Bengaluru-Mysuru Expressway: ನ್ಯೂನ್ಯತೆಗಳನ್ನು ಒಳಗೊಂಡ ಪಟ್ಟಿಯನ್ನು ಟ್ವೀಟ್ ಮಾಡಿದ ಕಾಂಗ್ರೆಸ್- ಇಲ್ಲಿದೆ ಮಾಹಿತಿ
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಿರುವ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ರಾಜ್ಯದಲ್ಲಿ ವಿವಾದದ ಕಿಡಿಯನ್ನೇ ಹೊತ್ತಿಸಿದೆ. ಅದರ ನ್ಯೂನ್ಯತೆಗಳನ್ನು ಕಾಂಗ್ರೆಸ್ ಪಟ್ಟಿ ಮಾಡಿದೆ.
ಬೆಂಗಳೂರು, ಮಾರ್ಚ್ 16: ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಿರುವ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ರಾಜ್ಯದಲ್ಲಿ ವಿವಾದದ ಕಿಡಿಯನ್ನೇ ಹೊತ್ತಿಸಿದೆ. ಈ ಹೆದ್ದಾರಿಯಲ್ಲಿ ದುಪ್ಪಟ್ಟು ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂದು ವಾಹನ ಸವಾರರು, ವಿರೋಧ ಪಕ್ಷಗಳ ನಾಯಕರು ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಉದ್ಘಾಟನೆಯಾದ ಮರುದಿನವೇ ಎಕ್ಸ್‌ಪ್ರೆಸ್‌ವೇ ಕಿತ್ತುಹೋಗಿದೆ ಎಂಬ ವರದಿಗಳೂ ಪ್ರಕಟಗೊಂಡಿವೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮೈಸೂರು- ಕೊಡಗು ಸಂಸದ ಪ್ರತಾಪ ಸಿಂಹ, 'ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬರುವ ರಾಮನಗರ ಮತ್ತು ಚನ್ನಪಟ್ಟಣಗಳ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಟೋಲ್ ಸಂಗ್ರಹ ಹಾಗೂ ಕಡಿತ ಸೌಲಭ್ಯಗಳನ್ನು ಒಂದೆರಡು ದಿನಗಳಲ್ಲಿ ಸ್ಥಾಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕ್ರಮ ಕೈಗೊಂಡಿದೆ' ಎಂದು ಸಂಸದ ಪ್ರತಾಪ್ ಸಿಂಹ ಇಲ್ಲಿ ಹೇಳಿದ್ದಾರೆ.

ರಾಮನಗರ, ಚನ್ನಪಟ್ಟಣ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹೆದ್ದಾರಿಯಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಇದನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು-ನಿಡಘಟ್ಟ ಭಾಗಕ್ಕೆ (18ನೇ ಕಿಮೀಯಿಂದ 74ನೇ ಕಿಮೀವರೆಗೆ) 55.63 ಕಿಮೀ ಉದ್ದದ ಟೋಲ್ ಸಂಗ್ರಹ ಆರಂಭವಾಗಿದೆ. ಆದರೆ, ರಾಮನಗರ ಮತ್ತು ಚನ್ನಪಟ್ಟಣ ವಾಹನ ಸವಾರರು ಬೆಂಗಳೂರಿನಿಂದ ರಾಮನಗರ ಅಥವಾ ಚನ್ನಪಟ್ಟಣಕ್ಕೆ ಪ್ರಯಾಣಿಸಿದರೆ, ನಿಡಘಟ್ಟದವರೆಗೆ ಸಂಪೂರ್ಣ ಶುಲ್ಕವನ್ನು ನೀಡುವಂತೆ ಹೇಳಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಸಿಂಹ ಹೇಳಿದ್ದಾರೆ.

ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸಲು ವಿಳಂಬವಾಗುತ್ತಿದೆ ಎಂಬ ದೂರುಗಳ ಕುರಿತು ಮಾತನಾಡಿರುವ ಅವರು, ದೇಶದಾದ್ಯಂತ ಅಡೆತಡೆಯಿಲ್ಲದ ಸೇವಾ ರಸ್ತೆಗಳನ್ನು ಹೊಂದಿರುವ ಮೊದಲ ಎಕ್ಸ್‌ಪ್ರೆಸ್‌ವೇ ಇದಾಗಿದೆ ಎಂದು ಹೇಳಿದರು. 118 ಕಿ.ಮೀ ಉದ್ದದ ಸರ್ವಿಸ್ ರಸ್ತೆಗಳಲ್ಲಿ ನ್ಯಾಯಾಲಯದ ಮೊಕದ್ದಮೆಗಳಿಂದಾಗಿ ಇನ್ನೂ ಕೆಲವು ಭಾಗಗಳು ಮಾತ್ರ ಪೂರ್ಣಗೊಂಡಿಲ್ಲ. ಬಹುತೇಕ ಪ್ರಕರಣಗಳು ಇತ್ಯರ್ಥವಾಗಲಿದ್ದು, ಉಳಿದವುಗಳನ್ನು ಶೀಘ್ರವೇ ಬಗೆಹರಿಸಲಾಗುವುದು ಎಂದಿದ್ದಾರೆ.
ಸರ್ವಿಸ್ ರಸ್ತೆಗಳು ಪೂರ್ಣಗೊಳ್ಳುವವರೆಗೆ ಈ ರಸ್ತೆಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.
ರೆಸ್ಟೋರೆಂಟ್‌ಗಳು, ಶೌಚಾಲಯಗಳು ಮತ್ತು ಇತರ ಅನುಕೂಲಕರ ಅಂಗಡಿಗಳಂತಹ ವೇಸೈಡ್ ಸೌಕರ್ಯಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಸಿಂಹ ಹೇಳಿದ್ದಾರೆ.
ಈ ರಸ್ತೆಯಲ್ಲಿನ ಟೋಲ್ ಶುಲ್ಕಗಳು NHAI ನ ಟೋಲ್ ನೀತಿಗೆ ಅನುಗುಣವಾಗಿರುತ್ತವೆ ಎಂದು ಅವರು ತಿಳಿಸಿದ್ದಾರ. ರಾಜಕೀಯ ಪಕ್ಷದ ಮುಖಂಡರು ಆರೋಪಿಸಿದಂತೆ ಸರಕಾರ ಹೆಚ್ಚಿನ ಶುಲ್ಕಗಳನ್ನು ಸಂಗ್ರಹಿಸುತ್ತಿಲ್ಲ ಎಂದು ಪ್ರತಾಪ ಸಿಂಹ ತಿಳಿಸಿದ್ದಾರೆ.
ಕಾಂಗ್ರೆಸ್ ಟ್ವೀಟ್
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಅಲ್ಲಿ ಕಂಡುಬಂದಿರುವ ನ್ಯೂನ್ಯತೆಗಳನ್ನು ಪಟ್ಟಿ ಮಾಡಿ ಟ್ವೀಟಿಸಿದೆ.
'ಬೆಂಗಳೂರು ಮೈಸೂರು ಹೆದ್ದಾರಿಯ ನ್ಯೂನ್ಯತೆಗಳು ಒಂದೆರಡಲ್ಲ.
ಸಮರ್ಪಕ ಆಂಬುಲೆನ್ಸ್‌ಗಳಿಲ್ಲ,
ಶೌಚಾಲಯಗಳಿಲ್ಲ.
ಸುರಕ್ಷಾ ಕ್ರಮಗಳಿಲ್ಲ,
ಸರ್ವಿಸ್ ರಸ್ತೆಗಳಿಲ್ಲ,
ಕಳಪೆ ಕಾಮಗಾರಿಗೆ ಮಿತಿ ಇಲ್ಲ,
ರಸ್ತೆ ಕಿತ್ತು ಬರುತ್ತಿದೆ,
ಸುರಕ್ಷತೆ ಹಾಗೂ ವೈಜ್ಞಾನಿಕ ಮಾನದಂಡಗಳ ಪಾಲನೆಯಾಗಿಲ್ಲ,
ಹೀಗಿರುವಾಗ, ಯಾವ ಸಂತೋಷಕ್ಕೆ ಟೋಲ್ ಸುಲಿಗೆ ನಡೆಯುತ್ತಿದೆ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.












Click it and Unblock the Notifications