Namma Metro: ಬೆಂಗಳೂರು ಮೆಟ್ರೋದ ಗ್ರೀನ್ ಲೈನ್‌ನಲ್ಲಿ ಹಳಿ ತಪ್ಪಿದ ರೀ ರೈಲ್- ಪ್ರಯಾಣಿಕರಿಗೆ ತೀವ್ರ ತೊಂದರೆ, ಮಾಹಿತಿ, ವಿವರ
ಬೆಂಗಳೂರು, ಅಕ್ಟೋಬರ್ 03: ಬೆಂಗಳೂರು ಮೆಟ್ರೋದ ಗ್ರೀನ್ ಲೈನ್‌ನಲ್ಲಿ ಮಂಗಳವಾರ ಬೆಳಿಗ್ಗೆ ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆ. ಇದರಿಂದ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಅಕ್ಟೋಬರ್ 3 ರಂದು ಬೆಳಿಗ್ಗೆ ಯಶವಂತಪುರ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ನಿಲ್ದಾಣಗಳ ನಡುವಿನ ರೈಲು ಸಂಚಾರದಲ್ಲಿ ( ಬೆಂಗಳೂರು ಮೆಟ್ರೋದ ಗ್ರೀನ್ ಲೈನ್ ) ವ್ಯತ್ಯಯ ಕಂಡುಬಂದಿದೆ. ಇದರಿಂದಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಅಕ್ಟೋಬರ್ 3 ರಂದು ಬೆಳಿಗ್ಗೆ 5:28 ಕ್ಕೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
'ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ, ಹಸಿರು ಮಾರ್ಗದಲ್ಲಿನ ರೈಲು ಸೇವೆಗಳು ನಾಗಸಂದ್ರದಿಂದ ಯಶವಂತಪುರದವರೆಗೆ ಲಭ್ಯವಿರುತ್ತವೆ ಎಂಬುದನ್ನು ದಯವಿಟ್ಟು ತಿಳಿಯಿರಿ. ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಯಶವಂತಪುರ- ಸಂಪಿಗೆ ರಸ್ತೆ ಮೆಟ್ರೋ ನಿಲ್ದಾದ ನಡುವೆ ಸಂಚಾರ ಇರುವುದಿಲ್ಲ. ಈ ಅನಾನುಕೂಲಕ್ಕೆ ನಾವು ವಿಷಾದಿಸುತ್ತೇವೆ' ಎಂದು ತಿಳಿಸಿದೆ.

ರಾಜಾಜಿನಗರ ಮತ್ತು ಮಹಾಕವಿ ಕುವೆಂಪು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ತುರ್ತು ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ರೈಲು ಕೆಟ್ಟು ನಿಂತಿದ್ದು, ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ 'ಮನಿ ಕಂಟ್ರೋಲ್'ಗೆ ತಿಳಿಸಿದ್ದಾರೆ.
ತಾಂತ್ರಿಕ ದೋಷಕ್ಕೆ ಒಳಗಾದ ರೈಲಿನ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ತುರ್ತಾಗಿ ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಬೇಗನೇ ಸಂಚಾರ ಆರಂಭಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
'ದುರಸ್ಥಿಯಲ್ಲಿರುವ ರೈಲನ್ನು ಸ್ಥಳಾಂತರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ರೈಲು ಸೇವೆಗಳನ್ನು ಆದಷ್ಟು ಬೇಗನೇ ಆರಂಭಿಸಲು ಪ್ರಯತ್ನಗಳು ನಡೆಯುತ್ತಿವೆ. ನಾವು ಈಗ ಗ್ರೀನ್ ಲೈನ್‌ನಲ್ಲಿ ಒಂದು ಬದಿಯ ಸಂಚಾರವನ್ನು ನಡೆಸುತ್ತಿದ್ದೇವೆ. ಪರ್ಪಲ್ ಲೈನ್‌ನಲ್ಲಿ ಸಂಚಾರ ಸಾಮಾನ್ಯವಾಗಿದೆ' ಅವರು ತಿಳಿಸಿದ್ದಾರೆ.

ದೀರ್ಘ ವಾರಾಂತ್ಯದ (ಸೆಪ್ಟೆಂಬರ್ 28 ರಂದು ಈದ್ ಇ ಮಿಲಾದ್, ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್, ನಂತರ ಶನಿವಾರ ಮತ್ತು ಭಾನುವಾರ ಹಾಗೂ ಅಕ್ಟೋಬರ್ 2 ರಂದು ಗಾಂಧಿ ಜಯಂತಿ) ನಂತರ ಹಿಂದಿರುಗಿದ ಪ್ರಯಾಣಿಕರು ಯಶವಂತಪುರ ರೈಲು ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿ ತೀವ್ರ ಅನಾನುಕೂಲತೆಯನ್ನು ಎದುರಿಸಿದ್ದಾರೆ. ಯಶವಂತಪುರ ಸೇರಿದಂತೆ ಗ್ರೀನ್ ಲೈನ್ ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ಜನಸಂದಣಿ ಹೆಚ್ಚಾಗಿರುವುದು ವರದಿಯಾಗಿದೆ.
ಮಹಾಲಕ್ಷ್ಮಿ ನಿಲ್ದಾಣದಿಂದ ನಾಗಸಂದ್ರಕ್ಕೆ ರೈಲು ಹತ್ತಿದ ಪ್ರಯಾಣಿಕರೊಬ್ಬರ ಪ್ರಕಾರ, ರೈಲುಗಳು ಆಮೆ ಗತಿಯಲ್ಲಿ ಸಾಗುತ್ತಿದ್ದು, ಒಳಗೆ ವಿಪರೀತ ನೂಕುನುಗ್ಗಲು ಉಂಟಾಗಿದೆ. ಜನಸಂದಣಿ ಹೆಚ್ಚಿದ್ದರಿಂದ ಅನೇಕರಿಗೆ ರೈಲು ಹತ್ತಲು ಸಾಧ್ಯವಾಗಲಿಲ್ಲ. ಗ್ರೀನ್ ಲೈನ್‌ನ ಇತರ ನಿಲ್ದಾಣಗಳ ಮೇಲೆಯೂ ಇದು ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ಗ್ರೀನ್ ಲೈನ್‌ನಲ್ಲಿ ಮೆಟ್ರೋ ಸೇವೆಗೆ ಅಡ್ಡಿಯಾದ ಕಾರಣ ಯಶವಂತಪುರ ಮೆಟ್ರೋ/ರೈಲ್ವೆ ನಿಲ್ದಾಣ ಮತ್ತು ಮೆಜೆಸ್ಟಿಕ್ ನಡುವೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications