ನಮ್ಮ ಮೆಟ್ರೋದಲ್ಲಿ ಹೃದಯದ ಸಾಗಣೆ ಯಶಸ್ವಿ: ಹಳದಿ ಮಾರ್ಗದ ಬಗ್ಗೆ BMRCL ಸ್ಪಷ್ಟನೆ
ಬೆಂಗಳೂರು, ನವೆಂಬರ್ 18: ಉದ್ಯಾನ ನಗರದ ನಾಗರಿಕರ ಸಾರಿಗೆ ಅವಲಂಬನೆಯಾಗಿರುವ ನಮ್ಮ ಮೆಟ್ರೋ ಕೇವಲ ಸಾರಿಗೆ ಮಾತ್ರವಾಗಿರದೇ ಆರೋಗ್ಯ ತುರ್ತು ಸಂದರ್ಭಗಳಲ್ಲಿ ಪ್ರಮುಖ ಆಯ್ಕೆಯು ಆಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನೆನ್ನೆ ಸೋಮವಾರ ಸಂಜೆ ಅಸ್ಟರ್ ಆರ್.ವಿ ಆಸ್ಪತ್ರೆಯಿಂದ ನರಾಯಣ ಹೃದಯಾಲಯ ಆಸ್ಪತ್ರೆಗೆ ಮಾನವ ಹೃದಯವನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಸಾಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮಾನವ ಅಂಗಾಂಗ ಸಾಗಾಣೆ ಈ ಹಿಂದೆಯು ಕೆಲವು ಬಾರಿ ನಡೆದಿದೆ. ಆಗಲೂ ನಮ್ಮ ಮೆಟ್ರೋ ಸಾರಿಗೆ ಪ್ರಶಂಸೆಗೆ ಭಾಜನವಾಗಿದೆ. ನೆನ್ನೆ ನವೆಂಬರ್ 17ರಂದು ನವೆಂಬರ್ ಯಶಸ್ವಿ ಕಾರ್ಯಾಚರಣೆಯನ್ನು 25.05.2025ರ ಬಿ.ಎಂ.ಆರ್.ಸಿ.ಎಲ್ ನ ಸಂಯುಕ್ತ ಪ್ರಕ್ರಿಯಾ ಆದೇಶದಂತೆ ನೆರವೇರಿಸಲಾಗಿದೆ ಎಂದು BMRCL ಅಧಿಕಾರಿಗಳು ಹೇಳಿದರು.

ಯಶಸ್ವಿ ಸಾಗಾಣೆ ಆಗಿದ್ದೇಗೆ?
ಸೋಮವಾರ ಸಂಜೆ 19:26 ಗಂಟೆಗೆ ಆರು ಸದಸ್ಯರ ವೈದ್ಯಕೀಯ ತಂಡವು ಮಾನವ ಹೃದಯ ಇದ್ದ ಅಂಗಾಂಗ ಪೆಟ್ಟಿಗೆಯೊಂದಿಗೆ ರಾಗಿಗುಡ್ಡ ಮೆಟ್ರೋ ನಿಲ್ದಾಣ ತಲುಪಿತು. ಸುರಕ್ಷತಾ ಅಧಿಕಾರಿಗಳು ಮತ್ತು ನಿಲ್ದಾಣ ಸಿಬ್ಬಂದಿ ಅವರನ್ನು ಸ್ವಾಗತಿಸಿದರು. ತಂಡವು ಭದ್ರತಾ ತಪಾಸಣೆ ಮುಗಿಸಿ 19:29ಕ್ಕೆ ಪ್ಲಾಟ್‌ಫಾರ್ಮ್ ತಲುಪಿತು.
ವೈದ್ಯಕೀಯ ತಂಡವು 19:32ಕ್ಕೆ ರೈಲುಗೆ ಹತ್ತಿ, ಸುರಕ್ಷತಾ ಸಿಬ್ಬಂದಿಗಳೊಂದಿಗೆ 19:39ಕ್ಕೆ ಬೊಮ್ಮಸಂದ್ರ ನಿಲ್ದಾಣ ತಲುಪಿತು. ಅಲ್ಲಿನ ASO ಮತ್ತು ಸ್ಟೇಷನ್ ಕಂಟ್ರೋಲರ್ ತಂಡವನ್ನು ನಿಲ್ದಾಣದ ನಿರ್ಗಮನದವರೆಗೆ ಮಾರ್ಗದರ್ಶನ ಮಾಡಿದರು.
ಐದನೇ ಯಶಸ್ವಿ ಮಾನವ ಅಂಗಾಂಗ ಸಾಗಣೆ
ಹೃದಯವನ್ನು ತಕ್ಷಣ ಆಂಬ್ಯುಲೆನ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಆಂಬ್ಯುಲೆನ್ಸ್ ಹೊರಟು 20:12ಕ್ಕೆ ನರಾಯಣ ಹೃದಯಾಲಯ ತಲುಪಿತು. ಈವರೆಗೆ ನಮ್ಮ ಮೆಟ್ರೋದಲ್ಲಿ ನಾಲ್ಕು ಬಾರಿ ಅಂಗಾಂಗಾ ಸಾಗಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಬೆಂಗಳೂರು ಮೆಟ್ರೋ ಮೂಲಕ ಸಾಗಿಸಲಾದ ಐದನೇ ಯಶಸ್ವಿ ಮಾನವ ಅಂಗಾಂಗ ಇದಾಗಿದೆ. ಜೀವ ರಕ್ಷಣಾ ಕಾರ್ಯಗಳಲ್ಲಿ BMRCL ತನ್ನ ಬದ್ಧತೆಯನ್ನು ಮತ್ತೆ ತೋರಿಸಿದೆ ಎಂದು ಮೆಟ್ರೋ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಳದಿ ಮೆಟ್ರೋ ಮಾರ್ಗದ ಬಗ್ಗೆ ಸ್ಪಷ್ಟನೆ
ನೆನ್ನೆ ಸೋಮವಾರ ಹಳದಿ ಮಾರ್ಗದಲ್ಲಿ ಮೆಟ್ರೋ ಹೊರಡುವ ಮುನ್ನ ಕೆಲವರ ಗುಂಪು ಉದ್ದೇಶಪೂರ್ವಕವಾಗಿ ತಡೆಯಿತು. ಇದರಿಂದ ಬೆಳಗ್ಗೆ 6ಕ್ಕೆ ಹೊರಡಬೇಕಿದ್ದ ರೈಲು 6.35ಕ್ಕೆ ಸಂಚಾರ ಆರಂಭಿಸಿತು. ಇದರಿಂದ ಮಾರ್ಗದ ಇತರ ಎಲ್ಲ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. ನಂತರ ಒಂದು ರೈಲನ್ನು ಶಾರ್ಟ್ ಲೂಪ್ ಸೇವೆ ಬಿಡುವ ಮೂಲಕ ಸೇವೆಯನ್ನು ಸೂಕ್ತವಾಗಿ ಒದಗಿಸಲಾಯಿತು.
ಇಂತಹ ಜನರ ಕೃತ್ಯಗಳು ಇತರ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತದೆ. ಸುಗಮ ಮೆಟ್ರೋ ಕಾರ್ಯಾಚರಣೆಗೆ ಅಡ್ಡಿ ಉಂಟಾಗುತ್ತದೆ. ನವೆಂಬರ್ 1ರಿಂದ ಐದು ರೈಲುಗಳು ಸೇವೆ ನೀಡುತ್ತಿವೆ. ಅಂದಿನಿಂದ 6.30ಕ್ಕೆ ಬದಲಾಗಿ, ಬೆಳಗ್ಗೆ 06 ಗಂಟೆಯಿಂದ ಸೇವೆ ನೀಡಲಾಗುತ್ತಿದೆ. ಮುಂದಿನ ತಿಂಗಳುಗಳಲ್ಲಿ ಹೆಚ್ಚಿನ ರೈಲುಗಳು ಆಗಮಲಿದ್ದು, ಅಧಿಕ ಮೆಟ್ರೋ ಸೇವೆ ಈ ಮಾರ್ಗದಲ್ಲಿ ಲಭ್ಯವಾಗಲಿದೆ. ಇಂತಹ ಸೇವೆ ಪಡೆಯುವಾಗಿ ಎಲ್ಲ ಪ್ರಯಾಣಿಕರು ಸಹಕರಿಸಬೇಕು. ಕಾರ್ಯಾಚರಣೆಗೆ ಅಡ್ಡಿಪಡಿಸದಂತೆ BMRCL ವಿನಂತಿಸಿದೆ.












Click it and Unblock the Notifications