ವಾಹನ ಸವಾರರು ಟೋಲ್ ಪ್ಲಾಜಾಕ್ಕಿಂತ ಸ್ವಲ್ಪ ಮೊದಲು ಎಡ ತಿರುವು ತೆಗೆದುಕೊಂಡು ಟೋಲ್ ಶುಲ್ಕವನ್ನು ಪಾವತಿಸುವುದನ್ನು ತಪ್ಪಿಸಿಕೊಳ್ಳಲು ಸರ್ವಿಸ್ ರಸ್ತೆಗೆ ಪ್ರವೇಶಿಸುತ್ತಿದ್ದಾರೆ.
ಬೆಂಗಳೂರು, ಮಾರ್ಚ್ 15: ಭಾರೀ ಚರ್ಚೆ ಮತ್ತು ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ಸಂಗ್ರಹವನ್ನು ವಿರೋಧಿಸಿರುವ ವಾಹನ ಸವಾರರು ಹೊಸ ಉಪಾಯವೊಂದನ್ನು ಮಾಡಿಕೊಂಡಿದ್ದಾರೆ. ಇದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.
ಹೌದು, ಮಾರ್ಚ್ 14 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಧಿಕೃತವಾಗಿ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ಸಂಗ್ರಹದ ಮೊದಲ ದಿನವೇ ವಾಹನ ಚಾಲಕರ ಹಲವು ವಿಭಾಗಗಳಿಂದ ಪ್ರತಿರೋಧ ವ್ಯಕ್ತವಾಗಿದೆ. ಇದರ ನಂತರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳಿಗೆ ಮಾರ್ಚ್ 15 ರಂದು ಮತ್ತೊಂದು ಸವಾಲು ಎದುರಾಗಿದೆ. ವಾಹನ ಸವಾರರು ಟೋಲ್ ತಪ್ಪಿಸಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ.

ಕಣಿಮಿಣಿಕೆ ಬಳಿ ವಾಹನಗಳು ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಗೆ!
ಮಾರ್ಚ್ 15 ರಂದು ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಬಹುತೇಕ ವಾಹನ ಸವಾರರು ಕಣಿಮಿಣಿಕೆ ಬಳಿಯ ಟೋಲ್ ಪ್ಲಾಜಾದ ಬಳಿ ತಮ್ಮ ವಾಹನಗಳನ್ನು ಸರ್ವೀಸ್ ರಸ್ತೆಗೆ ತಿರುಗಿಸುವ ಮೂಲಕ ಟೋಲ್ ಸುಂಕ ಕಟ್ಟುವುದನ್ನು ತಪ್ಪಿಸಿಕೊಂಡಿದ್ದಾರೆ. ಇದು ಅಧಿಕಾರಿಗಳಿಗೆ ದೊಡ್ಡ ಹಿನ್ನಡೆಯಾಗಿದ್ದು, ನಿನ್ನೆಯಷ್ಟೇ ಪ್ರತಿಭಟನೆ ಬಿಸಿ ಮುಟ್ಟಿದವರಿಗೆ ಇದು ಮತ್ತಷ್ಟು ಒತ್ತಡಕ್ಕೆ ನೂಕಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನಾ ನಿರ್ದೇಶಕ ಬಿ.ಟಿ. ಶ್ರೀಧರ್ ಈ ಬಗ್ಗೆ ದಿ ಹಿಂದೂಗೆ ಹೇಳಿಕೆ ನೀಡಿದ್ದು, "ಮಾರ್ಚ್ 15 ರ ಮುಂಜಾನೆ ಸಮಯದಲ್ಲಿ, ಕೆಲವು ಅಪರಿಚಿತ ವ್ಯಕ್ತಿಗಳು ಕಣಿಮಿಣಿಕೆ ಬಳಿಯ ಟೋಲ್ ಪ್ಲಾಜಾದ ಮೊದಲು ಸರ್ವಿಸ್ ರಸ್ತೆಗೆ ದಾರಿ ಮಾಡಿಕೊಂಡಿದ್ದಾರೆ. ಮುಖ್ಯ ಕ್ಯಾರೇಜ್‌ವೇಯಿಂದ ಸರ್ವಿಸ್ ರಸ್ತೆಗೆ ಪ್ರವೇಶ ನೀಡುವ ರಸ್ತೆಯ ಒಂದು ಭಾಗವನ್ನು ತೆರೆದಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

ಸ್ವಲ್ಪ ದೂರ ಸರ್ವಿಸ್ ರಸ್ತೆ, ಟೋಲ್ ತಪ್ಪಿಸಿ ಬಳಿಕ ಹೆದ್ದಾರಿಗೆ ಪ್ರವೇಶ!
"ಕುಂಬಳಗೋಡು ಮೇಲ್ಸೇತುವೆಯಿಂದ ಬಂದ ನಂತರ, ವಾಹನ ಸವಾರರು ಟೋಲ್ ಪ್ಲಾಜಾಕ್ಕಿಂತ ಸ್ವಲ್ಪ ಮೊದಲು ಎಡ ತಿರುವು ತೆಗೆದುಕೊಂಡು ಟೋಲ್ ಶುಲ್ಕವನ್ನು ಪಾವತಿಸುವುದನ್ನು ತಪ್ಪಿಸಿಕೊಳ್ಳಲು ಸರ್ವಿಸ್ ರಸ್ತೆಗೆ ಪ್ರವೇಶಿಸುತ್ತಿದ್ದಾರೆ. ಸ್ವಲ್ಪ ದೂರದವರೆಗೆ ಸರ್ವಿಸ್ ರಸ್ತೆ ಬಳಸಿ ಬಳಿಕ ವಾಹನ ಸವಾರರು ಮುಖ್ಯರಸ್ತೆಗೆ ಮರಳುತ್ತಿದ್ದಾರೆ. ಈ ಅವಾಂತರದಿಂದ ಆದಾಯ ನಷ್ಟವಾಗಿದೆ. ಮುಖ್ಯ ಮಾರ್ಗವನ್ನು ಬಳಸುವ ವಾಹನ ಸವಾರರು ನಿರ್ದಿಷ್ಟಪಡಿಸಿದಂತೆ ಟೋಲ್ ಶುಲ್ಕವನ್ನು ಪಾವತಿಸಬೇಕು" ಎಂದು ಒತ್ತಾಯಿಸಿದ್ದಾರೆ.

ಶೀಘ್ರದಲ್ಲೇ ಕ್ರೈಸ್ಟ್ ಇನ್‌ಸ್ಟಿಟ್ಯೂಟ್ ಬಳಿಯ ಸರ್ವಿಸ್ ರಸ್ತೆ ಕಾಮಗಾರಿ
ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಕ್ರೈಸ್ಟ್ ಇನ್‌ಸ್ಟಿಟ್ಯೂಟ್ ಬಳಿಯ ಸರ್ವಿಸ್ ರಸ್ತೆಯ ವಿಸ್ತರಣೆಯ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಮಾಹಿತಿ ನೀಡಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಯೋಜನಾ ನಿರ್ದೇಶಕ ಬಿ.ಟಿ. ಶ್ರೀಧರ್, ಶೀಘ್ರದಲ್ಲೇ ಕ್ರೈಸ್ಟ್ ಇನ್‌ಸ್ಟಿಟ್ಯೂಟ್ ಬಳಿಯ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
"ಕಾನೂನು ಅಡೆತಡೆಗಳಿಂದಾಗಿ ಸುಮಾರು ಮೂರು ವರ್ಷಗಳಿಂದ 100 ಮೀಟರ್ ಉದ್ದದ ಸರ್ವಿಸ್ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ನಮಗೆ ಸಾಧ್ಯವಾಗಲಿಲ್ಲ. ಈಗ, ನ್ಯಾಯಾಲಯದ ತಡೆಯಾಜ್ಞೆಯನ್ನು ತೆರವು ಮಾಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುತ್ತೇವೆ. ರಸ್ತೆಯಲ್ಲಿನ ಈ ಅನಧಿಕೃತ ಪ್ರವೇಶವನ್ನು ಕೂಡ ಮುಚ್ಚಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.
(ಪೋಟೋ ಕ್ರೆಡಿಟ್ harishupadhya)

ಟೋಲ್ ಶುಲ್ಕವನ್ನು ಕಡಿಮೆ ಮಾಡುವಂತೆ ಬೇಡಿಕೆ
ಮಾರ್ಚ್ 14 ರಂದು ಟೋಲ್ ಸಂಗ್ರಹದ ಮೊದಲ ದಿನ, ಬಿಡದಿ, ರಾಮನಗರ ಮತ್ತು ಇತರ ಪ್ರದೇಶಗಳಿಂದ ಬೆಂಗಳೂರಿಗೆ ಪ್ರತಿದಿನ ಪ್ರಯಾಣಿಸುವ ಸಾಮಾನ್ಯ ವಾಹನ ಚಾಲಕರು ಸರ್ವಿಸ್ ರಸ್ತೆಗಳನ್ನು ಬೇಗ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಜೊತೆಗೆ ಟೋಲ್ ಶುಲ್ಕವನ್ನು ಕಡಿಮೆ ಮಾಡುವಂತೆ ವಾಣಿಜ್ಯ ವಾಹನ ಮಾಲೀಕರಿಂದಲೂ ಬೇಡಿಕೆಗಳು ಬಂದಿವೆ.
ಇದರ ಜೊತೆಗೆ ಟೋಲ್ ಶುಲ್ಕ ಹೆಚ್ಚಾಗಿರುವ ಕಾರಣ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಓಡಾಡುವ ಕೆಎಸ್‌ಆರ್‌ಟಿಸಿಯು ದರ ಹೆಚ್ಚಳ ಮಾಡಲಿದೆ. 10 ರಿಂದ 20 ರವರೆಗಿನ ದರವನ್ನು ಹೆಚ್ಚಿಸುವ ಮೂಲಕ ಪ್ರಯಾಣಿಕರ ಮೇಲೆ ಟೋಲ್‌ನ ಹೊರೆಯನ್ನು ವರ್ಗಾಯಿಸಲಾಗಿದೆ. ಇದರಿಂದ ಜನ ಸಾಮಾನ್ಯರು ಖಾಸಗಿ ವಾಹನವಾಗಲಿ, ಸಾರ್ವಜನಿಕ ವಾಹನವಾಗಲಿ ಟೋಲ್ ಹೊರೆಯನ್ನು ಹೆಗಲ ಮೇಲೆ ಹೊತ್ತು ಪ್ರಯಾಣಿಸಬೇಕಿದೆ.












Click it and Unblock the Notifications