ಬೇಸಿಗೆಯಲ್ಲಿ ಗಟ ಗಟ ನೀರು ಕುಡಿಯುವ ಮುನ್ನ ಎಚ್ಚರ ಎಚ್ಚರ.. ಕುಡಿಯೋ ನೀರಿನಲ್ಲೂ ಹಾನಿಕಾರಕ ಅಂಶ ಪತ್ತೆ
ಬೆಂಗಳೂರು ಮಾರ್ಚ್ 28: ಪನ್ನೀರ್, ಗೋಬಿ, ಕಬಾಬ್, ಕಲ್ಲಂಗಡಿ ಬಳಿಕ ಈಗ ಕುಡಿಯುವ ನೀರಿಗೂ ಕಂಟಕ ಶುರುವಾಗಿದೆ. ಬೇಸಿಗೆ ಶುರುವಾಯ್ತು ನೀರಿನ ಸಮಸ್ಯೆ ಸಾಮಾನ್ಯ ಬಿಡಿ ಅಂತ ಮುಂದೆ ಓದದೆ ಸುಮ್ಮನಾಗಬೇಡಿ. ಇದು ಕುಡಿಯೋ ನೀರಿನ ಅಭಾವದ ಸಮಸ್ಯೆ ಅಲ್ಲ ಬದಲಿಗೆ ಮಿನರಲ್ ವಾಟರ್ ಬಾಟಲಿಯಲ್ಲಿನ ನೀರಿನ ಗುಣಮಟ್ಟದ ಸಮಸ್ಯೆ.
ಹೌದು.. ಮಿನರಲ್ ವಾಟರ್ ಬಾಟಲಿಯಲ್ಲಿ ಸಿಗುವ ನೀರಿನಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದ್ದು, ಈ ಬಗ್ಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಎಚ್ಚರಿಕೆ ನೀಡಿದೆ. ತುಂಬಾ ದಿನಗಳವರೆಗೆ ಶೇಖರಣೆ ಮಾಡಿದ, ಅವಧಿ ಮುಗಿದ ಮತ್ತು ಕೆಲ ನೀರಿನ ಬಾಟಲಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆ ಮಾಡಲಾಗಿದೆ.

ಭೂಮಿ ಮೇಲಿರುವ ಪ್ರತಿಯೊಬ್ಬರಿಗೂ ನೀರು ಬೇಕೇಬೇಕು. ಆದರೆ ಈ ನೀರು ಕುಡಿಯುವುದರಿಂದಲೂ ಆರೋಗ್ಯ ಹಾಳಾಗುತ್ತದೆ ಎನ್ನುವ ವರದಿ ಬಂದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಗುವ ಮಿನರಲ್ ವಾಟರ್ ಬಾಟಲ್ ಯಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿರುವುದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ವರದಿಯಿಂದ ತಿಳಿದು ಬಂದಿದೆ.
ಮಿನರಲ್ ವಾಟರ್ ಬಾಟಲಿಯಲ್ಲಿ ಹಾನಿಕಾರಕ ಅಂಶ
ಇತ್ತೀಚೆಗೆ ಬೆಂಗಳೂರಿನ ಹಲವೆಡೆ ದಾಳಿ ಮಾಡಿದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಬೇಕರಿ ಹಾಗೂ ಇನ್ನಿತರ ಅಂಗಡಿಗಳಲ್ಲಿ ಸಿಗುವ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದರು. ಸುಮಾರು 160 ಮಿನರಲ್ ವಾಟರ್ ಬಾಟಲ್‌ಗಳ ಸ್ಯಾಂಪಲ್ ಟೆಸ್ಟ್‌ಗೆ ಕಳುಹಿಸಲಾಗಿತ್ತು.
ಇದರಲ್ಲಿ ನೂರಕ್ಕೂ ಹೆಚ್ಚು ಬಾಟಲ್‌ಗಳ ವರದಿ ಬಂದಿದ್ದು, ಮಾದರಿಗಳಲ್ಲಿ ಶೇಕಡ 50ರಷ್ಟು ನೀರು ಅಸುರಕ್ಷಿತವಾಗಿದೆ. ಲೋಕಲ್ ಮಿನರಲ್ ವಾಟರ್ ಬಾಟಲಿಗಳ ನೀರು ಸೇವನೆಗೆ ಯೋಗ್ಯವಲ್ಲ ಎಂದು ವರದಿ ಬಂದಿದೆ.

ಯಾರ ಮೇಲೆ ಹೆಚ್ಚು ಪರಿಣಾಮ?
ಮಿನರಲ್ ವಾಟರ್ ಬಾಟಲಿಗಳ ನೀರಿನಲ್ಲಿ ಸೂಕ್ಷ್ಮ ಜೀವಾಣು, ಪಾಚಿ, ಬೋರ್ವೆಲ್ ನೀರು ಸೇರಿದಂತೆ ಹಾನಿಕಾರಕ ಅಂಶ ಪತ್ತೆಯಾಗಿದೆ. ಈ ನೀರು ಕುಡಿಯುವುರದಿಂದಾಗಿ ಸುಸ್ತು, ಮೋಳೆ ಸವೆತ, ವಾಂತಿ, ಭೇದಿ, ತಲೆ ಸುತ್ತುವಂತಹ ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ ಇಂತಹ ನೀರು ಕುಡಿಯುವುದರಿಂದ ವಯಸ್ಸಾದವರು ಹಾಗೂ ಮಕ್ಕಳ ಮೇಲೆ ಬೇಗನೆ ಪರಿಣಾಮ ಬೀರುತ್ತದೆ.

ಬೇಸಿಗೆ ಬಂದರೆ ಸಾಕು ರಾಜ್ಯದಲ್ಲಿ ನೀರಿನ ಅಭಾವ ಎದುರಾಗುತ್ತದೆ. ಹೊರಗಡೆ ಕೆಲಸಕ್ಕೆ ಹೋಗುವವರು, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಾಹನಗಳಲ್ಲಿಯೇ ಓಡಾಡಿಕೊಂಡು ಕೆಲಸ ಮಾಡುವವರು ಹೆಚ್ಚಾಗಿ ಹೊರಗಡೆ ಸಿಗುವ ಮಿನರಲ್ ವಾಟರ್ ಬಾಟಲಿಗಳನ್ನು ಖರೀದಿ ಮಾಡುತ್ತಾರೆ. ಅಲ್ಲದೆ ದೂರದೂರಿಗೆ ಪ್ರಯಾಣ ಮಾಡುವವರು ಕೂಡ ನೀರಿನ ಬಾಟಲಿಗಳನ್ನ ಖರೀದಿ ಮಾಡುತ್ತಾರೆ.
ಇದೇ ಸಮಯವನ್ನು ಬಂಡವಾಳವಾಗಿಸಿಕೊಂಡ ಕೆಲ ಕಂಪನಿಗಳು ಬಾಟಲಿಗಳಲ್ಲಿ ಕಲುಷಿತ ನೀರು ತುಂಬಿಸಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಅಂಗಡಿಗಳಲ್ಲೂ ಅವಧಿ ಮುಗಿದ, ಖಾಲಿ ಬಾಟಲಿಗಳಿಗೆ ಇನ್ಯಾವುದೋ ನೀರು ತುಂಬಿಸಿ ಮಾರಾಟ ಮಾಡುತ್ತಿರುವುದು ದಾಳಿ ವೇಳೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇಂತಹ ಅಂಗಡಿ ಹಾಗೂ ಕಂಪನಿಗಳಿಗೆ ನೋಟೀಸ್ ನೀಡಲು ಅಧಿಕಾರಿಗಳು ಇದೀಗ ತಯಾರಿಸಿ ನಡೆಸಿದ್ದಾರೆ.
ಹೀಗಾಗಿ ಹೊರ ಬಂದಾಗ ಬೇಸಿಗೆ ಬಿಸಿಲಿಗೆ ನೀರಿನ ದಾಹ ತಣಿಸಲು ಕಂಡ ಕಂಡ ಕಡೆ ತಿಳಿಯದೆ ನೋಡದೇ ಮಿನರಲ್ ವಾಟರ್ ಬಾಟಲಿಗಳನ್ನು ಖರೀದಿಸುವಾಗ ಜಾಗರೂಕತೆಯಿಂದ ಇರುವುದು ಉತ್ತಮ.












Click it and Unblock the Notifications