Bengaluru Metro: ತಮಿಳುನಾಡಿಗೆ ಬೆಂಗಳೂರು ನಮ್ಮ ಮೆಟ್ರೋ ಜಾಲ: ತಮಿಳಿಗರ ಖತರ್ನಾಕ್ ಐಡಿಯಾ ಡಿಕೋಡ್ ಮಾಡಿದ ಕನ್ನಡಿಗರು!
ಬೆಂಗಳೂರಿನ ಮೆಟ್ರೋ ಜಾಲವನ್ನು ತಮಿಳುನಾಡಿಗೆ ವಿಸ್ತರಿಸಬೇಕು ಎನ್ನುವ ತಮಿಳುನಾಡಿನ ಸರ್ಕಾರದ ಬೇಡಿಕೆಗೆ ಕನ್ನಡಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ತಮಿಳುನಾಡಿಗೆ ಬೆಂಗಳೂರು ಮೆಟ್ರೋ ವಿಸ್ತರಣೆ ಆಗುವುದರಿಂದ ತಮಿಳುನಾಡಿಗೆ ಹೇಗೆಲ್ಲ ಲಾಭವಾಗಲಿದೆ. ಅಲ್ಲದೆ ಬೆಂಗಳೂರು ನಗರಕ್ಕೆ ಯಾವ ವಿಷಯದಲ್ಲಿ ಹಿನ್ನಡೆ ಆಗಲಿದೆ. ಮುಖ್ಯವಾಗಿ ಬೆಂಗಳೂರಿನ ಐಟಿ - ಬಿಟಿಗೆ ಹೇಗೆ ಹಿನ್ನಡೆ ಆಗಲಿದೆ ಎನ್ನುವ ವಿಚಾರವನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಕನ್ನಡಿಗರು ಚರ್ಚೆ ಮಾಡವುದಕ್ಕೆ ಪ್ರಾರಂಭಿಸಿದ್ದಾರೆ.
ತಮಿಳುನಾಡಿನ ಹೊಸೂರು ಮತ್ತು ಕರ್ನಾಟಕದ ಬೊಮ್ಮಸಂದ್ರ ನಡುವಿನ ಅಂತರ-ರಾಜ್ಯ ಮೆಟ್ರೋ ರೈಲು ಸಂಪರ್ಕ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಈಚೆಗೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು. ಎರಡೂ ರಾಜ್ಯಗಳ ಪ್ರಯೋಜನಕ್ಕಾಗಿ ಮೆಟ್ರೋ ಯೋಜನೆಗೆ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದರು. ಇದೀಗ ಈ ವಿಚಾರವು ಭಾರೀ ಆಕ್ಷೇಪಕ್ಕೆ ಕಾರಣವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿರುವ ಸಿ.ಎಸ್ ಲಕ್ಷ್ಮೀಶಾ (@LakshmeeshaCS) ಎನ್ನುವವರು, ಕನ್ನಡಿಗರೇ ಎಚ್ಚರ.. ಬೊಮ್ಮಸಂದ್ರದಿಂದ ಮುಂದಕ್ಕೆ ಮೆಟ್ರೊ ರೈಲು ಬೇಡ. ಭವಿಷ್ಯದಲ್ಲಿ 300 ಕಿ. ಮೀ ಮೀರಿ ಮೆಟ್ರೊ ಬೆಳೆಯುತ್ತದೆ. ತಮಿಳುನಾಡಿನವರು ಹೊಸೂರಿನಿಂದ ಅತ್ತಿಬೆಲೆಯವರೆಗೆ ಕೇವಲ 11 ಕಿಲೋಮೀಟರುಗಳಷ್ಟು ಮೆಟ್ರೊ ರೈಲು ಜಾಲವನ್ನು ಕಟ್ಟಿ ಸಂಪೂರ್ಣ ನಮ್ಮ ಮೆಟ್ರೊ ರೈಲು ಜಾಲದ 300+ ಕಿಲೋಮೀಟರುಗಳ ಉಪಯೋಗವನ್ನು ಪಡೆಯುತ್ತಾರೆ.
ಹೊಸೂರಿನಲ್ಲಿ 500 ಎಕರೆಗಳಷ್ಟು ದೊಡ್ಡ ಜಾಗವನ್ನು ಐಟಿ ಪಾರ್ಕಿಗೆ ಮೀಸಲಿಟ್ಟಿದ್ದಾರೆ. ಮೆಟ್ರೊ ಸಂಪರ್ಕ ಸಿಕ್ಕಿದರೆ ಬೆಂಗಳೂರು ಮತ್ತಿತರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಐಟಿ ಕಂಪನಿಗಳನ್ನು ಸೆಳೆಯುತ್ತಾರೆ. ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಕಾಲದ ನೀರು ಹಂಚಿಕೆಗೆ ಒಪ್ಪದ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ಅಡ್ಡಿಮಾಡಿದ ತಮಿಳುನಾಡಿಗೆ ಈಗ ಇದ್ದಕ್ಕಿದ್ದಂತೆ ಕರ್ನಾಟಕದ ಜೊತೆಗೆ ಬೆಳೆಯುವ ಆಸೆ ಬಂದಿದೆ. ಅವರ ಸ್ವಾರ್ಥಕ್ಕೆ ಏನು ಬೇಕಾದರೂ ಮಾಡುವ ಮಂದಿಯ ಜೊತೆಗೆ ಕಟ್ಟೆಚ್ಚರ ಅಂತ ಹೇಳಿದ್ದಾರೆ. ಈ ಮಾತನ್ನು ಹಲವು ಕನ್ನಡಿಗರು ಒಪ್ಪಿದ್ದಾರೆ.
ತಮಿಳುನಾಡಿನ ಹೊಸೂರಿನಲ್ಲಿ ಐಟಿ ಪಾರ್ಕ್‌ಗಾಗಿ ಸುಮಾರು 500 ಎಕರೆ ಭೂಮಿಯನ್ನು ತಮಿಳುನಾಡು ಸರ್ಕಾರ ಕಾಯ್ದಿರಿಸಿದ್ದಾರೆ. ಅವರಿಗೆ ಮೆಟ್ರೋ ಸಂಪರ್ಕ ಸಿಕ್ಕರೆ, ಅವರು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಐಟಿ ಕಂಪನಿಗಳನ್ನು ಆಕರ್ಷಿಸುತ್ತಾರೆ. ಇದರಿಂದ ತಮಿಳುನಾಡಿಗೆ ಸಂಪೂರ್ಣ ಲಾಭವಾಗಲಿದೆ. ಬೆಂಗಳೂರು ಹಾಗೂ ಕರ್ನಾಟಕಕ್ಕೆ ಭಾರೀ ಹಿನ್ನಡೆ ಆಗಲಿದೆ ಎಂದು ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.
ಆಕ್ಷೇಪ ವ್ಯಕ್ತಪಡಿಸದ ಕರ್ನಾಟಕ ಸರ್ಕಾರ
ಇನ್ನು ತಮಿಳುನಾಡಿನ ವಿಜಯ್ ಸರ್ಕಾರವು ಈ ವಿಷಯವನ್ನು ಪ್ರಸ್ತಾಪಿಸಿ 10ದಿನಗಳಿಗಿಂತ ಹೆಚ್ಚು ಸಮಯವಾದರೂ, ಕರ್ನಾಟಕ ಸರ್ಕಾರದಿಂದ ಈ ಪ್ರಸ್ತಾವನೆಗೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಕಾವೇರಿ ವಿಚಾರದಲ್ಲೂ ಮೌನ ಅನುಸರಿಸಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಇದೀಗ ಮೆಟ್ರೋ ವಿಚಾರದಲ್ಲೂ ಮೌನವಾಗಿರುವುದು ಯಾಕೆ ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ.


Click it and Unblock the Notifications
