ರಾಯಣ್ಣ ಪ್ರತಿಮೆ ಖಡ್ಗದ ಮೇಲೂ ಬಿತ್ತೆ ಬುದ್ಧಿಗೇಡಿಗಳ ಕಣ್ಣು?
ಬೆಂಗಳೂರು, ಜು. 18: ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಕಿಡಿಗೇಡಿಗಳು ಹಾನಿ ಮಾಡಿದ್ದು ಅಲ್ಲದೇ ಕೈಯಲ್ಲಿದ್ದ ಖಡ್ಗ ಕಡಿಯುವ ದುಸ್ಸಾಹಸವನ್ನು ಮಾಡಿದ್ದಾರೆ.
ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದ ಬಳಿ ಇರುವ ಸಂಗೋಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.[ಸಂಗೊಳ್ಳಿ ರಾಯಣ್ಣ ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣ]

2010 ರಲ್ಲಿ ನಿರ್ಮಾಣವಾಗಿದ್ದ ಕಂಚಿನ ಪುತ್ಥಳಿಯ ಖಡ್ಗ 28 ಕೆಜಿ ತೂಕವಿದೆ. ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಇನ್ನಾದರೂ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣಕ್ಕೆ ' ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ' ಹೆಸರಿಡಲು ಹೆಸರಿಡಲು ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿತ್ತು. ಇದೀಗ ಕಿಡಿಗೇಡಿಗಳು ಪುತ್ಥಳಿಗೆ ಹಾನಿ ಮಾಡಿದ್ದರ ಹಿಂದೆ ಷಡ್ಯಂತ್ರವಿದ್ದು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ.[ಸೇನಾನಿ ಸಂಗೊಳ್ಳಿ ರಾಯಣ್ಣ ಸಾಧನೆ ಬಗ್ಗೆ ತಿಳಿದುಕೊಳ್ಳಿ]
ಗೃಹ ಸಚಿವ ಕೆಜೆ ಜಾರ್ಜ್ ಮತ್ತು ಪೊಲೀಸ್ ಆಯುಕ್ತ ಎಂ ಎನ್ ರೆಡ್ಡಿ ಸ್ಥಳ ಪರಿಶೀಲನೆ ಮಾಡಿದ್ದು ಖಡ್ಗಕ್ಕೆ ಹಾನಿಯಾಗಿದ್ದು ಸರಿಮಾಡಲು ಸಾಧ್ಯವಾಗದಿದ್ದರೆ ಬೇರೆ ಖಡ್ಗ ಮಾಡಿಸಿಕೊಡುವುದಾಗಿ ಜಾರ್ಜ್ ಭರವಸೆ ನೀಡಿದ್ದಾರೆ.[ಅಸಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪರಿಚಯ]
ಆಗಸ್ಟ್ 15 ಸಂಗೊಳ್ಳಿ ರಾಯಣ್ಣ ಜನ್ಮದಿನ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ ಸಮೀಪವಾಗುತ್ತಿರುವ ಬೆನ್ನಲ್ಲೆ ಇಂಥ ಕೃತ್ಯ ನಡೆದಿರುವುದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ 24 ಗಂಟೆ ಅವಧಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದರೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications