ಬೆಂಗಳೂರು-ಮೈಸೂರು 6 ಪಥ ರಸ್ತೆ ಕಾಮಗಾರಿ 2 ತಿಂಗಳಿನಲ್ಲಿ ಆರಂಭ
ಬೆಂಗಳೂರು, ಸೆಪ್ಟೆಂಬರ್ 18 : ಬಹುನಿರೀಕ್ಷಿತ ಬೆಂಗಳೂರು-ಮೈಸೂರು 6 ಪಥದ ರಸ್ತೆ ಕಾಮಗಾರಿ ಎರಡು ತಿಂಗಳಿನಲ್ಲಿ ಆರಂಭವಾಗಲಿದೆ. ಯೋಜನೆಗಾಗಿ ಶೇ 80ರಷ್ಟು ಭೂ ಸ್ವಾಧೀನವನ್ನು ಪೂರ್ಣಗೊಳಿಸಲಾಗಿದೆ.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಈ ಕುರಿತು ಮಾಹಿತಿ ನೀಡಿದರು.'ಎರಡು ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಲಿದೆ. ಶೇ 80ರಷ್ಟು ಭೂ ಸ್ವಾಧೀನವನ್ನು ಪೂರ್ಣಗೊಳಿಸಲಾಗಿದೆ. ಭೂ ಸ್ವಾಧೀನ ಪೂರ್ಣಗೊಂಡ ತಕ್ಷಣದ ಕಾಮಗಾರಿ ಆರಂಭವಾಗಲಿದೆ' ಎಂದರು.
'ಬಿಡದಿ ಮತ್ತು ರಾಮನಗರದಲ್ಲಿ ಬೈಪಾಸ್ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ಏಳರಿಂದ ಎಂಟು ತಿಂಗಳಿನಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ' ಎಂದು ರೇವಣ್ಣ ಹೇಳಿದರು.

ರಾಮನಗರ ಮತ್ತು ಚನ್ನಪಟ್ಟಣದಲ್ಲಿ 23 ಕಿ.ಮೀ.ಗಳ ಬೈಪಾಸ್ ನಿರ್ಮಾಣವಾಗಲಿದೆ. ಬಿಡದಿ, ಮಂಡ್ಯ ಮತ್ತು ಮದ್ದೂರಿನಲ್ಲಿ 11 ಕಿ.ಮೀ. ಬೈಪಾಸ್ ನಿರ್ಮಿಸಲಾಗುತ್ತದೆ.
ಭೂ ಸ್ವಾಧೀನ ವಿಳಂಬವಾದ ಕಾರಣ ಆರು ಪಥದ ರಸ್ತೆ ನಿರ್ಮಾಣ ಕಾಮಗಾರಿ ಆರಂಭವೂ ತಡವಾಗಿದೆ. ಈಗ ಶೇ 80ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿದೆ. ರಸ್ತೆ ನಿರ್ಮಾಣದ ಗುತ್ತಿಗೆ ಪಡೆದವರಿಗೆ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರು-ಮೈಸೂರು ಆರು ಪಥದ ರಸ್ತೆ ಕಾಮಗಾರಿಯನ್ನು ಸುಮಾರು 6,800 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ರಸ್ತೆ ಕಾಮಗಾರಿ ಮುಗಿದರೆ ಬೆಂಗಳೂರು-ಮೈಸೂರು ನಡುವಿನ ಪ್ರಯಾಣಿಸಲು 90 ನಿಮಿಷ ಸಾಕು ಎಂದು ಅಂದಾಜಿಸಲಾಗಿದೆ.












Click it and Unblock the Notifications